ADVERTISEMENT

ವೇಣುಗೋಪಾಲ್ ಮುಂದೆ ‘ಡಿ.ಕೆ..ಡಿ.ಕೆ’ ಎಂದು ಕಾರ್ಯಕರ್ತರ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 5:27 IST
Last Updated 3 ಡಿಸೆಂಬರ್ 2025, 5:27 IST
   

ಮಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಸಂಬಂಧಿಸಿದ ಗೊಂದಲಕ್ಕೆ ತೆರೆ ಬಿದ್ದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ..ಡಿ.ಕೆ ಎಂದು ಕೂಗಿದ ಪ್ರಸಂಗಕ್ಕೆ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣ ಬುಧವಾರ ಸಾಕ್ಷಿಯಾಯಿತು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ಮಾಹಾತ್ಮ ಗಾಂಧಿ- ನಾರಾಯಣ ಗುರು ಸಂವಾದದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ವೇಣುಗೋಪಾಲ್ ಅವರನ್ನು ಸ್ವಾಗತಿಸಲು ಸೇರಿದ್ದ ಕಾರ್ಯಕರ್ತರು ಕಾರಿನ ಸುತ್ತ ಸೇರಿ ಡಿ.ಕೆ ಘೋಷಣೆ ಕೂಗಿದರು.

ಅವರನ್ನು ಚದುರಿಸಿ ವೇಣುಗೋಪಾಲ್ ಅವರಿಗೆ ದಾರಿ ಮಾಡಿಕೊಡಲು ಪೊಲೀಸರು ಶ್ರಮಪಟ್ಟರು. ಸ್ಥಳದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಇದ್ದರು. ಆದರೆ ಅವರು ನಕ್ಕು ಸುಮ್ಮನಾಗಿದ್ದರು. ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪಾಲ್ಗೊಳ್ಳುತ್ತಿದ್ದಾರೆ.

ADVERTISEMENT

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಮಂಗಳವಾರ ನಡೆದ ಚಹಾ ಕೂಟದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಮಾಧ್ಯಮವದವರ ಜೊತೆ ಮಾತನಾಡಿ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಸಂದರ್ಭದಲ್ಲಿ ಅಗತ್ಯ ಬಿದ್ದರೆ ವೇಣುಗೋಪಾಲ್ ಜೊತೆ ರಾಜಕೀಯ ವಿಷಯದ ಬಗ್ಗೆ ಚರ್ಚೆ ಮಾಡುವೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.