ಚಿತ್ರದುರ್ಗ: ಕಳೆದೊಂದು ದಶಕದಿಂದ ವಿವಿಧ ವೈಜ್ಞಾನಿಕ ಚಟುವಟಿಕೆ ಮೂಲಕ ಪ್ರಸಿದ್ಧಿ ಪಡೆದಿರುವ, ಚಳ್ಳಕೆರೆ ತಾಲ್ಲೂಕು ಕುದಾಪುರದಲ್ಲಿ ಸ್ಥಾಪನೆಯಾಗಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬಯಲುಸೀಮೆಯ ವಿದ್ಯಾರ್ಥಿಗಳ ಪಾಲಿಗೆ ಆಕರ್ಷಣೆಯ ತಾಣವಾಗಿದೆ.
ಬೆಂಗಳೂರಿನಲ್ಲಿರುವ ಐತಿಹಾಸಿಕ ಐಐಎಸ್‌ಸಿಯ 2ನೇ ನೆಲೆಯಾಗಿ ಅರಳಿ ನಿಂತಿರುವ ಕುದಾಪುರ ಸಂಸ್ಥೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಂತರರಾಷ್ಟ್ರೀಯ ವೈಜ್ಞಾನಿಕ ತರಬೇತಿ ನೀಡುವ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ. 2011ರಿಂದ ಪ್ರತಿಭಾನ್ವೇಷಣಾ ಕೇಂದ್ರ (ಟಿಡಿಸಿ)ವಾಗಿ, 2014ರಿಂದ ಕೌಶಲ ಅಭಿವೃದ್ಧಿ ಕೇಂದ್ರ(ಎಸ್‌ಡಿಸಿ)ವಾಗಿ ಸಂಸ್ಥೆಯು ಪ್ರೌಢಶಾಲೆ, ಪಿಯು ಕಾಲೇಜು ಮಕ್ಕಳನ್ನು ಒಳಗೊಳ್ಳುತ್ತಾ ಹೆಜ್ಜೆ ಇಟ್ಟಿದೆ.
ಐಐಎಸ್‌ಸಿ ಬೆಂಗಳೂರು ಕೇಂದ್ರ ಕಚೇರಿಯು ಹೊಸ ಸಂಶೋಧನೆ, ವಿವಿಧ ತಂತ್ರಜ್ಞಾನಗಳ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದ್ದರೆ ಕುದಾಪುರ ನೆಲೆಯು ಗುಣಾತ್ಮಕ ತರಬೇತಿಯನ್ನೇ ಗುರಿಯಾಗಿಸಿಕೊಂಡು ವಿದ್ಯಾರ್ಥಿಗಳ ಮನ ಮುಟ್ಟುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಚಟುವಟಿಕೆ ನಡೆಸುತ್ತಿರುವ ಸಂಸ್ಥೆ ಕೋಟೆನಾಡಿನ ಸಾವಿರಾರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವದ ಬೀಜ ಬಿತ್ತಿದೆ.
ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಯಲಿದ್ದು ಕುದಾಪುರ ಐಐಎಸ್‌ಸಿ ಅಂಗಳ ಚಿಣ್ಣರ ಕಲರವ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ, ಪಿಯು ಕಾಲೇಜುಗಳ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವೈಜ್ಞಾನಿಕ ಚಟುವಟಿಕೆ, ಸಂವಾದ ಕಾರ್ಯಕ್ರಮ ನಡೆಸಲು ಐಐಎಸ್‌ಸಿ ವಿಜ್ಞಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಂಗಳಕ್ಕೆ ಕರೆದೊಯ್ಯಲಾಗುತ್ತಿದೆ. ವಿಜ್ಞಾನ ಸಂಸ್ಥೆಯ ಅಂಗಳದಲ್ಲಿರುವ ಆಧುನಿಕ ಪ್ರಯೋಗಾಲಯಗಳು, ವಸ್ತು ಸಂಗ್ರಹಾಲಯ, ವೈಜ್ಞಾನಿಕ ಆವಿಷ್ಕಾರ, ವಿಜ್ಞಾನ ಮಾದರಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕಲ್ಪಿಸಲಾಗಿದೆ. ಶಾಲೆಗಳ ವತಿಯಿಂದಲೇ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದ್ದು ಮಕ್ಕಳ ಚಿತ್ತ ಕುದಾಪುರ ಐಐಎಸ್‌ಸಿ ನೆಲೆಯತ್ತ ನೆಟ್ಟಿದೆ.
‘ಅನ್ವೇಷಣೆ, ಅನುಭವ ಹಾಗೂ ಆನಂದ’ ಪರಿಕಲ್ಪನೆಯಡಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ವಿಜ್ಞಾನಿಗಳ ಜೊತೆ ನೇರ ಸಂವಾದ, ಪ್ರಯೋಗ, ವೈಜ್ಞಾನಿಕ ಮಾದರಿಗಳ ವೀಕ್ಷಣೆ, ಪ್ರಾತ್ಯಕ್ಷಿಕೆ ಮೂಲಕ ಮಾರ್ಗದರ್ಶನ, ಉಪನ್ಯಾಸ ಕಾರ್ಯಕ್ರಮಗಳು ದಿನವಿಡೀ ನಡೆಯಲಿವೆ. ಆ ಮೂಲಕ ಸಂಸ್ಥೆಯ ವಿಜ್ಞಾನಿಗಳು, ಉಪನ್ಯಾಸಕರು ಇಡೀ ದಿನ ಕೋಟೆನಾಡಿ ಜಿಲ್ಲೆಯ ವಿದ್ಯಾರ್ಥಿಗಳ ಜೊತೆ ಒಂದಾಗಲಿದ್ದಾರೆ.
‘ಕುದಾಪುರ ಐಐಎಸ್‌ಸಿ ಕೇಂದ್ರ ಈ ಭಾಗದ ವಿದ್ಯಾರ್ಥಿಗಳಿಗೆ ಹೊಸ ದಾರಿ ತೋರಿಸುತ್ತಿದ್ದು ವೈಜ್ಞಾನಿಕ ಮನೋಭಾವ ಮೂಡಿಸುತ್ತಿದೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳನ್ನು ಒಳಗೊಳ್ಳುತ್ತಿರುವುದು ಸಂತಸದ ವಿಚಾರ. ಹೆಚ್ಚಿನ ಸಂಖ್ಯೆಯ ಮಕ್ಕಳು ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲಾಗಿದೆ’ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಉಪಾಧ್ಯಕ್ಷ ಎಚ್. ಕೆ.ಎಸ್. ಸ್ವಾಮಿ ಹೇಳಿದರು.
ಐಐಎಸ್‌ಸಿ ಸ್ಥಾಪನೆಯಿಂದಾಗಿ ಚಳ್ಳಕೆರೆ ತಾಲ್ಲೂಕಿನ ಪುಟ್ಟಗ್ರಾಮದ ದೇಶದ ಭೂಪಟದಲ್ಲಿ ‘ವಿಜ್ಞಾನ ನಗರಿ’ಯಾಗಿ ಗುರುತಿಸಿಕೊಂಡಿದೆ. ಸಂಸ್ಥೆಯ ಚಟುವಟಿಕೆಗಳು ಚಿತ್ರದುರ್ಗ ಜಿಲ್ಲೆ ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳ ಶಿಕ್ಷಣದ ಮೇಲೂ ಗಾಢ ಪರಿಣಾಮ ಬೀರುತ್ತಿದೆ ಎಂದು ಶಿಕ್ಷಕರು ಹೇಳುತ್ತಾರೆ.
ಜಿಲ್ಲಾ ಕೇಂದ್ರದಿಂದ 35ಕಿಮೀ ದೂರದಲ್ಲಿರುವ ಕುದಾಪುರ ಗ್ರಾಮದಲ್ಲಿ ಐಐಎಸ್‌ಸಿ ಸೇರಿದಂತೆ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಾಗೂ ಬಾಬಾ ಅಣು ಸಂಶೋಧನಾ ಕೇಂದ್ರ (ಬಿಎಆರ್‌ಸಿ) ಸ್ಥಾಪಿಸಲಾಗಿದೆ. ಅದಕ್ಕಾಗಿ 11,400 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ದೇಶದ ಯುವ ಜನಾಂಗವನ್ನು ರಕ್ಷಣೆ, ವಿಜ್ಞಾನ, ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಕ್ಷೇತ್ರದಲ್ಲಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಈ ಸಂಸ್ಥೆಗಳು ಹೆಜ್ಜೆ ಇಟ್ಟಿವೆ.
ಶುಕ್ರವಾರ ಐಐಎಸ್‌ಸಿ ಕೇಂದ್ರವನ್ನು ಮಕ್ಕಳಿಗಾಗಿ ತೆರೆಯಲಾಗುತ್ತಿದೆ. ಗಣಿತ ಭೌತ ರಾಸಾಯನಿಕ ವಿಜ್ಞಾನಗಳ ಪ್ರಯೋಗಳನ್ನೂ ಮಕ್ಕಳಿಗೆ ತೋರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆಸುಬ್ಬಾರೆಡ್ಡಿ ಸಂಚಾಲಕ ಮುಖ್ಯಸ್ಥ ಐಐಎಸ್‌ಸಿ ಕುದಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.