
ಹೊಳಲ್ಕೆರೆ: ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪ ಸ್ವಾಮಿಯ ಜಾತ್ರೆ ಡಿ. 9ರಂದು ನಡೆಯಲಿದೆ.
ಜಾತ್ರೆಯ ಅಂಗವಾಗಿ ಡಿ. 8ರಿಂದ 10ರವರೆಗೆ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ರಾಜ್ಯದ ನಾನಾ ಭಾಗಗಳ ಸಾವಿರಾರು ಜನ ಭಾಗವಹಿಸುವರು.
ಜಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಕಲೆಗಳು ಅನಾವರಣಗೊಳ್ಳಲಿವೆ. ಪಲ್ಲಕ್ಕಿ ಉತ್ಸವ, ಕದಳಿ ಪೂಜೆ, ಎಲೆ ಪೂಜೆ, ಉಗ್ಗದ ಗಡಿಗೆ, ಹಾಲುಕಂಬಿ, ಹರಗಿನ ಮುದ್ರೆ, ಕಂಚಿನ ಕಡಗಗಳಿಗೆ ವಿಶೇಷ ಪೂಜೆಗಳು ನಡೆಯಲಿವೆ. ಮಹಿಳೆಯರ ವೀರಗಾಸೆ, ಕೀಲು ಕುದುರೆ, ಪೂಜಾಕುಣಿತ, ಕರಡಿ ಮಜಲು, ನಂದಿ ಧ್ವಜ ಕುಣಿತ, ಸೋಬಾನೆ ಪದ, ಮಂಡ್ಯದ ಪೂಜಾ ಕುಣಿತ, ಜನಪದ ಹಾಡು, ಲಂಬಾಣಿ ನೃತ್ಯ ಮತ್ತಿತರ ಕಲಾಪ್ರಕಾರಗಳು ಜಾತ್ರೆಯಲ್ಲಿ ಮೇಳೈಸಲಿವೆ.
ಸೋಮನ ಕುಣಿತ, ಗೊರವರ ಕುಣಿತ, ಗಣೆಯಲ್ಲಿ ಜುಂಜಪ್ಪನ ಹಾಡುಗಳು ವಿಶೇಷವಾಗಿರುತ್ತವೆ. ಟಗರು ಕಾಳಗ, ಪೌಳಿಯ ಸುತ್ತ ಕುರಿಗಳ ಪ್ರದಕ್ಷಿಣೆ, ಕಂಬಳಿ ಉದ್ದದ ನೆಗೆತ ಪ್ರದರ್ಶನ, ಪಾನಕ ಬಂಡಿಗಳ ಮೆರವಣಿಗೆ ಉಂಡೆ ಮಂಡೆ, ಮಹಿಳೆಯರ ಪೂರ್ಣ ಕುಂಭ ಮೆರವಣಿಗೆ, ಗುಗ್ಗಳ ಭಕ್ತರನ್ನು ಸೆಳೆಯಲಿವೆ.
ಹರಕೆ ಹೊತ್ತ ಭಕ್ತರು ದೂರದ ಊರುಗಳಿಂದ ಮುಡುಪು, ಮೀಸಲು ಕಟ್ಟಿಕೊಂಡು ಕಾಲ್ನಡಿಗೆಯಲ್ಲಿಯೂ ಬರುತ್ತಾರೆ. ಕೆಲವರು ಎತ್ತಿನ ಗಾಡಿಗಳಲ್ಲಿ ಜಾತ್ರೆಗೆ ಬರುತ್ತಾರೆ.
‘ಇದು ಜಿಲ್ಲೆಯಲ್ಲಿಯೇ 2ನೇ ಅತಿ ದೊಡ್ಡ ಜಾತ್ರೆಯಾಗಿದ್ದರೂ ಸರ್ಕಾರ ಯಾವುದೇ ಸೌಲಭ್ಯ ನೀಡಿಲ್ಲ. ಜಾತ್ರೆ ಸಮಯದಲ್ಲಾದರೂ ಭಕ್ತರಿಗೆ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ತಿರುಮಲ ಜುಂಜಪ್ಪ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಜಿ.ಕುಬೇಂದ್ರಪ್ಪ, ಉಪಾಧ್ಯಕ್ಷ ಚಿತ್ತಪ್ಪ, ಎನ್.ರವಿ, ಅಂಗಡಿ ಸಿದ್ದಪ್ಪ, ಎಸ್.ನಾಗರಾಜಪ್ಪ, ಓಂಕಾರಪ್ಪ, ಗೋವಿಂದಪ್ಪ, ಸಿದ್ದಪ್ಪ, ಏಕಾಂತಪ್ಪ, ತಿಮ್ಮಪ್ಪ, ನರಸಿಂಹಪ್ಪ ಒತ್ತಾಯಿಸಿದ್ದಾರೆ.
ದುಮ್ಮಿ ಗೊಲ್ಲರಹಟ್ಟಿಯ ಜುಂಜಪ್ಪ ಸ್ವಾಮಿ ಜಾತ್ರೆಗೆ ಬರುವ ಭಕ್ತರಿಗೆ ವಿಶ್ರಾಂತಿ ಗೃಹ ಕಲ್ಯಾಣ ಮಂಟಪ ಜುಂಜಪ್ಪ ಮಹಾದ್ವಾರ ನಿರ್ಮಿಸಬೇಕುಎ.ಚಿತ್ತಪ್ಪ ಅಧ್ಯಕ್ಷ ಕಾಡುಗೊಲ್ಲ ಸಮುದಾಯದ ತಾಲ್ಲೂಕು ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.