ADVERTISEMENT

ಹಿರಿಯೂರು: ಆತಂಕದಲ್ಲಿ ಖಾಸಗಿ ಬಸ್ ಮಾಲೀಕರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2023, 14:33 IST
Last Updated 12 ಜೂನ್ 2023, 14:33 IST
ಹಿರಿಯೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರು ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು
ಹಿರಿಯೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರು ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು   

ಹಿರಿಯೂರು: ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆ ಜಾರಿಯಾಗಿರುವ ಕಾರಣ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಸೋಮವಾರ ಹೆಚ್ಚಾಗಿತ್ತು. ಆದರೆ ನಿತ್ಯ ಸುಮಾರು 120 ಖಾಸಗಿ ಬಸ್‌ ಸಂಚರಿಸುವ ಹಿರಿಯೂರು ತಾಲ್ಲೂಕಿನ ಖಾಸಗಿ ಬಸ್‌ಗಳ ಮಾಲೀಕರಲ್ಲಿ ಆತಂಕ ಸೃಷ್ಟಿಯಾಗಿದೆ. ಹಿರಿಯೂರು–ಚಳ್ಳಕೆರೆ–ಹುಳಿಯಾರು ಮಾರ್ಗದಲ್ಲಿ ಸೋಮವಾರ ಯಾವ ಮಹಿಳಾ ಪ್ರಯಾಣಿಕರೂ ಖಾಸಗಿ ಬಸ್‌ಗಳತ್ತ ಸುಳಿಯಲಿಲ್ಲ.

40ಕ್ಕೂ ಹೆಚ್ಚು ವರ್ಷಗಳಿಂದ ಗ್ರಾಮೀಣ ಭಾಗದ ಜನರಿಗೆ ಸಾರಿಗೆ ಸೇವೆ ನೀಡುತ್ತಿದ್ದ ಖಾಸಗಿ ಬಸ್‌ಗಳು ಗುಜರಿ ಸೇರುವ ಸಮಯ ಬಂದಿದೆ ಎಂದು ತಾಲ್ಲೂಕು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಬೀವುಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.

ಹಿರಿಯೂರಿಗೆ ಎಂದೂ ಒಬ್ಬಳನ್ನೇ ಕಳಿಸದ ಯಜಮಾನರು ಇವತ್ತು ಅಂಗಡಿ ಸಾಮಾನು ತರಲು ನೀನೇ ಹೋಗು ಎಂದು ಕಳಿಸಿದರು. ನಮಗೂ ಮನೆಯಲ್ಲಿ ಕೂತು ಸಾಕಾಗಿತ್ತು. ಬಸ್ ಪ್ರಯಾಣ ಉಚಿತ ಮಾಡಿ ಕಾಂಗ್ರೆಸ್‌ನವರು ಒಳ್ಳೆಯ ಕೆಲಸ ಮಾಡಿದ್ದಾರೆ
ಕರಿಯಮ್ಮ,  ಪಿಲ್ಲಾಜನಹಳ್ಳಿ 

ನಿರ್ವಹಣೆ ಸವಾಲು

ADVERTISEMENT

 ‘ಮೂರು ತಿಂಗಳಿಗೆ ಒಮ್ಮೆ ಪ್ರತಿ ಬಸ್‌ಗೆ ₹50 ಸಾವಿರ ತೆರಿಗೆ ಕಟ್ಟಬೇಕು. ವರ್ಷಕ್ಕೆ ₹70 ಸಾವಿರದಿಂದ ₹1 ಲಕ್ಷ ವಿಮೆ. ಐದು ವರ್ಷಕ್ಕೆ ಒಮ್ಮೆ ಪರವಾನಗಿ ನವೀಕರಣ ಮಾಡಿಸಬೇಕು. ಮೂರ್ನಾಲ್ಕು ತಿಂಗಳಿಗೆ ಒಮ್ಮೆ ಟಯರ್ ಬದಲಿಸಬೇಕು. ಒಂದೊಂದು ಟಯರ್ ಬೆಲೆ ₹22 ಸಾವಿರ ಇದೆ. ಚಾಲಕ, ನಿರ್ವಾಹಕ, ಕ್ಲೀನರ್, ನಿಲ್ದಾಣದ ಏಜೆಂಟರಿಗೆ ಕಮಿಷನ್, ವೇತನ ಪಾವತಿಸಬೇಕು. ಇದೆಲ್ಲ ಕಳೆದರೆ ಹಣ ಉಳಿಯುವುದೇ ಕಷ್ಟ.

ಮಗಳ ಮನೆಗೆ ಹೋಗದೆ ಮೂರ್ನಾಲ್ಕು ತಿಂಗಳಾಗಿತ್ತು. ಸಿದ್ದರಾಮಯ್ಯ ಅವರ ಕೃಪೆಯಿಂದ ಇನ್ನುಮುಂದೆ ಮಗಳು ನೆನಪಾದಾಗಲೆಲ್ಲ ಖರ್ಚಿಲ್ಲದೆ ಹೋಗಿ ಬರುತ್ತೇನೆ.
ಕಮಲಮ್ಮ,  ಚಳ್ಳಕೆರೆ

‘ಶಕ್ತಿ’ ಯೋಜನೆಯಿಂದ ನಮ್ಮ ತಾಲ್ಲೂಕೊಂದರಲ್ಲೇ ಖಾಸಗಿ ಬಸ್‌ಗಳನ್ನು ಅವಲಂಬಿಸಿರುವ 400ರಿಂದ 500 ಕುಟುಂಬಗಳ ಬದುಕು ಬೀದಿಗೆ ಬೀಳಲಿದೆ. ಉಚಿತ ಕೊಡುಗೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವ ಮೂಲಕ ಸರ್ಕಾರವು ಖಾಸಗಿ ಬಸ್‌ಗಳ ನೆರವಿಗೆ ಬರಬೇಕು’ ಎಂದು ಜಬೀವುಲ್ಲಾ ಒತ್ತಾಯಿಸಿದ್ದಾರೆ.

ಸರ್ಕಾರಿ ಬಸ್‌ಗಳು ಭರ್ತಿ: 

‘ಶಕ್ತಿ’ ಯೋಜನೆಯಿಂದ ಮಹಿಳೆಯರು ಸಂತಸಗೊಂಡಿದ್ದಾರೆ. ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಮಹಿಳಾ ಪ್ರಯಾಣಿಕರಿಂದ ತುಂಬಿಹೋಗಿವೆ. ಗ್ರಾಮೀಣ ಪ್ರದೇಶದತ್ತ ಹೋಗುವ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ನಿಂತೇ  ಪ್ರಯಾಣಿಸುತ್ತಿದ್ದಾರೆ. ಚಳ್ಳಕೆರೆಯಿಂದ ಹಿರಿಯೂರು ಮಾರ್ಗವಾಗಿ ಹಾಸನಕ್ಕೆ ಹೋಗುವ ಬಸ್‌ನಲ್ಲಿ ಎಂದೂ 15ಕ್ಕಿಂತ ಹೆಚ್ಚು ಪ್ರಯಾಣಿಕರು ಇರುತ್ತಿರಲಿಲ್ಲ. ಆದರೆ ಸೋಮವಾರ ಬಸ್‌ ಪೂರ್ಣ ಭರ್ತಿಯಾಗಿದ್ದುದು ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.