ಚಿಕ್ಕಮಗಳೂರು: ‘ಪೂರ್ವಿಕರು ನಮಗೆ ಉಡುಗೊರೆಯಾಗಿ ಉಳಿಸಿಕೊಟ್ಟಿರುವ ಸುಂದರ ಪರಿಸರವನ್ನು ನಾವು ಅಳಿಸಿದ್ದೇ ಆದರೆ, ಮುಂದಿನ ಜನಾಂಗಕ್ಕೆ ಅಪಾರ ಹಾನಿಯಾಗುವ ಸಾಧ್ಯತೆ ಇದೆ’ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಅರಣ್ಯ ಇಲಾಖೆ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ವನ್ಯಜೀವಿ ಸಪ್ತಾಹ-2025ರ ಅಂಗವಾಗಿ ಬುಧವಾರ ನಗರದ ತಹಶೀಲ್ದಾರ್ ಕಚೇರಿಯಿಂದ ಟೌನ್ ಮಹಿಳಾ ಸಮಾಜ ರೋಟರಿಯವರೆಗೆ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಗಿಡ– ಮರಗಳನ್ನು ಬೆಳೆಸಿದರೆ ಆರೋಗ್ಯವಂತರಾಗಿ ಬದುಕಲು ಸಾಧ್ಯವಾಗುತ್ತದೆ. ಪ್ರಾಣಿ, ಪಕ್ಷಿಗಳಿಗೂ ಸಹಾಯವಾಗುತ್ತದೆ. ಅರಣ್ಯ, ಪರಿಸರ ಉತ್ತಮವಾಗಿ ಉಳಿಸಿದರೆ ಸಕಾಲದಲ್ಲಿ ಉತ್ತಮ ಮಳೆಯಾಗುತ್ತದೆ. ದಟ್ಟವಾದ ಅರಣ್ಯವಿರುವುದರಿಂದಲೇ ಆಗುಂಬೆ, ದೇವವೃಂದದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಪರಿಸರ ಉಳಿಸುವ ಕೆಲಸವನ್ನ ಜಿಲ್ಲಾಡಳಿತ, ಅರಣ್ಯ ಇಲಾಖೆ, ಸಂಘ-ಸಂಸ್ಥೆಯೂ ಒಟ್ಟಾಗಿ ಮಾಡಬೇಕು’ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ‘ಹಿಂದೆ ನೆರಳಿಗಾಗಿ, ಹಣ್ಣು ಹಂಪಲುಗಳಿಗಾಗಿ ಮರಗಳನ್ನು ಬೆಳೆಸುತ್ತಿದ್ದರು. ಈಗ ಆ ಸಂಪ್ರದಾಯ ಮರೆಯಾಗಿದೆ. ಅಕೇಶಿಯಾ ಮತ್ತು ನೀಲಗಿರಿ ಮರವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಸರ್ಕಾರ ಆದೇಶ ನೀಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ’ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ‘ಈ ಭೂಮಿ ಮನುಷ್ಯರಿಗೆ ಸೀಮಿತವಾಗಿಲ್ಲ. ಎಲ್ಲ ಪ್ರಾಣಿ, ಪಕ್ಷಿಗಳು, ಸೂಕ್ಷ್ಮ ಜೀವಿಗಳಿಗೂ ಇದರಲ್ಲಿ ಅಧಿಕಾರವಿದೆ. ದುರಾಸೆಯಿಂದ ನಾವು ಪರಿಸರ ನಾಶ ಮಾಡಿದರೆ ಮುಂದೊಂದು ದಿನ ನಮ್ಮ ನಾಶಕ್ಕೆ ನಾವೇ ಕಾರಣರಾಗುತ್ತೇವೆ. ಆದ್ದರಿಂದ ಎಲ್ಲವನ್ನೂ ಹೊಂದಿರುವ ಸಮತೋಲಿತ ಪ್ರಕೃತಿಯನ್ನು ನಾವು ಉಳಿಸಬೇಕು’ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.