ADVERTISEMENT

ದೇವಾಲಯಗಳ ಉಳಿಸಲು ಒತ್ತಾಯ: ಸಂಸದರಿಗೆ ಮುತ್ತಿಗೆ

ಮೂಡಿಗೆರೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಸಂಸದರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 2:34 IST
Last Updated 17 ಸೆಪ್ಟೆಂಬರ್ 2021, 2:34 IST
ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಗುರುವಾರ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪ್ರತಾಪಸಿಂಹ ಅವರನ್ನು ವಿವಿಧ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿ ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಗುರುವಾರ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪ್ರತಾಪಸಿಂಹ ಅವರನ್ನು ವಿವಿಧ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿ ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.   

ಮೂಡಿಗೆರೆ: ದೇವಾಲಯಗಳನ್ನು ಉಳಿಸುವಂತೆ ಒತ್ತಾಯಿಸಿ ಸಂಸದರಾದ ತೇಜಸ್ವಿಸೂರ್ಯ ಹಾಗೂ ಪ್ರತಾಪಸಿಂಹ ಅವರಿಗೆ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಗುರುವಾರ ಮುತ್ತಿಗೆ ಹಾಕಿದರು.

ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ತೇಜಸ್ವಿಸೂರ್ಯ ಹಾಗೂ ಪ್ರತಾಪಸಿಂಹ ಬಂದಿದ್ದರು. ಕಾರ್ಯಕ್ರಮವನ್ನು ಮುಗಿಸಿ ಹಿಂತಿರುಗುವ ವೇಳೆ ಬಸ್ ನಿಲ್ದಾಣ ಸಮೀಪದ ಲಯನ್ಸ್ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿದ್ದ ವಿವಿಧ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ದಿಢೀರ್‌ ಆಗಿ ಸಂಸದರನ್ನು ತಡೆದು ಮುತ್ತಿಗೆ ಹಾಕಿದರು.

‘ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಪ್ರಕರಣ ಖಂಡನೀಯ. ದೇವಸ್ಥಾನ ಕೆಡವಲು ಬಿಡಬಾರದಿತ್ತು. ಅಧಿಕಾರಿಗಳು ವಿರೋಧ ಪಕ್ಷಗಳ ಏಜೆಂಟರಂತೆ ವರ್ತನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಆಡಳಿತದಲ್ಲಿದ್ದರೂ ದೇವಸ್ಥಾನ ರಕ್ಷಿಸಲು ಸಾಧ್ಯವಾಗದಿರುವುದು ದುರಾದೃಷ್ಟ. ನಮಗೆ ನ್ಯಾಯ ದೊರಕಿಸಿಕೊಡಬೇಕು’ ಸಂಸದರ ಎದುರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ದಿಢೀರ್ ಉಂಟಾದ ಈ ಘಟನೆಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಬಳಿಕ ಇಬ್ಬರೂ ಸಂಸದರು ಕಾರ್ಯಕರ್ತ ರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು.

ADVERTISEMENT

ಪ್ರತಿಕ್ರಿಯೆ: ಲಯನ್ಸ್ ವೃತ್ತದ ಮೇಲೇರಿ ಮಾತನಾಡಿದ ಸಂಸದ ಪ್ರತಾಪಸಿಂಹ, ‘ಸುಪ್ರೀಂ ಕೋರ್ಟ್‌ನ ಆದೇಶ ಮಾಧ್ಯಮ ಗಳ ಗಮನಕ್ಕೆ ಬಂದಿದೆ. ತುಂಬಾ ಕಡೆ ದೇವಸ್ಥಾನಗಳನ್ನು ಏಕಾಏಕಿ ತಾಲ್ಲೂಕು, ಜಿಲ್ಲಾಡಳಿತ ನೆಲಸಮ ಮಾಡಿದ್ದರಿಂದ ರಾಜ್ಯದಾದ್ಯಂತ ಭಕ್ತರಿಗೆ ನೋವಾಗಿದೆ. ಇಂತಹ ನೋವಿಗೆ ಸ್ಪಂದಿಸುವ ಮನಃಸ್ಥಿತಿ ರಾಜ್ಯದ ಮುಖ್ಯಮಂತ್ರಿಗಿದೆ. ಮುಖ್ಯಮಂತ್ರಿಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದಾರೆ. ಆದ್ದರಿಂದ ಅವರು ಹಾಗೆಯೇ ಮಾತನಾಡುತ್ತಾರೆ. ಕೋವಿಡ್‍ನಿಂದಾಗಿ ಜನರ ಪ್ರಾಣ ರಕ್ಷಣೆ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಜನ ವಿಶ್ವಾಸ ಇಟ್ಟಿದ್ದಾರೆ’ ಎಂದು ಹೇಳಿ ಸ್ಥಳದಿಂದ ತೆರಳಿದರು.

‘ರಾಜ್ಯದ ಎಲ್ಲಾ ಮಂದಿರಗಳು ಉಳಿಯಬೇಕು ಎಂಬುದೇ ಸಮಸ್ತ ಹಿಂದೂ ಹಾಗೂ ಭಕ್ತರ ಭಾವನೆ ಯಾಗಿದೆ. ಇದನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸಬೇಕೆಂಬ ನಿಲುವು ಬಿಜೆಪಿ ಯುವ ಮೋರ್ಚಾದ್ದಾಗಿದೆ. ಅದೇ ನಿಟ್ಟಿನಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ದೇವಸ್ಥಾನಗಳನ್ನು ರಕ್ಷಿಸಲು ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳುವ ನಂಬಿಕೆಯಿದೆ. ಇಂತಹ ಸಮಯದಲ್ಲಿ ರಾತ್ರೋರಾತ್ರಿ ಮಂದಿರದ ಮೇಲೆ ಪ್ರೀತಿ ಉಕ್ಕಿಸಿಕೊಂಡು ಆಷಾಢಭೂತಿತನ ತೋರಿಸುತ್ತಿರುವ ಕಾಂಗ್ರೆಸ್‍ನ ನಾಟಕವನ್ನು ಜನ ನಂಬುವುದಿಲ್ಲ. ಇಷ್ಟು ವರ್ಷ ಅವರು ಯಾರನ್ನು ಪೂಜೆ ಮಾಡಿದ್ದಾರೆ? ಮೂರ್ತಿ ಭಂಜಕರಾಗಿರುವಂತಹ ಟಿಪ್ಪುಸುಲ್ತಾನ್ ಜಯಂತಿಯನ್ನು ಯಾರು ಆಚರಣೆ ಮಾಡಿದ್ದಾರೆ ಎಂದು ಜನರು ಗಮನಿಸಿದ್ದಾರೆ. ಇದರ ನಡುವೆ ಮಂದಿರ ರಕ್ಷಣೆ ಮಾಡುವ ಹೋರಾಟದಲ್ಲಿ ಪಾಲ್ಗೊಂಡು ಲಾಭ ಪಡೆಯಲು ಹೊರಟಿದ್ದಾರೆ. ಈ ನಾಟಕ ಆಡುವುದನ್ನು ನಿಲ್ಲಿಸಬೇಕು’ ಎಂದು ತೇಜಸ್ವಿಸೂರ್ಯ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.