ADVERTISEMENT

ದಕ್ಷಿಣ ಕನ್ನಡದಲ್ಲಿ ಶಾಂತಿ ಮರುಸ್ಥಾಪನೆ: ವಾರದಲ್ಲಿ ಮಧ್ಯಂತರ ವರದಿ ಸಲ್ಲಿಕೆ

ಕೆಪಿಸಿಸಿ ನಿಯೋಗದಿಂದ ಪ್ರಥಮ ಸುತ್ತಿನ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 6:30 IST
Last Updated 6 ಜೂನ್ 2025, 6:30 IST
<div class="paragraphs"><p>ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್‌ ಸುದ್ದಿಗೋಷ್ಠಿಯಲ್ಲಿ&nbsp; ಮಾತನಾಡಿದರು</p></div>

ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್‌ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದರು

   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಮತ್ತು ಶಾಂತಿ ಮರುಸ್ಥಾಪನೆ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಚಿಸಿರುವ ನಿಯೋಗ ಮೊದಲ ಹಂತದ ಪ್ರವಾಸ ಮುಗಿಸಿದ್ದು, ರಾಜ್ಯ ಸರ್ಕಾರ ಮತ್ತು ಪಕ್ಷಕ್ಕೆ ಮುಂದಿನ ವಾರ ಮಧ್ಯಂತರ ವರದಿ ಸಲ್ಲಿಸಲಿದೆ.

ನಿಯೋಗದ ನೇತೃತ್ವ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್‌, ನಿಯೋಗದ ಸದಸ್ಯರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್, ಮುಖಂಡರಾದ ಕಿಮ್ಮನೆ ರತ್ನಾಕರ್, ಜಯಪ್ರಕಾಶ್ ಹೆಗ್ಡೆ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು.

ADVERTISEMENT

‘ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಮುಖಂಡರನ್ನು, ಪೊಲೀಸ್‌ ಮತ್ತು ಕಂದಾಯ ಅಧಿಕಾರಿಗಳನ್ನು, ಎಲ್ಲ ಸಮುದಾಯಗಳ ಮುಖಂಡರು ಮತ್ತು ಧಾರ್ಮಿಕ ಮುಖಂಡರನ್ನು, ವ್ಯಾಪಾರೋದ್ಯಮ ಸಂಘಟನೆಗಳವರನ್ನು, ಜನಸಾಮಾನ್ಯರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ಎಲ್ಲರೂ ತಮ್ಮದೇ ಆದ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿ ಶಾಂತಿ ನೆಲೆಸಬೇಕು ಎಂಬುದೇ ಎಲ್ಲರ ಬಯಕೆಯಾಗಿದೆ’ ಎಂದರು.

‘ಇದೇ 9 ಮತ್ತು 10ರಂದು ನಿಗದಿಯಾಗಿದ್ದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರವಾಸವನ್ನು ಮುಂದೂಡಿದ್ದೇವೆ. ನಾವು ಈಗ ನಡೆಸಿದ ಪ್ರಥಮ ಹಂತದ ಅಧ್ಯಯನದ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಮತ್ತು ಕಾನೂನು ಸಚಿವರನ್ನು ಭೇಟಿಯಾಗಿ ಚರ್ಚಿಸಿ ಅವರಿಗೆ ಮಧ್ಯಂತರ ವರದಿ ಸಲ್ಲಿಸುತ್ತೇವೆ. ಮುಂದಿನ ಪ್ರವಾಸ ಜಿಲ್ಲಾ ಮಟ್ಟದಲ್ಲಿ ಇರಬೇಕೇ ಅಥವಾ ತಾಲ್ಲೂಕು ಮಟ್ಟದಲ್ಲಿ ಪ್ರವಾಸ ಕೈಗೊಳ್ಳಬೇಕೆ ಎಂಬ ಬಗ್ಗೆ ನಿರ್ಧರಿಸಿದ ನಂತರ ಎರಡನೇ ಹಂತದ ಪ್ರವಾಸ ಆರಂಭಿಸುತ್ತೇವೆ’ ಎಂದು ಹೇಳಿದರು.

‌‘ಕೊಲೆ– ಕೋಮು ಗಲಭೆ ನಡೆಯಬಾರದು. ಶಾಂತಿ–ಸೌಹಾರ್ದತೆ ಮತ್ತು ಪ್ರಗತಿ. ನಮ್ಮ ಪಕ್ಷದ ಸಂಘಟನೆ ಇವು ನಮ್ಮ ವರದಿಯ ಪ್ರಧಾನ ವಿಷಯಗಳಾಗಿರಲಿವೆ. ಕೋಮು ಸೌಹಾರ್ದತೆ ಈ ಮಟ್ಟಕ್ಕೆ ಹದಗೆಡಲು ಕಾರಣ ಏನು? ಕಾರ್ಯಾಂಗದ ವೈಫಲ್ಯವೇ? ಅದರ ಸುಧಾರಣೆಗೆ ಆಗಬೇಕಿರುವ ಕ್ರಮಗಳೇನು, ಕಾಂಗ್ರೆಸ್‌ ಪಕ್ಷ ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತಿದ್ದು, ನಮ್ಮ ಪಕ್ಷದಲ್ಲಿ ಇಲ್ಲಿ ಆಗಬೇಕಿರುವ ಬದಲಾವಣೆ ಏನು ಎಂಬೆಲ್ಲ ಅಂಶಗಳು ಈ ವರದಿಯಲ್ಲಿ ಇರಲಿವೆ. ಈ ವರದಿಯನ್ನು ಕೆಪಿಸಿಸಿಯವರೇ ಬಹಿರಂಗ ಪಡಿಸಲಿದ್ದಾರೆ‘ ಎಂದರು.

‘ಈ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸುತ್ತಿರುವವರು ಶೇ 2ರಷ್ಟು ಜನ ಮಾತ್ರ. ಶೇ 8ರಷ್ಟು ಜನ ಈ ಗಲಭೆಗಳಿಂದ ರಾಜಕೀಯ ಲಾಭ ಪಡೆಯಲು ಯತ್ತಿಸುತ್ತಿದ್ದಾರೆ. ಉಳಿದ ಶೇ 90ರಷ್ಟು ಜನರ ಯಾವ ಪಾತ್ರವೂ ಇದರಲ್ಲಿ ಇಲ್ಲ. ಕೋಮು ಹತ್ಯೆಗಳಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ’ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪಕ್ಷದ ಮುಖಂಡರಾದ ಪದ್ಮರಾಜ್.ಆರ್ ಪೂಜಾರಿ, ರಕ್ಷಿತ್ ಶಿವರಾಮ್, ಸತ್ಯಪ್ರಕಾಶ್‌ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.