
ಹೊಸದುರ್ಗ: ಭಾನುವಾರ (ನ.2) ಆರಂಭಗೊಳ್ಳಲಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮಕ್ಕೆ ಸಾಣೇಹಳ್ಳಿ ನವವಧುವಿನಂತೆ ಸಿಂಗಾರಗೊಂಡಿದ್ದು ರಂಗಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.
ರಂಗಪ್ರಿಯರನ್ನು ಸ್ವಾಗತಿಸುವ ಸ್ವಾಗತ ಫಲಕ ಅತ್ಯಾಕರ್ಷಕವಾಗಿದೆ. ಈ ಮಾರ್ಗವಾಗಿ ಓಡಾಡಿದರೆ ಸಾಕು, ಹಬ್ಬದ ವಾತಾವರಣ ಕಣ್ಣಿಗೆ ಕಟ್ಟುತ್ತದೆ. ಶ್ರೀಮಠದ ರಂಗಶಾಲೆಯ ಹಳ್ಳದಿಂದ ಅತಿಥಿಗೃಹದವರೆಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಂಗಮಂದಿರ, ವಚನ ಮಂಟಪ, ಶಾಲೆಯ ಆವರಣ, ಶ್ರೀಮಠಕ್ಕೆ ಹೋಗುವ ದಾರಿಯಿಂದ ಬಯಲು ರಂಗಮಂದಿರದವರೆಗೂ ಪ್ರತಿಯೊಂದು ಕಟ್ಟಡಕ್ಕೂ ದೀಪಾಲಂಕಾರ ಮಾಡಲಾಗಿದೆ.
ಒಂದೆಡೆ ವೇದಿಕೆ, ಮತ್ತೊಂದೆಡೆ ಊಟದ ಹಾಲ್ ಸಿದ್ಧತೆ, ಅತಿಥಿಗಳ ಹಾಗೂ ಜನರ ಆತಿಥ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಚ್ಛತೆಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಬರುವ ರಂಗಪ್ರೇಮಿಗಳ ವಾಹನ ಪಾರ್ಕಿಂಗ್‌ಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.
‘ಹಿಂದೆ ಜಾತಿ, ವರ್ಗ, ವರ್ಣಭೇದದಿಂದ ದೂರ ಇರುವವರನ್ನು ಹತ್ತಿರ ಸೇರಿಸಿದ ಬಸವಣ್ಣ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ನಾಟಕ, ವಚನ ನೃತ್ಯಗಳ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸುವ ಕಾರ್ಯ ಆಗುತ್ತಿದೆ. ಒಂದೇ ಸಲ ಆಗುವುದಿಲ್ಲ. ನಿಧಾನವಾಗಿ, ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
‘ಇಂದಿನ ದಿನಗಳಲ್ಲಿ ಬಹುತೇಕ ಮಠಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗುವುದು ವಿರಳ. ಸಾಣೇಹಳ್ಳಿ ಮಠದಲ್ಲಿ ರಂಗೋತ್ಸವದ ಮೂಲಕ ಪಂಡಿತಾರಾಧ್ಯ ಶ್ರೀಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಬಸವಣ್ಣನವರ ಹಾದಿಯಲ್ಲಿ ಸಾಗುತ್ತಾ, ಸರ್ವರೊಳಗೆ ಒಂದಾಗಿದ್ದಾರೆ’ ಎಂದು ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
ಉದ್ಘಾಟನೆ ಇಂದು: ನಾಟಕೋತ್ಸವಕ್ಕೆ ಭಾನುವಾರ ಚಾಲನೆ ದೊರೆಯಲಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಶಿವ ಧ್ವಜಾರೋಹಣ ನೆರವೇರಿಸುವರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಕನ್ನಡ ಧ್ವಜಾರೋಹಣ ಮಾಡುವರು.
ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು. ನಟ ಮುಖ್ಯಮಂತ್ರಿ ಚಂದ್ರು ಕರ್ನಾಟಕ ರಾಜ್ಯೋತ್ಸವದ ಉದ್ಘಾಟಿಸುವರು. ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಉದ್ಯಮಿ ಎಸ್. ರುದ್ರೇಗೌಡ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ಭಾಗವಹಿಸುವರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ, ಜಗದೀಶ್ ಆರ್ ನಿರ್ದೇಶನದ 'ಜಂಗಮದೆಡೆಗೆ' ನಾಟಕ ಸಾಣೇಹಳ್ಳಿ ಬಯಲು ರಂಗಮಂದಿರ ಸಂಜೆ 6ಕ್ಕೆ ಪ್ರದರ್ಶನಗೊಳ್ಳಲಿದೆ.
ಬಸವ ತತ್ವ ಪ್ರಚಾರ
‘ಕಳೆದ 30 ವರ್ಷಗಳಿಂದ ರಾಷ್ಟ್ರೀಯ ನಾಟಕೋತ್ಸವಕ್ಕೆ ಬರುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಇದು ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ. 12ನೇ ಶತಮಾನದಲ್ಲಿ ಬಸವಣ್ಣ ನೀಡಿರುವ ಸಂದೇಶದನ್ವಯ ಸಾಣೇಹಳ್ಳಿ ಶ್ರೀಗಳು ಕಾರ್ಯಕ್ರಮ ರೂಪಿಸಿ ಜನರನ್ನು ಜಾಗೃತಗೊಳಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬಸವ ತತ್ವ ಪ್ರಚಾರಕ್ಕಾಗಿ ಶ್ರಮಿಸುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳ ಮೂಲಕ ಯಶಸ್ಸು ಕಂಡಿದ್ದಾರೆ. ನಾಟಕೋತ್ಸವದಲ್ಲಿಯೂ ಸಹ ಶ್ರೀಗಳು ಜನಮನ್ನಣೆ ಗಳಿಸಿದ್ದಾರೆ’ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.