ADVERTISEMENT

Karnataka politics | ಕ್ರಾಂತಿ ಬಗ್ಗೆ ಸಂಕ್ರಾಂತಿ ಬಳಿಕ ಮಾತನಾಡೋಣ: ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 16:37 IST
Last Updated 3 ಡಿಸೆಂಬರ್ 2025, 16:37 IST
ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್   

ಮಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಸಿ.ವೇಣುಗೋಪಾಲ್ ನಡುವೆ ಇಂದು ರಾಜಕಾರಣದ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಕ್ರಾಂತಿ, ಕ್ರಾಂತಿ ಎಂದು ಮಾಧ್ಯಮದವರೇ ಹೇಳಿದ್ದು. ಸಂಕ್ರಾಂತಿಯೂ ಆಗಲಿ ಆಮೇಲೆ ಈ ಬಗ್ಗೆ ಮಾತನಾಡೋಣ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು. ‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಿಮಗೆ ಯಾರು ಹೇಳಿದ್ದು. ಅದೇನಾದರೂ ಇದ್ದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ನಿರ್ಧಾರ ಮಾಡುತ್ತಾರೆ. ಅದೀಗ ಹಳೆಯ ವಿಚಾರ. ಹೊಸ ವಿಚಾರ ಏನಾದರೂ ಇದ್ದಲ್ಲಿ ಕೇಳಿ’ ಎಂದರು.

‘ನಮ್ಮವರು ಗಿಣಿ ಶಾಸ್ತ್ರ, ಕವಡೆ ಶಾಸ್ತ್ರ ಸಾವಿರ ಹೇಳ್ತಾರೆ. ಸಂವಿಧಾನದ ಚೌಕಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಊಹಾಪೋಹಗಳು ಎಲ್ಲಿಂದ ಹುಟ್ಟುತ್ತವೆ ಎಂದು ಗೊತ್ತು. ಯಾರೂ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ’ ಎಂದರು.

ADVERTISEMENT

ಕಾಂಗ್ರೆಸ್ ನಾಯಕರ ಬಗ್ಗೆ ಕಾರ್ಯಕರ್ತರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಘೋಷಣೆ ಕೂಗಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಾರ್ಯಕರ್ತರು ಅವರಿಗೆ ಬೇಕಾದ ನಾಯಕರಿಗೆ ಜಯಘೋಷ ಕೂಗುವುದರಲ್ಲಿ ಏನೂ ತಪ್ಪಿಲ್ಲ. ಅವರೇನು ಬಿಜೆಪಿಯವರಿಗೆ ಜಯಘೋಷ ಕೂಗಿಲ್ಲವಲ್ಲ‌. ಇದರಲ್ಲಿ ಯಾವ ವ್ಯಕ್ತಿ ಪೂಜೆಯೂ ಇಲ್ಲ. ಅವರವರ ನಾಯಕರು ಬಂದಾಗ ಸ್ವಾಗತಿಸುತ್ತಾರೆ. ಇದರಲ್ಲಿ ತಪ್ಪೇನಿಲ್ಲ’ ಎಂದು ಹೇಳಿದರು.

‘140 ಮಂದಿ ಶಾಸಕರು ಗೆದ್ದಿದ್ದು ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ. ಜನ ಮಲ್ಲಿಕಾರ್ಜುನ ಖರ್ಗೆ, ಸೊನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರಿನಲ್ಲಿ ಜನ ಮತ ನೀಡಿದ್ದಾರೆಯೇ ಹೊರತು ವೈಯಕ್ತಿಕವಾಗಿ ಯಾರಿಗೂ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದ ತೀರ್ಮಾನವೇ ಅಂತಿಮ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.