ADVERTISEMENT

ಮಂಗಳೂರು ಕಂಬಳ: 100 ಮೀ ದೂರವನ್ನು 8.69 ಸೆಕೆಂಡ್‌ನಲ್ಲಿ ಕ್ರಮಿಸಿದ ಕೋಣಗಳು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 15:29 IST
Last Updated 28 ಡಿಸೆಂಬರ್ 2025, 15:29 IST
   

ಮಂಗಳೂರು: ಕಂಬಳದ ಅತಿ ವೇಗದ ಓಟದ ದಾಖಲೆಯನ್ನು ಮಂಗಳೂರು ರಾಮ ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಕಲ್ಲಪಾಪು ಶ್ರೀಕಾ ಸಂದೀಪ್ ಶೆಟ್ಟಿ ಅವರ ಕೋಣಗಳ ಜೋಡಿ ಭಾನುವಾರ ಮುರಿದಿದೆ.

ಸಂಸದ ಕ್ಯಾ.ಬ್ರಿಜೇಶ್‌ ಚೌಟ ನೇತೃತ್ವದಲ್ಲಿ ನಗರದ ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ನಡೆದ ಕಂಬಳದಲ್ಲಿ ಶ್ರೀಕಾ ಸಂದೀಪ್ ಶೆಟ್ಟಿ ಮಾಲಿಕತ್ವದ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಕೋಣಗಳನ್ನು ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್‌ ಕುಮಾರ್ ಓಡಿಸಿದ್ದರು. ಆ ಕೋಣಗಳು 125 ಮೀ ಉದ್ದವನ್ನು 10.87 ಸೆಕೆಂಡ್‌ಗಳಲ್ಲಿ ಕ್ರಮಿಸಿದವು. ಅವು 100 ಮೀ ದೂರವನ್ನು 8.69 ಸೆಕೆಂಡ್‌ಗಳಲ್ಲಿ ಕ್ರಮಿಸಿದಂತಾಗಿದೆ.

ಮಂಗಳೂರು ಕಂಬಳದ ಸೆಮಿಫೈನಲ್‌ನಲ್ಲಿ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಕೋಣಗಳ ಜೋಡಿ 125 ಮೀಟರ್ ದೂರವನ್ನು 11.06 ಸೆಕೆಂಡ್ ನಲ್ಲಿ ಕ್ರಮಿಸಿದ್ದು ಈ ಋತುವಿನ ಅತಿ ವೇಗದ ಓಟ ಎಂದು ದಾಖಲಾಗಿತ್ತು. ಫೈನಲ್‌ನಲ್ಲಿ ಅದೇ ಕೋಣಗಳು ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದವು.

ADVERTISEMENT

ಕಂಬಳದ ಅತಿ ವೇಗದ ಓಟದ ದಾಖಲೆ ಈ ಹಿಂದೆ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಹೆಸರಿನಲ್ಲಿತ್ತು. 2021ರಲ್ಲಿ ಕಕ್ಯಪದವು ಕಂಬಳದಲ್ಲಿ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಅವರ ಮಾಳ ಪುಟ್ಟ ಮತ್ತು ಮಿಜಾರ್ ಅಪ್ಪು ಕೋಣಗಳನ್ನು ಓಡಿಸಿದ್ದರು. ಆ ಕೋಣಗಳು 125 ಮೀಟರ್ ಅನ್ನು 10.95 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದವು. ಅವು, 100 ಮೀ ದೂರವನ್ನು 8.76 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.