ಬಂಟ್ವಾಳ/ಉಳ್ಳಾಲ (ದಕ್ಷಿಣ ಕನ್ನಡ): ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಕಾಂಬೋಡಿ ಇರಾ ಕೋಡಿ ಎಂಬಲ್ಲಿ ದುಷ್ಕರ್ಮಿಗಳು ಮಂಗಳವಾರ ಸಂಜೆ ಮಾರಕಾಸ್ತ್ರ ಗಳಿಂದ ಯುವಕನನ್ನು ಕಡಿದು ಹತ್ಯೆ ಮಾಡಿದ್ದಾರೆ. ಆತನ ಜೊತೆಗಿದ್ದ ಇನ್ನೊಬ್ಬನ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹೀಂ (34) ಮೃತರು. ಅವರ ಜೊತೆಗಿದ್ದ ಮಹಮ್ಮದ್ ಶಾಫಿ ಅವರ ಮೇಲೂ ಹಲ್ಲೆ ನಡೆದಿದ್ದು, ಅವರ ಕಿಬ್ಬೊಟ್ಟೆ, ಕೈ ಮತ್ತು ಎದೆಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಿಕಪ್ ವಾಹನ ಚಾಲಕರಾಗಿದ್ದ ಅಬ್ದುಲ್ ರಹೀಂ ಸ್ಥಳೀಯರ ಕೋರಿಕೆ ಮೇರೆಗೆ ಇರಾ ಕೋಡಿಯ ಮನೆಯೊಂದಕ್ಕೆ ಮರಳು ಸಾಗಿಸಿದ್ದರು. ವಾಹನದಿಂದ ಮರಳು ಕೆಳಕ್ಕಿಳಿಸುತ್ತಿದ್ದಾಗ ಬೈಕಿನಲ್ಲಿ ಅಲ್ಲಿಗೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಹಾಗೂ ಮಹಮ್ಮದ್ ಶಾಫಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇ ರಹೀಂ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಹೀಂ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ಒಯ್ಯಲಾಗಿದೆ. ಆ ಆಸ್ಪತ್ರೆ ಬಳಿ ಭಾರಿ ಸಂಖ್ಯೆಯಲ್ಲಿ ಜನ ಸೇರಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.
ರಸ್ತೆ ತಡೆ: ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿ ಸೇರಿರುವ ಉದ್ರಿಕ್ತ ಜನರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದರು.
ಮಂಗಳೂರು: ಅಬ್ದುಲ್ ರಹೀಂ ಹತ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹರಿದಾಡುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 30ರ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ರಹೀಂ ಎಂಬ ಯುವಕನ ಕೊಲೆಯ ಬಳಿಕ ಜಿಲ್ಲೆಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಇದೇ 30ರ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪ್ರಭಾರ ಜಿಲ್ಲಾಧಿಕಾರಿ ಆನಂದ ಕೆ. ಆದೇಶ ಮಾಡಿದ್ದಾರೆ.
ಜಿಲ್ಲೆಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುವ ಸಲುವಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯವರ ಸಲಹೆ ಮೇರೆಗೆ ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.