ADVERTISEMENT

ಚಿತ್ರದುರ್ಗ | ಶಾಲೆ ಮುಂದೆ ಗಣಿ ಲಾರಿಗಳ ಸಾಲು; ಆಕ್ರೋಶ

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ಆಂಬುಲೆನ್ಸ್‌, ಸ್ಕೂಲ್‌ ಬಸ್‌; ಪೊಲೀಸರ ಮೇಲೆ ಅನುಮಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:34 IST
Last Updated 18 ಅಕ್ಟೋಬರ್ 2025, 7:34 IST
ಕಬ್ಬಿಣದ ಅದಿರು ತುಂಬಿದ ಲಾರಿಗಳು ಬಸವೇಶ್ವರ ಆಸ್ಪತ್ರೆ, ಡಾನ್‌ ಬಾಸ್ಕೊ ಶಾಲೆ ಮುಂದಿನ ಸರ್ವೀಸ್‌ ರಸ್ತೆ ಬಂದ ಕಾರಣ ಆಂಬುಲೆನ್ಸ್‌, ಶಾಲಾವಾಹನ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದವು
ಕಬ್ಬಿಣದ ಅದಿರು ತುಂಬಿದ ಲಾರಿಗಳು ಬಸವೇಶ್ವರ ಆಸ್ಪತ್ರೆ, ಡಾನ್‌ ಬಾಸ್ಕೊ ಶಾಲೆ ಮುಂದಿನ ಸರ್ವೀಸ್‌ ರಸ್ತೆ ಬಂದ ಕಾರಣ ಆಂಬುಲೆನ್ಸ್‌, ಶಾಲಾವಾಹನ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದವು   

ಚಿತ್ರದುರ್ಗ: ಇಷ್ಟು ದಿನ ನಗರದ ಹೊರಗೆ ಓಡಾಡುತ್ತಿದ್ದ ಕಬ್ಬಿಣದ ಅದಿರು ತುಂಬಿದ ಲಾರಿಗಳು ಶುಕ್ರವಾರ ನಗರಕ್ಕೂ ಪ್ರವೇಶ ಪಡೆದವು. ಹಳೇ ರಾಷ್ಟ್ರೀಯ ಹೆದ್ದಾರಿ ಮೂಲಕ ಡಾನ್‌ ಬಾಸ್ಕೊ ಶಾಲೆ, ಬಸವೇಶ್ವರ ಆಸ್ಪತ್ರೆ ಮುಂದಿನ ಸರ್ವೀಸ್‌ ರಸ್ತೆಯಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿದ್ದ ಕಾರಣ ಜನರು, ವಿದ್ಯಾರ್ಥಿಗಳು ಪರದಾಡಬೇಕಾಯಿತು.

ಸರಿಯಾಗಿ ಶಾಲೆ ಬಿಡುವ ಹೊತ್ತಿಗೆ ಲಾರಿಗಳು ಬಂದ ಕಾರಣ ವಿದ್ಯಾರ್ಥಿಗಳು ಮನೆಗೆ ತೆರಳಲು ಸಾಧ್ಯವಾಗಲಿಲ್ಲ. ಸರ್ವೀಸ್‌ ರಸ್ತೆಯಲ್ಲಿ ನೂರಾರು ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಕಿರಿದಾದ ರಸ್ತೆಯಲ್ಲಿ ಶಾಲಾ ವಾಹನಗಳು ಮುಂದಕ್ಕೆ ಚಲಿಸಲು ಸಾಧ್ಯವಾಗದೆ ನಿಂತಲ್ಲೇ ನಿಂತಿದ್ದವು. ಗಂಟೆಗೂ ಹೆಚ್ಚುಕಾಲ ಸಾರ್ವಜನಿಕರೂ ಟ್ರಾಫಿಕ್‌ ನಡುವೆ ಪರದಾಡಿದರು.

ಬಸವೇಶ್ವರ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದ ಆಂಬುಲೆನ್ಸ್‌ಗಳು ಕೂಡ ಮುಂದಕ್ಕೆ ಚಲಿಸಲಾಗದೇ ನಿಂತಿದ್ದವು. ತಡವಾಗಿ ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ಮುಂದಕ್ಕೆ ಕಳುಹಿಸಲು ಪರದಾಡಬೇಕಾಯಿತು. ಗಣಿ ಲಾರಿಗಳನ್ನು ನಗರಕ್ಕೆ ಬಿಟ್ಟಿದ್ದಕ್ಕೆ ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಇಷ್ಟು ದಿನ ಬೆರಳೆಣಿಕೆಯಷ್ಟು ಲಾರಿಗಳು ಬರುತ್ತಿದ್ದವು. ಆದರೆ ಈಗ ನೂರಾರು ಸಂಖ್ಯೆಯಲ್ಲಿ ಬಂದಿರುವುದು ಆಶ್ಚರ್ಯ. ಶಾಲೆಯ ಮುಂದೆ ಗಣಿ ಲಾರಿಗಳ ದೂಳು ಹರಡುತ್ತಿದೆ. ಜೊತೆಗೆ ಗಣಿ ಲಾರಿಗಳಿಂದ ಮಕ್ಕಳ ಆರೋಗ್ಯ, ಪ್ರಾಣ ರಕ್ಷಿಸುವುದು ಕಷ್ಟವಾಗಲಿದೆ. ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಪಾಲಕರೊಬ್ಬರು ಕೋರಿದರು.

ಡೀಸೆಲ್‌ಗಾಗಿ:

ಲಾರಿ ಚಾಲಕರನ್ನು ವಿಚಾರಿಸಿದಾಗ ಡೀಸೆಲ್‌ ತುಂಬಿಸಿಕೊಳ್ಳಲು ಬಂದಿರುವುದಾಗಿ ತಿಳಿಸಿದರು. ಈ ಹಿಂದೆ ಕೂಡ ಇಂಥದ್ದೇ ಸಮಸ್ಯೆ ಉಂಟಾಗಿತ್ತು. ನಂತರ ನಗರಕ್ಕೆ ಬಾರದಂತೆ ತಾಕೀತು ಮಾಡಲಾಗಿತ್ತು. ಬಂದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಈಚೆಗೆ ಮತ್ತೆ ಅನುಮತಿ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಚಳ್ಳಕೆರೆ ಗೇಟ್‌ನಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿ ಡೀಸೆಲ್‌ ಹಾಕಿಸಲು ದಾರಿಯುದ್ದಕ್ಕೂ ಲಾರಿ ನಿಲ್ಲಿಸಲಾಗಿತ್ತು.

‘ನಗರಕ್ಕೆ ಬಂದ ಲಾರಿ ಚಾಲಕರಿಗೆ ದಂಡ ಹಾಕಿದ್ದೇವೆ. ಜೊತೆಗೆ ಪ್ರಕರಣ ದಾಖಲು ಮಾಡಿದ್ದೇವೆ’ ಎಂದು ಟ್ರಾಫಿಕ್‌ ಠಾಣೆಯ ಪೊಲೀಸರು ತಿಳಿಸಿದರು.

‘ಗಣಿ ಲಾರಿಗಳು ನಗರಕ್ಕೆ ಬಂದಿದ್ದು ಏಕೆ ಎಂಬ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದರು.

ಸಾಲುಗಟ್ಟಿ ನಿಂತಿದ್ದ ಗಣಿ ಲಾರಿಗಳು

ವಾಹನ ದಟ್ಟಣೆಯಲ್ಲಿ ಪರದಾಡಿದ ಮಕ್ಕಳು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ಆಂಬುಲೆನ್ಸ್‌ ಡೀಸೆಲ್‌ ಹಾಕಿಸಿಕೊಳ್ಳಲು ಬಂದ ಲಾರಿಗಳು

ಡೀಸೆಲ್‌ ಹಾಕದಿರಲು ಆಗ್ರಹ
ಸಾರ್ವಜನಿಕರು ಈ ವೇಳೆ ಚಳ್ಳಕೆರೆ ಗೇಟ್‌ನಲ್ಲಿರುವ ಪೆಟ್ರೋಲ್‌ ಬಂಕ್‌ ಮಾಲೀಕರ ವಿರುದ್ಧವೂ ಕಿಡಿಕಾರಿದರು. ಗಣಿ ಲಾರಿಗಳಿಗೆ ಡೀಸೆಲ್‌ ಹಾಕಬಾರದು. ಟ್ರಾಫಿಕ್‌ ಜಾಮ್‌ ಮಾಡಿ ಡೀಸೆಲ್‌ ಹಾಕಬೇಕಾ? ಮತ್ತೊಮ್ಮೆ ಗಣಿ ಲಾರಿಗಳಿಗೆ ಡೀಸೆಲ್‌ ಹಾಕಿದರೆ ಬಂಕ್‌ನ ಲೈಸೆನ್ಸ್‌ ರದ್ದು ಮಾಡಬೇಕು ಎಂದು ಅನೇಕರು ಸರ್ಕಾರವನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.