ADVERTISEMENT

ಅರೆಕಾ ನಟ್‌ | ಅಡಿಕೆ ಕುರಿತ ಸಂಶಯ ನಿವಾರಿಸುವ ಕೃತಿ: ಕ್ಯಾಂಪ್ಕೊ ಅಧ್ಯಕ್ಷ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 7:13 IST
Last Updated 19 ಫೆಬ್ರುವರಿ 2026, 7:13 IST
<div class="paragraphs"><p>ಅರೆಕಾ ನಟ್ - ಹಿಸ್ಟರಿ, ಕಾನ್‌ಸ್ಟಿಟ್ಯುಯೆಂಟ್, ಕ್ಯಾನ್ಸರ್ ಆ್ಯಂಡ್ ಬಿಯಾಂಡ್’ ಕೃತಿಯನ್ನು ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ (ಎಡದಿಂದ ನಾಲ್ಕನೆಯವರು) ಅವರು ಮಂಗಳೂರಿನಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿದರು.&nbsp;</p></div>

ಅರೆಕಾ ನಟ್ - ಹಿಸ್ಟರಿ, ಕಾನ್‌ಸ್ಟಿಟ್ಯುಯೆಂಟ್, ಕ್ಯಾನ್ಸರ್ ಆ್ಯಂಡ್ ಬಿಯಾಂಡ್’ ಕೃತಿಯನ್ನು ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ (ಎಡದಿಂದ ನಾಲ್ಕನೆಯವರು) ಅವರು ಮಂಗಳೂರಿನಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿದರು. 

   

ಮಂಗಳೂರು: ‘ಅರೆಕಾ ನಟ್ - ಹಿಸ್ಟರಿ, ಕಾನ್‌ಸ್ಟಿಟ್ಯುಯೆಂಟ್, ಕ್ಯಾನ್ಸರ್ ಆ್ಯಂಡ್ ಬಿಯಾಂಡ್’ ಕೃತಿಯು ಅಡಿಕೆಯಲ್ಲಿರುವ ಅಂಶಗಳ ಕುರಿತು ಸ್ಪಷ್ಟತೆ ನೀಡುತ್ತದೆ. ಅಡಿಕೆಯಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳಿವೆ ಎಂಬ ಸಂಶಯ ನಿವಾರಣೆ ದೃಷ್ಟಿಯಿಂದ‌ ಇದೊಂದು ಮಹತ್ವದ ಪುಸ್ತಕ’ ಎಂದು ಕೇಂದ್ರೀಯ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತದ (ಕ್ಯಾಂಪ್ಕೊ) ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಹೇಳಿದರು.

ಎನ್‌ಐಟಿಕೆಯ ಡೀನ್ ಪ್ರೊ.ಪ್ರಸನ್ನ ಬೇಲೂರು ಅವರು ರಚಿಸಿರುವ ‘ಅರೆಕಾನಟ್ - ಹಿಸ್ಟರಿ, ಕಾನ್‌ಸ್ಟಿಟ್ಯುಯೆಂಟ್, ಕ್ಯಾನ್ಸರ್ ಆ್ಯಂಡ್ ಬಿಯಾಂಡ್’ ಕೃತಿ ಲೋಕಾರ್ಪಣೆಗಾಗಿ ಕ್ಯಾಂಪ್ಕೊ ವತಿಯಿಂದ ಇಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ADVERTISEMENT

‘ದೇಶದ ಹತ್ತು ಶ್ರೀಮಂತ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಎಂಟನೇ ಸ್ಥಾನದಲ್ಲಿದೆ ಎಂದು ವರದಿಯೊಂದು ತಿಳಿಸಿದೆ. ಇಲ್ಲಿನ ಆರ್ಥಿಕತೆಗೆ ಅಡಿಕೆ ಬೆಳೆಯೂ ಕಾರಣ. ಇಲ್ಲಿನ ಭೂತ ಕೋಲ, ಯಕ್ಷಗಾನ,ದೇವಸ್ಥಾನಗಳ ಬ್ರಹ್ಮಕಲಶ,  ಶಿಕ್ಷಣ ಎಲ್ಲದರ ಹಿಂದೆ ಇರುವುದು ಅಡಿಕೆ. ಹಾಗಾಗಿ ಅಡಿಕೆ ವಿರುದ್ಧ ಲಾಬಿಯೂ ಸ್ವಾಭಾವಿಕ. ಅದನ್ನು ಎದುರಿಸಲು ವೈಜ್ಞಾನಿಕ ಹಾಗೂ ಐತಿಹಾಸಿಕ ತಳಹದಿಯ ಅಗತ್ಯ ಇತ್ತು. ಅಂತಹ ಅಂಶಗಳು ಕೃತಿಯಲ್ಲಿವೆ’ ಎಂದರು. 

ಕೃತಿ ಬಿಡುಗಡೆ ಮಾಡಿದ ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ನಿರ್ದೇಶಕ ಪ್ರೊ.ಬಿ.ರವಿ, ‘ಅಡಿಕೆ ಮೌಲ್ಯವರ್ಧನೆಗೆ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಹೇರಳ ಅವಕಾಶಗಳಿವೆ. ಅದರಲ್ಲಿರುವ ಆರೋಗ್ಯ ಸಂಬಂಧಿ ಅಂಶಗಳ ಬಗ್ಗೆಯೂ ಸಂಶೋಧನೆಗಳಾಗಬೇಕಿದೆ. ಅಡಿಕೆಯನ್ನು ಇನ್ನೂ ಚೆನ್ನಾಗಿ ಬೆಳೆಯುವ ಕುರಿತು, ಅದರ ಗುಣಮಟ್ಟ ಸುಧಾರಣೆ, ಕೊಯಿಲು ತಂತ್ರಜ್ಞಾನ, ರೋಗ ತಡೆಗಟ್ಟುವಿಕೆ ಕುರಿತ ಸಂಶೋಧನೆಗಳಿಗೆ ಸಹಭಾಗಿತ್ವ ವಹಿಸಲು ಎನ್ಐಟಿಕೆ ಸಿದ್ಧ. ಇದಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನೂ ಬಳಸಿಕೊಳ್ಳಬಹುದು. ನಮ್ಮ ಸಂಸ್ಥೆಯಲ್ಲಿರುವ 300ಕ್ಕೂ ಹೆಚ್ಚು ಸಂಶೋಧಕರು ಈ ನಿಟ್ಟಿನಲ್ಲಿ ನೆರವಾಗಲಿದ್ದಾರೆ’ ಎಂದರು.

ಅರ್ಥಶಾಸ್ತ್ರಜ್ಞ ವಿಘ್ನೇಶ್ವರ ವರ್ಮುಡಿ, ‘ಅಡಿಕೆಗೆ ಏನೇನು ಗುಣಗಳಿವೆ, ಯಾವೆಲ್ಲ ಅಂಶಗಳಿವೆ ಎಂಬುದನ್ನು ಈ ಕೃತಿಯಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಕ್ಯಾನ್ಸರ್ ಕಾರಕ ಅಂಶ ಅಡಿಕೆಯಲ್ಲಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಈ ಕೃತಿಯ ಕೊನೆಯ ಭಾಗ ಉಪಯುಕ್ತವಾಗಲಿದೆ’ ಎಂದರು.. 

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ‘ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಚರ್ಚೆ ನಡೆಯುವಾಗ, ಅದನ್ನು ಅಲ್ಲಗಳೆಯುವ ವೈಜ್ಞಾನಿಕ ವರದಿ ಕೊಡುವಲ್ಲಿ ನಾವು ಸೋತಿದ್ದೆವು. ಇಂತಹ ಸಂದರ್ಭದಲ್ಲಿ ಪ್ರಕಟವಾಗಿರುವ ಈ ಕೃತಿಗೆ ತುಂಬಾ ಮಹತ್ವ ಇದೆ’ ಎಂದರು.

ಕ್ಯಾಂಪೊ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಸತ್ಯನಾರಾಯಣ ಸ್ವಾಗತಿಸಿದರು. ಉಪ‌ ಪ್ರಧಾನ‌ವ್ಯವಸ್ಥಾಪಕ ಶ್ರೀಶ್ಯಾಮ ವಂದಿಸಿದರು. 

ಕೃತಿ: ಅರೆಕಾ ನಟ್ - ಹಿಸ್ಟರಿ, ಕಾನ್‌ಸ್ಟಿಟ್ಯುಯೆಂಟ್, ಕ್ಯಾನ್ಸರ್ ಆ್ಯಂಡ್ ಬಿಯಾಂಡ್

ಲೇಖಕ: ಪ್ರೊ.ಪ್ರಸನ್ನ ಬೇಲೂರು

ಪ್ರಕಾಶಕರು: ವೈಟ್ ಫಾಲ್ಕನ್ ಪಬ್ಲಿಷರ್ಸ್‌

ಪುಟಗಳು: 130

ದರ: ₹ 400

‘ಸಡಿಲ ಮುಚ್ಚಳ ಮೂಡಿಸಿತು ಕುತೂಹಲ’

‘ನಾನೂ  ಅಡಿಕೆ ಬೆಳೆಗಾರ. ಕೋವಿಡ್ ಸಮಯದಲ್ಲಿ ಕೆಲ ತಿಂಗಳು ಮನೆಯಲ್ಲೇ ಉಳಿಯಬೇಕಾಗಿ ಬಂದಾಗ ಅಡಿಕೆ ಕೊಯಿಲಿಗೆ ನಾನೂ ನೆರವಾಗಿದ್ದೆ. ಕೆಂಪಡಿಕೆಯ ಸಂಸ್ಕರಣೆಗೆ ಹಿಂದಿನ ವರ್ಷ ಸಂಗ್ರಹಿಸಿದ ಚೊಗರನ್ನು ಬಳಸಲಾಗುತ್ತದೆ. ಮನೆಯಲ್ಲಿ ಚೊಗರು ಸಂಗ್ರಹಿಸಿದ್ದ ಕ್ಯಾನಿನ ಮುಚ್ಚಳ ಸಡಿಲ ಇದ್ದರೂ ಅದು ಹಾಳಾಗಿರಲಿಲ್ಲ.ಅದು ನನ್ನಲ್ಲಿ ಅಡಿಕೆಯ ಬಗ್ಗೆ ಚಿಂತನೆಗೆ ಒರೆ ಹಚ್ಚಿತು’ ಎಂದು ಕೃತಿಯ ಲೇಖಕ ಪ್ರೊ.ಪ್ರಸನ್ನ ಬೇಲೂರು ತಿಳಿಸಿದರು.

‘ಕ್ಯಾನ್‌ನಲ್ಲಿ ಸಂಗ್ರಹಿಸಿದ್ದ ಚೊಗರಿನ ಮೆಲ್ಭಾಗ ಸೂಕ್ಷ್ಮಾಣುಜೀವಿಗಳು ಬೆಳೆದಿದ್ದವು. ಆದರೆ ಚೊಗರಿನ ಬಣ್ಣ ವಾಸನೆ ರುಚಿ ಬದಲಾಗಿರಲಿಲ್ಲ.  ಸಂಶೋಧನೆ ನಡೆಸಿದ ಬಳಿಕ ಅಡಿಕೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳೇ ಇದಕ್ಕೆ ಕಾರಣ ಎಂದು ತಿಳಿಯಿತು‘ ಎಂದರು.  ‘ಅಡಿಕೆಯಲ್ಲಿರುವ ಪ್ರೋಸಯನಿಡಿನ್ ಕ್ಯಾಟೆಚಿನ್‌ ಅರೆಕಾಟ್ಯಾನಿನ್‌ ಸಿನಾಪಿಕ್ ಆ್ಯಸಿಡ್‌ ರ‍್ಯಾಮ್ನಿಟಿನ್‌ಗಳು ಅಡಿಕೆಯಲ್ಲಿವೆ. ಅಮೆರಿಕ ಹಾಗೂ ಯೂರೋಪ್‌ಗಳಲ್ಲಿ ಆರೋಗ್ಯವರ್ಧಕವಾಗಿ ಬಳಸುವ ಪ್ರೋಸಯನಿಡಿನ್ ಅನ್ನು ಹೊಂದಿರುವ ಅಡಿಕೆಯಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳಿವೆ ಎಂದು  ಏಕೆ ಹೇಳುತ್ತಾರೋ ಗೊತ್ತಿಲ್ಲ’ ಎಂದರು. ‘ಕೃತಿಯು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ. ಈ ಕೃತಿಯ ಕನ್ನಡ ಭಾಷಾಂತರ ಮೂರು ತಿಂಗಳಲ್ಲಿ ಪ್ರಕಟವಾಗಲಿದೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.