
ಹೊಸದುರ್ಗದ ಕಂಗುವಳ್ಳಿಯಲ್ಲಿ ಶ್ರೀರಾಮಲಿಂಗೇಶ್ವರ ಸ್ವಾಮಿಗೆ ಭಕ್ತರಿಂದ ಗುಗ್ಗಳ ಸೇವೆ ನಡೆಯಿತು
ಹೊಸದುರ್ಗ: ತಾಲ್ಲೂಕಿನ ಕಂಗುವಳ್ಳಿ ಗ್ರಾಮದಲ್ಲಿ ನೆಲೆಸಿರುವ ರಾಮಲಿಂಗೇಶ್ವರ ಸ್ವಾಮಿ ಅಣತಿಯಂತೆ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಸೋಮವಾರ ಬೆಳಿಗ್ಗೆ 7ಗಂಟೆಗೆ ಕಂಗುವಳ್ಳಿ ಜಂಗಮ ಮಠದ ಮುಪ್ಪಿನಾರ್ಯ ಶಿವಯೋಗಿಗಳು ಹಾಗೂ ಕಡೂರು ತಾಲ್ಲೂಕಿನ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಷಟ್‌ಸ್ಥಲ ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರೆಯಿತು. ಪೂಜಾ ಕಾರ್ಯಗಳು ಧಾರ್ಮಿಕ ವಿಧಿ–ವಿಧಾನಗಳು ನಡೆದವು. ಸಂಜೆ ಸಕಲ ವಾದ್ಯ ಮೇಳಗಳ ಸಮ್ಮುಖದಲ್ಲಿ ರಾಮಲಿಂಗೇಶ್ವರ ಸ್ವಾಮಿಯ ಬೆಳ್ಳಿ ಮಂಟಪದ ಉತ್ಸವ ವೈಭವದಿಂದ ಸಾಗಿತು.
ಕಡೂರು ತಾಲ್ಲೂಕು ಅರೇಹಳ್ಳಿ ಗ್ರಾಮದ ಆಂಜನೇಯ ವೀರಗಾಸೆ ತಂಡದವರು ಆಕರ್ಷಕ ಪ್ರದರ್ಶನ ನೀಡಿದರು. ಸಂಜೆ ಸಿದ್ಧರಾಮ ಕೇಸಾಪುರ ತಂಡದಿಂದ ಸಂಗೀತ ರಸಮಂಜರಿ. ಕೊಪ್ಪದ ಮಹೇಶ್ವರಿ ಚಂಡೆ ಪ್ರದರ್ಶನ ಅತ್ಯಾಕರ್ಷಕವಾಗಿ ನಡೆಯಿತು. ಸುತ್ತಮುತ್ತಲಿನ ಗ್ರಾಮದವರೂ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಇದ್ದರು.
ರಾಮಲಿಂಗೇಶ್ವರ ಸ್ವಾಮಿಯ ದೇವಾಲಯದ ಪಕ್ಕದಲ್ಲಿ ಜಂಗಮಮಠವನ್ನು ಒಂದು ಸುತ್ತು ಹಾಕಿದ ನಂತರ ನಡೆದ ಗುಗ್ಗಳ ಸೇವೆಯಲ್ಲಿ ಹರಕೆ ಹೊತ್ತ ಭಕ್ತರು ಉಪವಾಸವಿದ್ದು, ಸೇವೆ ಮಾಡಿದರು. ತಡರಾತ್ರಿವರೆಗೂ ಗುಗ್ಗಳ ಸೇವೆ ನಡೆಯಿತು. ನಂತರ ರಾಮಲಿಂಗೇಶ್ವರ ಸ್ವಾಮಿಯನ್ನು ತೋಟಕ್ಕೆ ಕರೆದೊಯ್ಯಲಾಯಿತು.
ಗದ್ದುಗೆ ಸ್ಥಾಪನೆ ಇಂದು: ಮಂಗಳವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ತೋಟದಲ್ಲಿ ಪ್ರಭುಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಗದ್ದುಗೆ ಸ್ಥಾಪಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.