ADVERTISEMENT

ಕಣ್ಣೆದುರೇ ಸಾವಿನ ಭೀಕರತೆ ಕಂಡೆ: ಉಕ್ರೇನ್‌ನಿಂದ ರಾಜ್ಯದ ವಿದ್ಯಾರ್ಥಿನಿ ಭಯದ ಮಾತು

ಪೋಷಕರಿಗೆ ಮಾಹಿತಿ ನೀಡಿದ ಹಿರಿಯೂರಿನ ಶಕ್ತಿಶ್ರೀ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 5:22 IST
Last Updated 28 ಫೆಬ್ರುವರಿ 2022, 5:22 IST
ಪೋಲೆಂಡ್‌ನ ರೈಲು ನಿಲ್ದಾಣದಲ್ಲಿ ಉಕ್ರೇನ್ ನಿರಾಶ್ರಿತರು – ಎಪಿ ಚಿತ್ರ
ಪೋಲೆಂಡ್‌ನ ರೈಲು ನಿಲ್ದಾಣದಲ್ಲಿ ಉಕ್ರೇನ್ ನಿರಾಶ್ರಿತರು – ಎಪಿ ಚಿತ್ರ   

ಹಿರಿಯೂರು: ‘ಉಕ್ರೇನ್ ದೇಶಕ್ಕೆ ಹೊಂದಿಕೊಂಡಿರುವ ರುಮೇನಿಯಾ ಗಡಿಯಲ್ಲಿ ಶನಿವಾರ ರಾತ್ರಿ ಒಮ್ಮೆಲೇ ನಾಲ್ಕೈದು ಸಾವಿರ ಜನರು ಗಡಿದಾಟಲು ಹೋದಾಗ ಸಂಭವಿಸಿದ ಕಾಲ್ತುಳಿತದಲ್ಲಿ ಎಷ್ಟು ಜನ ಸತ್ತರು ಎಂದು ಹೇಳಲಾಗದು. ಕಣ್ಣೆದುರೇ ಸಾವಿನ ಭೀಕರ ದೃಶ್ಯಗಳನ್ನು ಕಂಡೆ’.

ಹಿರಿಯೂರಿನ ಶೇಖರ್–ಸೆಲ್ವಿ ದಂಪತಿ ಪುತ್ರಿ ಶಕ್ತಿಶ್ರೀ ಭಾನುವಾರ ಬೆಳಗಿನ ಜಾವ ತನ್ನ ಅಕ್ಕ ಮಂಜುಶ್ರೀ ಅವರಿಗೆ ದೂರವಾಣಿ ಕರೆ ಮಾಡಿ ಹೇಳಿದ ಮಾತುಗಳಿವು.

‘ಅಂತಹ ಭೀಕರ ದೃಶ್ಯಗಳನ್ನು ಸಿನಿಮಾಗಳಲ್ಲಿ ಮಾತ್ರ ನೋಡಿದ್ದೆ. ಚರ್ನಿವಿಕ್ಸಿ ನಗರದ ಹಾಸ್ಟೆಲ್‌ನಿಂದ ಕೇವಲ 20 ಕಿ.ಮೀ. ದೂರದ ರುಮೇನಿಯಾ ಗಡಿಗೆ ಶನಿವಾರ ಸಂಜೆ ತಲುಪಿದೆವು. ಇಲ್ಲಿ ಕೇವಲ ಭಾರತೀಯರು ಮಾತ್ರ ಇಲ್ಲ. ಪುಟ್ಟಪುಟ್ಟ ಮಕ್ಕಳನ್ನು, ವೃದ್ಧರನ್ನು ಜೊತೆಗೆ ಕರೆತಂದಿರುವ ಉಕ್ರೇನ್ ದೇಶದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ರಷ್ಯಾ ಸೈನಿಕರು ಎಲ್ಲಿ ತಮ್ಮನ್ನು ಗುರಿ ಮಾಡುತ್ತಾರೋ ಎಂಬ ಭಯದಲ್ಲಿ ಅವರು ಉಕ್ರೇನ್ ಗಡಿಯಿಂದ ಬೇಗ ಹೊರಗೆ ಹೋಗಬೇಕು ಎಂಬ ಆತಂಕದಲ್ಲಿದ್ದಾಗ ಕಾಲ್ತುಳಿತ ಸಂಭವಿಸಿತು ಎಂದು ಬಿಕ್ಕಿಬಿಕ್ಕಿ ಅತ್ತಳು’ ಎಂದು ಮಂಜುಶ್ರೀ ‘ಪ್ರಜಾವಾಣಿ’ಗೆ ವಿವರಿಸಿದರು.

ಪೋಲೆಂಡ್ ಗಡಿಯಿಂದ 6 ಕಿ.ಮೀ. ದೂರದಲ್ಲಿ: ‘ತಮ್ಮ ಮಗ ವಿಷ್ಣು ಭಾನುವಾರ ಬೆಳಗಿನ ಜಾವ ಪೋಲೆಂಡ್ ಗಡಿಯಿಂದ 6 ಕಿ.ಮೀ. ದೂರದಲ್ಲಿ ಇರುವುದಾಗಿ ಮಾಹಿತಿ ನೀಡಿದ್ದ. ಮೊಬೈಲ್‌ನಲ್ಲಿ ಚಾರ್ಜ್ ಇಲ್ಲ. ಮತ್ತೆ ಕರೆ ಮಾಡುತ್ತೇನೆ ಎಂದಿದ್ದ. ನಮ್ಮ ಮಕ್ಕಳು ಯಾವಾಗ ಬರುತ್ತಾರೆ ಎಂದು ಜೀವವನ್ನು ಕೈಯಲ್ಲಿ ಹಿಡಿದು ಕುಳಿತಿದ್ದೇವೆ’ ಎಂದು ಉಕ್ರೇನ್‌ನಲ್ಲಿರುವ ವಿಷ್ಣುವನ ತಂದೆ ಪಟ್ರೆಹಳ್ಳಿಯ ಮುರುಗೇಶ್ಗದ್ಗದಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.