ADVERTISEMENT

ಮಂಗಳೂರು ಕಾರಾಗೃಹಕ್ಕೆ ದಿಢೀರ್‌ ಭೇಟಿ ನೀಡಿದ ಡಿಜಿಪಿ ಅಲೋಕ್‌ ಕುಮಾರ್‌

‘ನಿಷೇಧಿತ ಸಾಮಗ್ರಿ ಒಯ್ಯುವುದನ್ನು ತಡೆಯಲು ಎ.ಐ ಮೊರೆ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 14:06 IST
Last Updated 23 ಡಿಸೆಂಬರ್ 2025, 14:06 IST
<div class="paragraphs"><p>ಮಂಗಳೂರು ಕಾರಾಗೃಹವನ್ನು ಪರಿಶೀಲಿಸಿದ</p><p></p></div>

ಮಂಗಳೂರು ಕಾರಾಗೃಹವನ್ನು ಪರಿಶೀಲಿಸಿದ

   

ಮಂಗಳೂರು: ‘ಇಲ್ಲಿನ ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದ ಒಳಗಡೆ ನಿಷೇಧಿತ ಸಾಮಗ್ರಿಗಳು ತಲುಪುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವನ್ನು ಪ್ರಾಯೋಗಿಕ ನೆಲೆಯಲ್ಲಿ ಬಳಸುತ್ತೇವೆ’ ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮಹಾನಿರ್ದೇಶಕ ಅಲೋಕ್ ಕುಮಾರ್‌ ಹೇಳಿದರು.

ADVERTISEMENT

ಇಲ್ಲಿನ ಜಿಲ್ಲಾ ಕಾರಾಗೃಹಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಬೆಂಗಳೂರಿನ ಪರಪ್ಪನ ಅಗ್ರಹಾರ, ಮೈಸೂರು ಕಾರಾಗೃಹಗಳಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಪರಿಶೀಲನಾ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬಳಸಲಾಗಿದೆ. ಇಲ್ಲೂ ಅದನ್ನು ಬಳಸುವ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಅದು ಎಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಿಕೊಂಡು ಪೂರ್ಣಪ್ರಮಾಣದಲ್ಲಿ ಅದನ್ನು ಅಳವಡಿಸಿಕೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ’ ಎಂದರು.

‘ಜೈಲಿನಲ್ಲಿರುವ ಕೈದಿಗಳನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡರೆ, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಶೇ 60ರಷ್ಟು ಸಮಸ್ಯೆಗಳು ಹತೋಟಿಗೆ ಬರುತ್ತವೆ. ದೊಡ್ಡ ತರಲೆ ಮಾಡುವವರೇ ಇಲ್ಲಿಗೆ ಬರುವುದು. ಬಳಿಕ ಜಾಮೀನು ಪಡೆದು ಹೊರಗೆ ಬರುತ್ತಾರೆ. ಇಲ್ಲಿಯೇ ನಿಯಂತ್ರಿಸಿದರೆ ಎಲ್ಲವೂ ಸರಿಯಾಗುತ್ತದೆ. ಗಲಾಟೆ ಮಾಡಿದ ವಿಚಾರಣಾಧೀನ ಕೈದಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇನ್ನೊಂದಿಷ್ಟು ಕೈದಿಗಳನ್ನು ಬೇರೆ ಕಾರಾಗೃಹಗಳಿಗೆ ಕಳುಹಿಸುತ್ತೇವೆ’ ಎಂದು ತಿಳಿಸಿದರು‌.

‘ಜೈಲಿನಲ್ಲಿ ಅಳವಡಿಸಿದ ಮೊಬೈಲ್ ಸಿಗ್ನಲ್ ಜಾಮರ್‌ನಿಂದ ಆಸುಪಾಸಿನ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ 15ವರ್ಷಗಳಿಂದ ಕೇಳುತ್ತಿದ್ದೇನೆ. ಕಾಲ ಕಾಲಕ್ಕೆ ಕೆಲವೊಂದು ಬದಲಾವಣೆಗಳಾಗಿದೆ. ಆದರೆ ಇನ್ನೂ ಕೆಲವು ಸಮಸ್ಯೆಗಳು ಬಗೆಹರಿಯದೇ ಉಳಿದಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕಾರಾಗೃಹದಲ್ಲಿ ಮೊಬೈಲ್ ಪತ್ತೆ’

‘ಮಂಗಳೂರು ಜೈಲಿನಲ್ಲಿ ದಿಢೀರ್ ತಪಾಸಣೆ ನಡೆಸಿದ ವೇಳೆ ಸೋಮವಾರವೂ ಒಂದು ಮೊಬೈಲ್ ಫೋನ್ ಸಿಕ್ಕಿದೆ’ ಎಂದು ಅಲೋಕ್ ಕುಮಾರ್ ತಿಳಿಸಿದರು.

‘ಮಂಗಳೂರಿನದು ಸೂಕ್ಷ್ಮ ಕಾರಾಗೃಹ. ಇಲ್ಲಿ ಈಗಾಗಲೇ ಅನೇಕ ಸಲ ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳಲಾಗಿದೆ.‌ ದಿಢೀರ್‌ ಪರಿಶೀಲನೆ ಇನ್ನೂ ಮುಂದುವರಿಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.