
ಚಿತ್ರದುರ್ಗ: ‘ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿದ ಜಿಲ್ಲೆಯ 769 ರೈತರಿಗೆ ₹ 1.9 ಕೋಟಿ ಪರಿಹಾರ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ವಿತರಣೆ ಸಂಬಂಧ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡು ನಂತರ ಮಾತನಾಡಿದರು.
‘ಮುಖ್ಯಮಂತ್ರಿಗಳ ಸೂಚನೆಯಂತೆ ನಷ್ಟ ಪರಿಹಾರ ನೀಡಲಾಗುತ್ತಿದೆ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರದ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡಲಿದೆ. ಪ್ರತಿ ಹೆಕ್ಟೇರ್‌ಗೆ ನಿಗದಿಪಡಿಸಿರುವ ಇನ್‍ಪುಟ್ ಸಬ್ಸಿಡಿ ಮೊತ್ತಕ್ಕೆ, ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಮಾತ್ರ ಅನ್ವಯವಾಗುವಂತೆ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ ₹ 8,500 ಇನ್‍ಪುಟ್ ಸಬ್ಸಿಡಿ ಸೇರಿಸಿ ಪರಿಹಾರ ಮೊತ್ತ ಪಾವತಿಸಲಿದೆ’ ಎಂದರು.
‘ಇದರಿಂದಾಗಿ ಜಿಲ್ಲೆಯ ರೈತರು ಕೇಂದ್ರ ಸರ್ಕಾರದ ನಿಯಮದಂತೆ ಪಡೆಯುವ ಪರಿಹಾರ ಮೊತ್ತಕ್ಕೆ, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪರಿಹಾರ ನೀಡಲಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ವಿವಿಧೆಡೆ ಬೆಳೆ ಹಾನಿಯಾಗಿತ್ತು. ಕೃಷಿ, ತೋಟಗಾರಿಕೆ ಬೆಳೆಗಳ ಬಗ್ಗೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳನ್ನು ಒಳಗೊಂಡ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ವರದಿ ನೀಡಿದ್ದಾರೆ. ಅದರನ್ವಯ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಇದೀಗ ಪರಿಹಾರ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ’ ಎಂದರು.
‘ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಒಟ್ಟು 769 ರೈತರ 467.16 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿರುವ ಬಗ್ಗೆ ಸಮೀಕ್ಷಾ ತಂಡ ವರದಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ಮೊತ್ತ 70.5 ಲಕ್ಷ ಒದಗಿಸಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ ಬೆಳೆಯಾನುಸಾರ ಪ್ರತಿ ₹ 8,500 ಇನ್‍ಪುಟ್ ಸಬ್ಸಿಡಿ ₹ 39.88 ಲಕ್ಷ ಸೇರಿಸಲಾಗುವುದು. ಒಟ್ಟಾರೆ ₹ 1.9 ಕೋಟಿ ಪರಿಹಾರ ಪಾವತಿ ಮಾಡಲಾಗುವುದು’ ಎಂದರು.
‘ಬೆಳೆ ಹಾನಿ ಪರಿಹಾರಕ್ಕಾಗಿ ಇನ್‍ಪುಟ್ ಸಬ್ಸಿಡಿಯ ದರಗಳನ್ನು ಪ್ರತಿ ಹೆಕ್ಟೇರ್‌ಗೆ ಮಳೆಯಾಶ್ರಿತ ಬೆಳೆ ₹ 8,500 ರಿಂದ ₹ 17,000, ನೀರಾವರಿ ಬೆಳೆಗಳಿಗೆ ₹ 17,000 ರಿಂದ ₹ 25,500 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ₹ 22,500 ರಿಂದ ₹ 31,000ಕ್ಕೆ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಿಸಿದಂತಾಗಿದೆ. ಇದರಿಂದ ನಷ್ಟ ಅನುಭವಿಸಿದ ರೈತರಿಗೆ ಅನುಕೂಲವಾಗಲಿದೆ’ ಎಂದರು.
‘ಬೆಳೆ ಹಾನಿ ಪರಿಹಾರ ಮೊತ್ತವನ್ನು ಸಂಬಂಧಿಸಿದ ರೈತರಿಗೆ ತ್ವರಿತವಾಗಿ ಪಾವತಿಯಾಗಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ನಷ್ಟ ಅನುಭವಿಸಿದ ರೈತರಿಂದ ಯಾವುದೇ ದೂರುಗಳು ಬಾರದಂತೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಉಪ ಕೃಷಿ ನಿರ್ದೇಶಕ ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.