ADVERTISEMENT

ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗ ದೀಕ್ಷೆ ಪಡೆದ ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 6:30 IST
Last Updated 4 ಆಗಸ್ಟ್ 2022, 6:30 IST
ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗ ದೀಕ್ಷೆ ಪಡೆದ ರಾಹುಲ್ ಗಾಂಧಿ
ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗ ದೀಕ್ಷೆ ಪಡೆದ ರಾಹುಲ್ ಗಾಂಧಿ   

ಚಿತ್ರದುರ್ಗ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗ ದೀಕ್ಷೆ ಪಡೆದರು. ಕೊರಳಿಗೆ ಲಿಂಗಧಾರಣೆ ಮಾಡಿಕೊಂಡು ವಿಭೂತಿ ಧರಿಸಿದರು.

ಮುರುಘಾ ಮಠದಲ್ಲಿ ಬುಧವಾರ ನಡೆದ ಮಾಠಾಧೀಶರೊಂದಿಗಿನ ಸಭೆಯಲ್ಲಿ ಅವರು ಬಸವತತ್ವ ಪರಿಪಾಲನೆಯ ವಾಗ್ದಾನ ನೀಡಿದರು. ಲಿಂಗಪೂಜೆಯ ವಿಧಿವಿಧಾನಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲು ಮಠದ ಪ್ರತಿನಿಧಿಯೊಬ್ಬರನ್ನು ತಮ್ಮೊಂದಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡರು.

‘ರಾಹುಲ್ ಗಾಂಧಿ ಅವರು ಮಠ ಹಾಗೂ ಗುರು ಪರಂಪರೆಯ ಬಗ್ಗೆ ಪ್ರಶ್ನಿಸಿದರು. ಬಸವತತ್ವ ಹಾಗೂ ಕಾಯಕ ಪ್ರಜ್ಞೆ ಬಗ್ಗೆ ವಿವರಿಸಿದೆವು. ಲಿಂಗದೀಕ್ಷೆಯ ಕುರಿತು ಮಾಹಿತಿ ನೀಡಿ, ಅಂಗೈನಲ್ಲಿ ಇಷ್ಟಲಿಂಗ ಇಟ್ಟುಕೊಂಡು ಪ್ರಾತ್ಯಕ್ಷಿಕೆ ತೋರಿಸಿದೆವು. ಇದರಿಂದ ಪ್ರೇರಣೆಗೊಂಡ ಅವರು ಲಿಂಗದೀಕ್ಷೆ ಪಡೆಯುವ ಇಚ್ಛೆ ವ್ಯಕ್ತಪಡಿಸಿದರು’ ಎಂದು ಶಿವಮೂರ್ತಿ ಮುರುಘಾ ಶರಣರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಲಿಂಗಪೂಜೆಯ ಮೂರು ಹಂತಗಳನ್ನು ವಿವರಿಸಿದೆವು. ಲಿಂಗವನ್ನು ದೇಹಕ್ಕೆ ಧಾರಣೆ ಮಾಡಿಕೊಂಡು ವಿಭೂತಿ ಧರಿಸಿದರು. ಬಸವತತ್ವ ಪರಿಪಾಲನೆ ಮಾಡುವುದಾಗಿ ಸ್ವಯಂಪ್ರೇರಣೆಯಿಂದ ವಾಗ್ದಾನ ನೀಡಿದ್ದಾರೆ’ ಎಂದು ವಿವರಿಸಿದರು.

ಸಭೆಯಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಷಡಾಕ್ಷರಮುನಿ ಸ್ವಾಮೀಜಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.