ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಧರ್ಮಪುರ ಹೋಬಳಿಯ ಮುಂಗುಸುವಳ್ಳಿ ಗ್ರಾಮದ ತೋಟದ ಮನೆಗೆ ಮಧ್ಯಾಹ್ನ 1.30ಕ್ಕೆ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಭೇಟಿ ನೀಡಿತು. ರವೀಂದ್ರಪ್ಪ ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದರಿಂದ ಕಾಯುತ್ತ ಕುಳಿತರು. ಸಂಜೆ 4.30ಕ್ಕೆ ಅಭ್ಯರ್ಥಿ ಮನೆಗೆ ಧಾವಿಸಿದ ಬಳಿಕ ಶೋಧ ಕಾರ್ಯ ಆರಂಭವಾಗಿದೆ.
ದಾವಣಗೆರೆ, ಬೆಂಗಳೂರು ಹಾಗೂ ಮೈಸೂರಿನ ಅಧಿಕಾರಿಗಳು ತಂಡದಲ್ಲಿದ್ದಾರೆ. ತೋಟದ ಮನೆಯ ಕೆಲಸಗಾರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ರವೀಂದ್ರಪ್ಪ ಹಾಗೂ ಕುಟುಂಬದ ಸದಸ್ಯರಿಗೆ ಮನೆಯಲ್ಲಿ ದಿಗ್ಬಂಧನ ಹೇರಲಾಗಿದೆ. ಎರೆಹುಳು ಗೊಬ್ಬರದ ಶೇಡ್, ಮೇಕೆ ಫಾರ್ಮ್ ಸೇರಿ ಎಲ್ಲೆಡೆ ಶೋಧ ನಡೆಸಲಾಗುತ್ತಿದೆ. ಇದು ತಡರಾತ್ರಿಯವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿದ್ದ ರವೀಂದ್ರಪ್ಪ, ನಿವೃತ್ತಿಯ ಬಳಿಕ ರಾಜಕೀಯಕ್ಕೆ ಧುಮುಕಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಇವರು ₹ 7.5 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.