ಚಿತ್ರದುರ್ಗ: ‘ಜಾತಿ ಪೀಠಗಳು ಜ್ಯೋತಿಯಾಗಿ ಜಾತ್ಯತೀತ ತತ್ವ ಅಳವಡಿಸಿಕೊಂಡಿವೆ. ಕಲುಷಿತ ಮನಃಸ್ಥಿತಿ ಇದ್ದವರು ಮಾತ್ರ ಮಠಗಳ ಬಗ್ಗೆ ಕೀಳಾಗಿ ಮಾತನಾಡಲು ಸಾಧ್ಯ’ ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
‘ಜಾತಿವಾರು ಮಠಗಳಿಂದ ಸಮಾಜ ಕಲುಷಿತವಾಗಿರುವುದಾಗಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿರುವುದು ಗಮನಕ್ಕೆ ಬಂದಿದೆ. ಹೀಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ. ಪಂಚಮಸಾಲಿ ಪೀಠಗಳ ಉಗಮಕ್ಕೆ ಕಾರಣವೇನು ಎಂಬ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
‘ನಾವು ಬೇಡ ಜಂಗಮಕ್ಕೆ ಸೇರಿದ್ದು, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಪಂಚಪೀಠದವರು 2003ರಲ್ಲಿ ಅಂದಿನ ಪ್ರಧಾನಿ ವಾಜಪೇಯಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಕೇಳಿದ್ದರೇ ಹೊರತು ವೀರಶೈವ ಲಿಂಗಾಯತರ ಮೀಸಲಾತಿಗೆ ಬೇಡಿಕೆ ಇಟ್ಟಿರಲಿಲ್ಲ’ ಎಂದು ಆರೋಪಿಸಿದರು.
‘ವೀರಶೈವ ಲಿಂಗಾಯತರಲ್ಲಿ ಪಂಚಪೀಠದವರದ್ದು ಅತಿ ಚಿಕ್ಕ ಸಮಾಜ. ಅವರು ಪೂಜೆ, ಪುನಸ್ಕಾರ ಮಾಡುವ ಜನಾಂಗದ ಶ್ರೀಗಳು. ವೀರಶೈವ ಲಿಂಗಾಯತರಲ್ಲಿ ಶೇ 80ರಷ್ಟು ಪಂಚಮಸಾಲಿ ಜನರಿದ್ದಾರೆ. ರಾಜ್ಯದಲ್ಲಿ ಪಂಚಪೀಠದ ಜನಸಂಖ್ಯೆ ತುಂಬಾ ಕಡಿಮೆಯಿದೆ. ಊರಿಗೆ ಎರಡೋ ಮೂರೋ ಮನೆಗಳಿವೆ’ ಎಂದು ದೂರಿದರು.
‘ಪೀಠದಲ್ಲಿ ಕುಳಿತವರ ತಪ್ಪು ಹೇಳಿಕೆಗಳಿಂದ ಒಡಕು ಮೂಡಿದೆ. ವೀರಶೈವ ಲಿಂಗಾಯತ ಒಳಪಂಗಡ ಒಟ್ಟಾಗಬೇಕೆಂಬುದು ನಮ್ಮ ಅಭಿಪ್ರಾಯ. ದಾವಣಗೆರೆಯಲ್ಲಿ ಪಂಚಪೀಠಾಧೀಶರ ನೇತೃತ್ವದಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಕೈಗೊಂಡಿರುವ ನಿರ್ಣಯ ಪಂಚಮಸಾಲಿ ಸಮಾಜಕ್ಕೆ ಅನ್ವಯವಾಗುವುದಿಲ್ಲ. ಆಗಸ್ಟ್ 10ರಂದು ಪಂಚಮಸಾಲಿ ಪೀಠದಲ್ಲಿ ಸಮಾಜದ ಸಭೆ ಇದೆ. ಅಲ್ಲಿ ಕೈಗೊಂಡ ನಿರ್ಣಯವನ್ನು ಸಮಾಜಕ್ಕೆ ರವಾನಿಸುತ್ತೇವೆ. ಜಾತಿಗಣತಿಯಲ್ಲಿ ಏನು ಬರೆಸಬೇಕೆಂಬ ಸ್ಪಷ್ಟ ಸಂದೇಶ ನೀಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.