ಚಿತ್ರದುರ್ಗ: ಒಂದು ಮಾವಿನ ಗಿಡದಲ್ಲಿ 12 ತಳಿಯ ಕಸಿ ಮಾಡಿ 8 ಥರದ ಫಲ ಪಡೆಯುವಲ್ಲಿ ಚಳ್ಳಕೆರೆ ತಾಲ್ಲೂಕು ಹಾಲಿಗೊಂಡನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ಕೆ.ವಿ. ರುದ್ರಮುನಿಯಪ್ಪ– ಕೆ.ವಿ. ವಿರೂಪಾಕ್ಷಪ್ಪ ಸೋದರರು ಯಶಸ್ವಿಯಾಗಿದ್ದಾರೆ.
ಪ್ರೌಢಶಾಲೆ ಶಿಕ್ಷಕರಾಗಿ ನಿವೃತ್ತರಾಗಿರುವ ರುದ್ರಮುನಿಯಪ್ಪ ಅವರಿಗೆ ವಿಶೇಷ ಪ್ರಯೋಗ ಮಾಡಬೇಕು ಎಂಬ ತುಡಿತ ಮೊದಲಿನಿಂದಲೂ ಇತ್ತು. ನಿವೃತ್ತಿ ನಂತರ ಕೃಷಿಯಲ್ಲಿ ಒಂದಲ್ಲಾ ಒಂದು ರೀತಿಯ ಹೊಸತನ ಅಳವಡಿಸಿಕೊಂಡಿದ್ದರು. ಕಳೆದ 3–4 ವರ್ಷಗಳಿಂದ ಮಾವಿನ ಕಸಿಯಲ್ಲಿ ಪ್ರಯೋಗ ಮಾಡಿದ ಅವರು ಯಶಸ್ವಿಯೂ ಆಗಿದ್ದಾರೆ.
ಬೇನಿಷಾ ತಳಿಯ ಮಾವಿನ ಗಿಡದ ರೆಂಬೆಗಳಿಗೆ ಪ್ರತ್ಯೇಕವಾಗಿ ತೋತಾಪುರಿ, ಕೇಸರ್, ಆಲ್ಫಾನ್ಸ್, ದಶರಿ ಹಾಗೂ ಸ್ಥಳೀಯವಾಗಿ ದೊರೆಯುವ ನಾಟಿ ಮಾವಿನ ಗಿಡದ ರೆಂಬೆಗಳನ್ನು ಸೀಳುಕಸಿ ಮಾಡಿದ್ದಾರೆ. 4 ವರ್ಷಗಳಿಂದ ಗಿಡವನ್ನು ಪೋಷಿಸಿದ ನಂತರ 8 ತಳಿಯ ಮಾವಿನಕಾಯಿ ಬಿಟ್ಟಿವೆ. ಇನ್ನೂ 4 ತಳಿ ಹೂವಿನ ಹಂತದಲ್ಲಿದ್ದು, ಒಟ್ಟಾರೆ 12 ತಳಿಯ ಹಣ್ಣು ಪಡೆಯಲು ಉತ್ಸುಕರಾಗಿದ್ದಾರೆ. ಸದ್ಯಕ್ಕೆ ಬಂದಿರುವ 8 ತಳಿಯ ಕಾಯಿ ಕಟಾವು ಹಂತಕ್ಕೆಬಂದಿವೆ.
ಸೋದರರ ತೋಟದಲ್ಲಿ ಒಟ್ಟು 100 ಮಾವಿನ ಗಿಡಗಳಿವೆ. ಬಹುತೇಕ ಎಲ್ಲಾ ಜಾತಿಯ ಗಿಡಗಳು ಹಾಗೂ ಸ್ಥಳೀಯ ನಾಟಿ ತಳಿಯ ಗಿಡಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ಕೃಷಿ ವಿ.ವಿ, ಸಂಶೋಧನಾ ಕೇಂದ್ರಗಳಲ್ಲಿ ಒಂದೇ ಮಾವಿನ ಗಿಡಕ್ಕೆ ಹಲವು ರೀತಿಯ ಗಿಡಗಳನ್ನು ಸೀಳುಕಸಿ ಮಾಡುವುದನ್ನು ಕಂಡಿದ್ದ ರುದ್ರಮುನಿಯಪ್ಪ ಅವರು ತಮ್ಮ ಜಮೀನಿನಲ್ಲೂ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.
‘ಒಂದು ಗಿಡಕ್ಕೆ ಹಲವು ತಳಿಯ ಸೀಳುಕಸಿ ಮಾಡಿ ಪೋಷಿಸುವುದು ಸುಲಭವಲ್ಲ. ಹೀಗೊಂದು ಪ್ರಯತ್ನ ಮಾಡಬೇಕು ಎಂಬ ಕನಸಿತ್ತು. ಈಗ ಆ ಕನಸು ನನಸಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ತೋಟಕ್ಕೆ ಬಂದು ನಮ್ಮ ಪ್ರಯತ್ನವನ್ನು ಮೆಚ್ಚಿಕೊಂಡರು’ ಎಂದು ರುದ್ರಮುನಿಯಪ್ಪ ಹೇಳಿದರು.
ಈ ಸೋದರರು ಸಾಯವಯ ಗೊಬ್ಬರವನ್ನೇ ಬಳಸುತ್ತಿದ್ದಾರೆ. ಇರುವ 6 ಎಕರೆ ಜಮೀನಿನಲ್ಲಿ ಹಲವು ರೀತಿಯ ಹಣ್ಣು, ತರಕಾರಿ, ಹೂವಿನ ಗಿಡ ಬೆಳೆಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ, ಮಳೆ ಕಾರಣದಿಂದ ಪಕ್ಕದಲ್ಲೇ ಇರುವ ವೇದಾವತಿ ನದಿ ಈಗ ಜೀವ ಪಡೆದುಕೊಂಡಿದ್ದು ರೈತರ ಬಾಳಿಗೆ ಬೆಳಕು ತಂದಿದೆ. ಜೊತೆಗೆ ಕೊಳವೆ ಬಾವಿಯನ್ನೂ ಹೊಂದಿದ್ದಾರೆ.
ಸಮಗ್ರ ಕೃಷಿಯಲ್ಲಿ ಭಿನ್ನ ಪ್ರಯೋಗ ಮಾಡಿರುವ ಅವರು ಅಡಿಕೆ, ಸೀಬೆ, ಮಾವು, ರೇಷ್ಮೆ ಬೆಳೆ ಜೊತೆಗೆ ವಿವಿಧ ರೀತಿಯ ಕೃಷಿ ಮಾಡಿದ್ದಾರೆ. ಬಾಳೆ, ಜೇನು ಸಾಕಣೆ ಹಾಗೂ ಆಹಾರ ಧಾನ್ಯಗಳಾದ ಭತ್ತ, ರಾಗಿ, ಜೋಳ ಸಿರಿಧಾನ್ಯಗಳನ್ನೂ ಬೆಳೆದಿದ್ದಾರೆ. 1,400 ಅಡಿಕೆ ಮರಗಳಿವೆ. ಅವುಗಳ ನಡುವೆ ಹೊನ್ನೆ, ಬೀಟೆ, ಶ್ರೀಗಂಧ, ಸರ್ವೆ ಗಿಡಗಳನ್ನೂ ಬೆಳೆಸಿದ್ದಾರೆ. ಅಷ್ಟೇ ಅಲ್ಲದೇ ಹಣ್ಣಿನ ಗಿಡಗಳಾದ ಸೀತಾಫಲ, ಲಕ್ಷ್ಮಣ ಫಲ, ನಿಂಬೆಗಿಡಗಳನ್ನೂ ಬೆಳೆಸಿದ್ದಾರೆ.
ಲೈವ್ ಮಲ್ಚಿಂಗ್, ಡೆಡ್ ಮಲ್ಚಿಂಗ್ ವಿಧಾನದಲ್ಲಿ ಜಮೀನಿನಲ್ಲೇ ದೊರೆಯವ ಸಸಿ, ಕಳೆ, ಹುಲ್ಲು, ಕಸ, ಕಡ್ಡಿಯನ್ನು ಬಳಸಿ ಗೊಬ್ಬರ ತಯಾರಿಸಿಕೊಳ್ಳುತ್ತಾರೆ. ಬಯೊ ಡೈಜೆಸ್ಟಿಂಗ್ ವಿಧಾನದ ಮೂಲಕ ತ್ಯಾಜ್ಯ ವಸ್ತುಗಳಿಗೆ ಗೊಬ್ಬರ ರೂಪ ನೀಡಿದ್ದಾರೆ. ಜೊತೆಗೆ ಮನೆಯಲ್ಲಿ 25 ಜಾನುವಾರುಗಳಿದ್ದು ಅವೂ ಜಮೀನಿಗೆ ಗೊಬ್ಬರ ಒದಗಿಸುತ್ತವೆ.
ಎಫ್‌ಪಿಒಯಿಂದ ₹1 ಕೋಟಿ ವಹಿವಾಟು
ರೈತ ಕೆ.ವಿ.ಕೆ.ವಿ.ರುದ್ರಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಸ್ಥಾಪಿಸಲಾಗಿದ್ದು ಇದರಲ್ಲಿ 1000 ರೈತರು ಸದಸ್ಯತ್ವ ಪಡೆದಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸಂಸ್ಥೆ ವತಿಯಿಂದಲೇ ಮಾರುಕಟ್ಟೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಸ್ಥೆ ವಾರ್ಷಿಕವಾಗಿ ₹ 1 ಕೋಟಿವರೆಗೆ ವಹಿವಾಟು ನಡೆಸುತ್ತಿದೆ.
‘ಆಯಾ ಕಾಲಕ್ಕೆ ರೈತರು ಬೆಳೆಯುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವಲ್ಲಿ ನಮ್ಮ ಎಫ್‌ಪಿಒ ಪ್ರಯತ್ನಿಸುತ್ತದೆ. ಒಗ್ಗಟ್ಟಿನಿಂದ ಎಲ್ಲಾ ರೈತರೂ ಲಾಭ ಗಳಿಸಬೇಕು ಎಂಬುದು ನಮ್ಮ ಧ್ಯೇಯವಾಗಿದೆ’ ಎಂದು ರೈತ ರುದ್ರಮುನಿಯಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.