610 ಪುಟ | 2 ವರ್ಷ 7 ತಿಂಗಳ ನಿರಂತರ ಶ್ರಮ
ಉಪ್ಪಿನಂಗಡಿ: ಇಲ್ಲಿನ ಕೆಮ್ಮಾರ ಶಕ್ತಿ ನಗರದ ಶಂಸುಲ್ ಉಲಮಾ ಶರೀಅತ್ ಕಾಲೇಜಿನ ವಿದ್ಯಾರ್ಥಿನಿ, ಉಪ್ಪಿನಂಗಡಿ ಹಳೇಗೇಟು ನಿವಾಸಿ ಫಾತಿಮತ್ ಅಬೀರ ಅವರು ಕುರಾನ್ ಧರ್ಮಗ್ರಂಥವನ್ನು ಸಂಪೂರ್ಣ ಕೈಬರಹದಲ್ಲಿ ಬರೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕುರಾನ್ ಪ್ರತಿ 610 ಪುಟಗಳನ್ನು ಹೊಂದಿದ್ದು, 2.260 ಗ್ರಾಂ ತೂಕ, 13 ಇಂಚು ಉದ್ದ ಹಾಗೂ 9 ಇಂಚು ಅಗಲ ಹೊಂದಿದೆ. ಬರೆಯಲು ಕಪ್ಪು ಬಣ್ಣದ ಇಂಕ್ ಹಾಗೂ ಪಿಂಕ್ ಕಲರ್ ಪೆನ್ನು ಬಳಸಲಾಗಿದೆ. ಮುದ್ದಾದ ಅಕ್ಷರದೊಂದಿಗೆ ಪೋಣಿಸಿದ ಈ ಪುಸ್ತಿಕೆ, ಮುದ್ರಿತ ಪುಸ್ತಕಕ್ಕಿಂತಲೂ ಅಂದ ಚೆಂದವಾಗಿ ಮೂಡಿ ಬಂದಿದೆ. ಮುಖಪುಟವೂ ಸುಂದರವಾಗಿ ಮೂಡಿ ಬಂದಿದೆ.
2 ವರ್ಷ 7 ತಿಂಗಳ ನಿರಂತರ ಶ್ರಮ:
2021 ಅಕ್ಟೋಬರ್ 25ರಂದು 9ನೇ ತರಗತಿಯಲ್ಲಿ ಕಡಬದ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವಾಗ ಬರೆಯಲು ಆರಂಭಿಸಿದ್ದು, ಮುಂದೆ 10ನೇ ತರಗತಿ ಸಾರ್ವತ್ರಿಕ ಪರೀಕ್ಷೆ ಹಿನ್ನೆಲೆಯಲ್ಲಿ ಕೈಬರವಣಿಗೆ ಕೆಲಸವನ್ನು ಕೈಬಿಟ್ಟಿದ್ದರು ನಂತರ ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜಿಗೆ ಫಾಳಿಲಾ ಶರೀಅತ್ ಶಿಕ್ಷಣದ ಜತೆಗೆ ಪಿಯುಸಿ ಕಲಿಯಲು ಪ್ರವೇಶ ಪಡೆದು ಕಲಿಕೆಯ ಮಧ್ಯೆ ಬಿಡುವು ಮಾಡಿಕೊಂಡು ನಿರಂತರ ಎರಡು ವರ್ಷದಲ್ಲಿ ಕುರಾನ್ ಮೂವತ್ತು ಕಾಂಡವನ್ನು ಬರೆದು ಮುಗಿಸಿದ್ದಾರೆ.
ಪಿಯುಸಿಯಲ್ಲಿ ಡಿಸ್ಟಿಂಕ್ಷನ್:
ವಿಶೇಷವೆಂದರೆ ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ 553 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಸಮಸ್ತ ಫಾಳಿಲಾ ಶರೀಅತ್ ಪಬ್ಲಿಕ್ ಪರೀಕ್ಷೆಯಲ್ಲಿ ಶೇ 95.5 ಅಂಕ ಪಡೆದು ಕೇಂದ್ರ ಬೋರ್ಡ್‌ನ ಟಾಪ್ 10ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದೀಗ ಮಿತ್ತಬೈಲ್ ದಾರುಲ್ ಉಲೂಂ ಕಾಲೇಜಿನಲ್ಲಿ ಬಿ.ಕಾಂ.ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಕ್ಯಾಲಿಗ್ರಾಫ್‌ನಿಂದ ಪ್ರೇರಿತಳಾಗಿ ಬರೆಯಲು ಆರಂಭಿಸಿದೆ:
ಕುಟುಂಬದ ವಾಟ್ಸ್ಆಪ್ ಗ್ರೂಪ್‌ನಲ್ಲಿ ಕ್ಯಾಲಿಗ್ರಾಫ್ ಸ್ಪರ್ಧೆ ನಡೆದಿತ್ತು. ಅದರಲ್ಲಿ ಅಲ್ಲಾಹುವಿನ ನಾಮಸ್ಮರಣೆಯ ಸೂಕ್ತಿಯನ್ನು ಮಾಡಿದ್ದೆ. ಅದನ್ನು ನೋಡಿದ ಕುಟುಂಬ ಸದಸ್ಯ ಲತೀಫ್ ಫೈಝಿ ಮೆಚ್ಚುಗೆ
ವ್ಯಕ್ತಪಡಿಸಿ ಇದನ್ನು ಮುಂದುವರಿಸಲು ಸೂಚಿಸಿದರು. ಅದೇ ಪ್ರೇರಣೆಯಿಂದ ಕುರಾನ್ ಬರೆಯಲಾರಂಭಿಸಿದ್ದು, ಮನೆಯವರ, ಕುಟುಂಬಸ್ಥರ ಮತ್ತು ಶರೀಅತ್ ಕಾಲೇಜಿನ ಉಸ್ತಾದರ, ಶಿಕ್ಷಕಿಯರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಫಾತಿಮತ್ ಅಬೀರ ‘ಪ್ರಜಾವಾಣಿ’ಗೆ ತಿಳಿಸಿದರು.
ಶಿಸ್ತು ಮೈಗೂಡಿಸಿಕೊಂಡ ಧಾರ್ಮಿಕ ಕಾಳಜಿಯ ವಿದ್ಯಾರ್ಥಿನಿ: ‘ಫಾತಿಮತ್ ಅಬೀರ ಶಿಸ್ತು, ಶ್ರಮವನ್ನು ಮೈಗೂಡಿಸಿಕೊಂಡಿರುವ ಧಾರ್ಮಿಕ ಕಾಳಜಿಯ ವಿದ್ಯಾರ್ಥಿನಿಯಾಗಿದ್ದಾಳೆ. ಕಾಲೇಜು ಕಲಿಕೆಯಲ್ಲಿಯೂ ಮುಂದೆ ಇದ್ದಾಳೆ. ಈಕೆ ಸಂಸ್ಥೆಗೆ ಮತ್ತು ನಮಗೆ ಗೌರವ ತರಿಸಿದ್ದು, ಈಕೆಯ ಸಾಧನೆ ನಮಗೆಲ್ಲ ಹೆಮ್ಮೆ, ಖುಷಿ ತಂದು ಕೊಟ್ಟಿದೆ’ ಎಂದು ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜಿನ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.