ADVERTISEMENT

ಚಿತ್ರದುರ್ಗ: ಗಂಗಾಪೂಜೆಗೆ ಜೋಡೆತ್ತಿನ ಬಂಡಿ ಸಾಲು

70 ಕಿ.ಮೀ ದೇವರು ಹೊತ್ತು ಸಾಗಿದ ಭಕ್ತರು, ನೊಣವಿನಹಳ್ಳದಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 16:06 IST
Last Updated 22 ಮಾರ್ಚ್ 2021, 16:06 IST
ಹಿರಿಯೂರು ತಾಲ್ಲೂಕಿನ ಬಸಪ್ಪನಮಾಳಿಗೆ ಗ್ರಾಮಕ್ಕೆ ಸಾಗುತ್ತಿದ್ದ ಜೋಡೆತ್ತಿನ ಬಂಡಿಯ ಸಾಲು ಚಿತ್ರದುರ್ಗ ತಾಲ್ಲೂಕಿನ ಮದಕರಿಪುರದ ಸಮೀಪ ಕಂಡುಬಂದಿದ್ದು ಹೀಗೆ.ಚಿತ್ರ–ನಿಸರ್ಗ ಗೋವಿಂದರಾಜು
ಹಿರಿಯೂರು ತಾಲ್ಲೂಕಿನ ಬಸಪ್ಪನಮಾಳಿಗೆ ಗ್ರಾಮಕ್ಕೆ ಸಾಗುತ್ತಿದ್ದ ಜೋಡೆತ್ತಿನ ಬಂಡಿಯ ಸಾಲು ಚಿತ್ರದುರ್ಗ ತಾಲ್ಲೂಕಿನ ಮದಕರಿಪುರದ ಸಮೀಪ ಕಂಡುಬಂದಿದ್ದು ಹೀಗೆ.ಚಿತ್ರ–ನಿಸರ್ಗ ಗೋವಿಂದರಾಜು   

ಚಿತ್ರದುರ್ಗ: ಷಟ್ಪಥ ಹೆದ್ದಾರಿಯಲ್ಲಿ ಘಲ್‌ ಘಲ್‌ ಎಂಬ ಶಬ್ದ ನಿಯಮಿತವಾಗಿ ಕಿವಿಗೆ ಬೀಳುತ್ತಿದ್ದಂತೆ ಕಣ್ಣೆತ್ತಿ ನೋಡುತ್ತಿದ್ದ ಜನರು ಚಕಿತರಾಗಿ ನಿಲ್ಲುತ್ತಿದ್ದರು. ಜೋಡೆತ್ತಿನ ಬಂಡಿಗಳ ಸಾಲು ಮನಸಿಗೆ ಮುದ ನೀಡುತ್ತಿತ್ತು. ದೇವರನ್ನು ತಲೆ ಮೇಲೆ ಹೊತ್ತವರು ಸಮೀಪದಲ್ಲೇ ಬರಿಗಾಲಲ್ಲಿ ಸಾಗುತ್ತಿದ್ದರು.

ಹಿರಿಯೂರು ತಾಲ್ಲೂಕಿನ ಬಸಪ್ಪನಮಾಳಿಗೆ ಗ್ರಾಮದ ನೊಣವಿನಹಳ್ಳದ ಗಂಗಾಪೂಜೆಗೆ ಬಂದಿದ್ದ ಭಕ್ತರು ಸಂಸ್ಕೃತಿಯನ್ನು ನೆನಪಿಸಿದರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಸಕಲಾಪುರ ಗೊಲ್ಲರಹಟ್ಟಿ ಹಾಗೂ ದಾವಣಗೆರೆ ಜಿಲ್ಲೆಯ ಜಮ್ಮಾಪುರ ಗೊಲ್ಲರಹಟ್ಟಿಯ ಜನರು ಬಂಡಿಯಲ್ಲಿ ಸಾಗುತ್ತಿದ್ದರೆ ಗೊಲ್ಲ ಸಮುದಾಯದ ಸಂಸ್ಕೃತಿಯೇ ಚಲಿಸಿದಂತೆ ಭಾಸವಾಗುತ್ತಿತ್ತು.

ಗುಗ್ಗರಿ ಹಬ್ಬದ ಅಂಗವಾಗಿ ಗಂಗಾಪೂಜೆ ನೆರವೇರಿಸುವುದು ಇವರ ವಾಡಿಕೆ. ಹತ್ತಾರು ವರ್ಷಗಳಿಗೊಮ್ಮೆ ಇಂತಹ ಧಾರ್ಮಿಕ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ. ಸಕಲಾಪುರ ಗೊಲ್ಲರಹಟ್ಟಿಯ ವೀರನಾಗಪ್ಪಸ್ವಾಮಿ ಹಾಗೂ ಜಮ್ಮಾಪುರ ಗೊಲ್ಲರಹಟ್ಟಿಯ ಮೈಲಣ್ಣಸ್ವಾಮಿಯನ್ನು ಬಸಪ್ಪನಮಾಳಿಗೆಯ ನೊಣವಿನಹಳ್ಳಕ್ಕೆ ತಂದು ಗಂಗಾಪೂಜೆ ನೆರವೇರಿಸುವ ಕೈಂಕರ್ಯ ತಲೆತಲಾಂತರದಿಂದ ನಡೆದುಬಂದಿದೆ. ಇದಕ್ಕೆ ಜೋಡೆತ್ತಿನ ಬಂಡಿಯಲ್ಲಿ ಬರುವುದು ವಾಡಿಕೆ.

ADVERTISEMENT

90 ವರ್ಷದ ವೃದ್ಧರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಎಲ್ಲರೂ ಗಂಗಾಪೂಜೆಗೆ ಬಂದಿದ್ದರು. ಎರಡು ಗ್ರಾಮದ 65 ಜೋಡೆತ್ತಿನ ಗೂಡುಗಾಡಿಗಳು ಭಕ್ತರನ್ನು ಹೊತ್ತು ತಂದಿದ್ದವು. ತುರುವನೂರು ಹೊಬಳಿಯ ಮೂಲಕ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದ ಗಾಡಿಗಳ ಸಾಲು ಕಡಬನಕಟ್ಟೆ, ಡಿ.ಎಸ್‌.ಹಳ್ಳಿ ಮಾರ್ಗವಾಗಿ ಬಸಪ್ಪನಮಾಳಿಗೆ ತಲುಪಿತು. 75 ಕಿ.ಮೀ ದೂರದ ದಾರಿಯನ್ನು ಸುಮಾರು ಮೂರು ದಿನಗಳ ಕಾಲ ಕ್ರಮಿಸಲಾಗಿದೆ.

ಮಾರ್ಗ ಮಧ್ಯದಲ್ಲಿ ವಾಸ್ತವ್ಯ ಹೂಡಲು ಸಕಲ ವ್ಯವಸ್ಥೆಯೂ ಜೋಡೆತ್ತಿನ ಬಂಡಿಯಲ್ಲಿದ್ದವು. ಸಜ್ಜೆ ರೊಟ್ಟಿ, ಗೂರೆಳ್ಳು ಚಟ್ನಿಪುಡಿ, ಮೊಸರು ಬುತ್ತಿಯ ಊಟ ಸವಿಯುತ್ತಿದ್ದರು. ಮಾರ್ಗ ಮಧ್ಯದ ಗ್ರಾಮಗಳ ಜನರು ಇವರಿಗೆ ನೆರವಾದರು. ದೇವರ ಮೂರ್ತಿಗಳನ್ನು ತಲೆಯ ಮೇಲೆ ಹೊತ್ತಿದ್ದ ಭಕ್ತರು ಜೋಡೆತ್ತಿನ ಬಂಡಿಗಳೊಂದಿಗೆ ಹೆಜ್ಜೆಹಾಕಿದರು. ಭಾನುವಾರ ಸಂಜೆ ನೊಣವಿನಹಳ್ಳ ತಲುಪಿ ಚಿಲುಮೆಯ ನೀರಿನಲ್ಲಿ ಗಂಗಾಪೂಜೆ ನೆರವೇರಿಸಿದರು. ಸೋಮವಾರ ಮತ್ತೆ ಇದೇ ಮಾರ್ಗವಾಗಿ ಊರುಗಳಿಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.