ADVERTISEMENT

ತಾಮ್ರಕ್ಕೆ ಹೆಚ್ಚಿದ ಬೇಡಿಕೆ: ಚಿತ್ರದುರ್ಗದ ಇಂಗಳದಾಳು ಗಣಿ ಪುನರಾರಂಭಕ್ಕೆ ಅಧ್ಯಯನ

ಚಿನ್ನದ ಬೆಲೆ ಏರಿಕೆಯಿಂದ ತಾಮ್ರಕ್ಕೆ ಹೆಚ್ಚಿದೆ ಬೇಡಿಕೆ, ಮತ್ತೆ ಆರಂಭಗೊಳ್ಳುವುದೇ ಗಣಿ?

ಎಂ.ಎನ್.ಯೋಗೇಶ್‌
Published 22 ಫೆಬ್ರುವರಿ 2026, 23:32 IST
Last Updated 22 ಫೆಬ್ರುವರಿ 2026, 23:32 IST
<div class="paragraphs"><p>ಚಿತ್ರದುರ್ಗದ ಹೊರವಲಯದಲ್ಲಿರುವ ಇಂಗಳದಾಳು ತಾಮ್ರ ಗಣಿ ಪ್ರದೇಶದಲ್ಲಿದ್ದ ಕಚೇರಿಯ ಕಟ್ಟಡದ ನೋಟ </p></div>

ಚಿತ್ರದುರ್ಗದ ಹೊರವಲಯದಲ್ಲಿರುವ ಇಂಗಳದಾಳು ತಾಮ್ರ ಗಣಿ ಪ್ರದೇಶದಲ್ಲಿದ್ದ ಕಚೇರಿಯ ಕಟ್ಟಡದ ನೋಟ

   

ಪ್ರಜಾವಾಣಿ ಚಿತ್ರ; ಚಂದ್ರಪ್ಪ ವಿ

ಚಿತ್ರದುರ್ಗ: ಚಿನ್ನದ ಬೆಲೆ ಗಗನಕ್ಕೇರಿರುವ ಹೊತ್ತಿನಲ್ಲಿ ಚಿನ್ನ ತಯಾರಿಕೆಗೆ ಪ್ರಮುಖ ಕಚ್ಚಾ ವಸ್ತುವಾಗಿರುವ ತಾಮ್ರಕ್ಕೆ ತೀವ್ರ ಬೇಡಿಕೆ ಸೃಷ್ಟಿಯಾಗಿದ್ದು, ನಗರದ ಹೊರವಲಯದಲ್ಲಿರುವ ಇಂಗಳದಾಳು ತಾಮ್ರ ಗಣಿಯಲ್ಲಿ ಗಣಿಗಾರಿಕೆ ಪುನಾರಂಭಿಸುವ ಸಂಬಂಧ ಕಾರ್ಯಸಾಧ್ಯತಾ ಪರೀಕ್ಷೆ ಆರಂಭಗೊಂಡಿದೆ.

ADVERTISEMENT

ಇಂಗಳದಾಳು ಗುಡ್ಡದಲ್ಲಿ 1994ರವರೆಗೂ ವ್ಯಾಪಕ ತಾಮ್ರ ಗಣಿಗಾರಿಕೆ ನಡೆದಿತ್ತು. ತಾಮ್ರಕ್ಕೆ ಬೇಡಿಕೆ ಕಡಿಮೆಯಾದ ಕಾರಣ 1990ರ ದಶಕದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಅದೇ ಗಣಿಯಲ್ಲಿ ಮತ್ತೆ ಗಣಿಗಾರಿಕೆ ಸಾಧ್ಯವೇ? ಎಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಮೆಕಾನ್‌ ಇಂಡಿಯಾ ಕಂಪನಿ ತಜ್ಞರು ಅಧ್ಯಯನ ನಡೆಸಿದ್ದಾರೆ.

ಶಾತವಾಹನರ ಕಾಲದಲ್ಲೇ ಚಂದ್ರವಳ್ಳಿ ಪ್ರದೇಶದಲ್ಲಿ ತಾಮ್ರದ ನಾಣ್ಯ ಠಂಕಿಸಲಾಗುತ್ತಿತ್ತು. ಇಲ್ಲಿ ಚಿನ್ನ ಸಿಗುತ್ತಿದ್ದ ಕಾರಣ ಚಿನ್ನದ ಗಿರಿ ಎನ್ನಲಾಗುತ್ತಿತ್ತು. ನಂತರ ಚಿತ್ರದುರ್ಗವಾಯಿತು ಎಂದು ಇತಿಹಾಸ ಹೇಳುತ್ತದೆ. ಶಾತವಾಹನರ ಕಾಲದ ತಾಮ್ರದ ನಾಣ್ಯಗಳು ಈಗಲೂ ಪುರಾತತ್ವ ಇಲಾಖೆ ವಸ್ತು ಸಂಗ್ರಹಾಲದಲ್ಲಿವೆ.

ರಾಜ್ಯ ಸರ್ಕಾರ 1965ರಲ್ಲಿ ತಾಮ್ರದ ಗಣಿಗಾರಿಕೆ ಆರಂಭಿಸಿತು. 1994ರವರೆಗೆ ಇಲ್ಲಿ ಹೊರತೆಗೆದ ತಾಮ್ರ ವಿವಿಧೆಡೆ ರವಾನೆಯಾಗುತ್ತಿತ್ತು. ಹಿಂದೂಸ್ಥಾನ್ ಕಾಪರ್ ಲಿಮಿಟೆಡ್ (ಎಚ್‌ಸಿಎಲ್‌) ತಾಮ್ರ ಖರೀದಿಸುತ್ತಿತ್ತು. ನಂತರ ತಾಮ್ರಕ್ಕೆ ಬೇಡಿಕೆ ಕುಸಿದ ಕಾರಣ ಎಚ್‌ಸಿಲ್‌ ಖರೀದಿ ನಿಲ್ಲಿಸಿತು, ಗಣಿಗಾರಿಕೆ ನಿಂತು ಹೋಯಿತು.

ಬಳಿಕ ತಾಮ್ರದ ಗಣಿಯು ಹಟ್ಟಿ ಚಿನ್ನದ ಗಣಿ ನಿಯಮಿತ (ಎಚ್‌ಜಿಎಂಎಲ್‌)ದೊಂದಿಗೆ ವಿಲೀನಗೊಂಡಿತು. 1992ರಿಂದ 2002ರವರೆಗೆ ಎಚ್‌ಜಿಎಂಎಲ್‌ ಚಿತ್ರದುರ್ಗ ಚಿನ್ನದ ಗಣಿ (ಸಿಜಿಯು) ಹೆಸರಲ್ಲಿ ಅಲ್ಪಪ್ರಮಾಣದಲ್ಲಿ ಚಿನ್ನವನ್ನೂ ತೆಗೆಯಿತು. ನಂತರ ಅದೂ ಸ್ಥಗಿತಗೊಂಡಿತ್ತು.

ಗಣಿ ಪ್ರದೇಶದಲ್ಲಿರುವ ಟವರ್‌

ಕಳೆದ ಸೆಪ್ಟೆಂಬರ್‌ 9ರಂದು ಶಾಸಕ ಕೆ.ಸಿ. ವೀರೇಂದ್ರ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ತಾಮ್ರ ಗಣಿ ಪುನರಾರಂಭಕ್ಕೆ ಕೋರಿದ್ದರು. ಈ ಕುರಿತು ಪರಿಶೀಲಿಸುವಂತೆ ಸಚಿವರು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖೆಯನ್ನು ಕೋರಿದ್ದರು. ಸಚಿವ ಕಿಶನ್‌ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಗಣಿಗಾರಿಕೆ ಆರಂಭದ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸೂಚಿಸಿದ್ದರು.

ಗಣಿ ಪ್ರದೇಶದ ನೋಟ

ಕಳೆದೆರಡು ತಿಂಗಳಿಂದ ಕಾರ್ಯಸಾಧ್ಯತಾ ಪರೀಕ್ಷೆ ಆರಂಭಗೊಂಡಿದೆ. ಗಣಿ ಸಮೀಪದಲ್ಲಿಯೇ ಘೋಷಿತ ಅರಣ್ಯ, ಜೋಗಿಮಟ್ಟಿ ವನ್ಯಜೀವಿ ಧಾಮವೂ ಇರುವುದರಿಂದ ಇಲ್ಲಿ ತಾಮ್ರಗಣಿ ಪುನಾರಂಭಿಸಬಹುದೇ ಎಂಬ ಕುರಿತೂ ಅಧ್ಯಯನ ನಡೆಯುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ನಿಯಮಿತದ ಅಧಿಕಾರಿಗಳು ತಿಳಿಸಿದರು.

ಗಣಿ ಪ್ರದೇಶದ ನೋಟ
ಎರಡು ತಿಂಗಳಲ್ಲಿ ಕಾರ್ಯಸಾಧ್ಯತಾ ಪರೀಕ್ಷೆ ವರದಿ ಬರಲಿದೆ. ಅದನ್ನು ಆಡಳಿತ ಮಂಡಳಿ ಸಭೆಯಲ್ಲಿ ಅಂಗೀಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು
ಸಂಜೀವ್‌ ಸೋಲಂಕರ್‌ ಭೂ ಅನ್ವೇಷಣಾ ವ್ಯವಸ್ಥಾಪಕ ಹಟ್ಟಿ ಚಿನ್ನದ ಗಣಿ ನಿಯಮಿತ
ಹೊಸ ತಂತ್ರಜ್ಞಾನ ಅಳವಡಿಕೆ ಅವಶ್ಯ
‘ಇಂಗಳದಾಳು ತಾಮ್ರ ಗಣಿ ಉತ್ತುಂಗದ ಸ್ಥಿತಿಯನ್ನು ಕಂಡಿದ್ದೇನೆ. 2 ಕಿ.ಮೀ ವ್ಯಾಪ್ತಿಯ ಗಣಿ ಸುರಂಗದೊಳಗೆ ಓಡಾಡಿದ್ದೇನೆ. ಈಗಲೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರಿಸರಕ್ಕೆ ಧಕ್ಕೆಯಾಗದಂತೆ ಗಣಿಗಾರಿಕೆ ಸಾಧ್ಯವಿದೆ. ಇದು ಸರ್ಕಾರಕ್ಕೆ ಆರ್ಥಿಕ ಶಕ್ತಿಯಾಗಲಿದೆ ಉದ್ಯೋಗಕ್ಕೂ ದಾರಿಯಾಗಲಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಭೂವಿಜ್ಞಾನಿ ಜೆ.ಪರಶುರಾಮ ಅವರು ಈ ಕುರಿತು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.