ADVERTISEMENT

ಪುತ್ತೂರು | ಶಾಸಕ ಮಧ್ಯಪ್ರವೇಶ: ವೃದ್ಧ ದಂಪತಿಯ ಧರಣಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:23 IST
Last Updated 6 ಜನವರಿ 2026, 6:23 IST
ಪುತ್ತೂರು ಆಡಳಿತ ಸೌಧದ ಮುಂಭಾಗದಲ್ಲಿ ಧರಣಿ ನಿರತ ರಾಧಮ್ಮ ಮತ್ತು ಮುತ್ತು ಸ್ವಾಮಿ ದಂಪತಿಯ ಬಳಿಗೆ ಶಾಸಕ ಅಶೋಕ್ ರೈ ಅವರ ತೆರಳಿ ನ್ಯಾಯದ ಭರವಸೆ ನೀಡಿ ಧರಣಿ ಕೈಬಿಡುವಂತೆ ಮನವೊಲಿಸಿದರು
ಪುತ್ತೂರು ಆಡಳಿತ ಸೌಧದ ಮುಂಭಾಗದಲ್ಲಿ ಧರಣಿ ನಿರತ ರಾಧಮ್ಮ ಮತ್ತು ಮುತ್ತು ಸ್ವಾಮಿ ದಂಪತಿಯ ಬಳಿಗೆ ಶಾಸಕ ಅಶೋಕ್ ರೈ ಅವರ ತೆರಳಿ ನ್ಯಾಯದ ಭರವಸೆ ನೀಡಿ ಧರಣಿ ಕೈಬಿಡುವಂತೆ ಮನವೊಲಿಸಿದರು   

ಪುತ್ತೂರು: ‘ಮನೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ನೆಲಸಮಗೊಳಿಸಿ ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ, ನ್ಯಾಯ ಸಿಗುವವರೆಗೆ ತೆರಳುವುದಿಲ್ಲ’ ಎಂದು ಪಟ್ಟು ಹಿಡಿದು ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿಗಳಾದ ವೃದ್ಧ ರಾಧಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ಪುತ್ತೂರು ಆಡಳಿತ ಸೌಧದ ಮುಂಭಾಗದ ಮರದಡಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಶಾಸಕ ಅಶೋಕ್ ರೈ ಅವರ ಮಧ್ಯಪ್ರವೇಶದಿಂದ 8ನೇ ದಿನವಾದ ಸೋಮವಾರ ಅಂತ್ಯಗೊಂಡಿತು.

ದಂಪತಿಯನ್ನು ಭಾನುವಾರ ಭೇಟಿ ಮಾಡಿ ಸಮಸ್ಯೆ ಆಲಿಸಿದ್ದ ಶಾಸಕ ಅಶೋಕ್ ರೈ ಅವರು, ಅಧಿಕಾರಿಗಳೊಂದಿಗೆ ಸೋಮವಾರ ಮಾತುಕತೆ ನಡೆಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಅಶೋಕ್ ರೈ ಅವರು ಸೋಮವಾರ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಮತ್ತು ಕೌಕ್ರಾಡಿ ಗ್ರಾಮ ಆಡಳಿತ ಅಧಿಕಾರಿಯನ್ನು ಪುತ್ತೂರಿಗೆ ಕರೆಸಿ, ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್‌ ಸಮ್ಮುಖದಲ್ಲಿ ಮಾತುಕತೆ ನಡೆಸಿ, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ವೃದ್ಧ ದಂಪತಿಯ ಧರಣಿ ಕೊನೆಗೊಳಿಸಿದರು.

10 ದಿನದೊಳಗೆ ನೀವು ವಾಸ್ತವ್ಯವಿದ್ದ ಮನೆಯ ಅಡಿಸ್ಥಳವನ್ನು 94ಸಿ ಮೂಲಕ ನಿಮ್ಮ ಹೆಸರಿಗೆ ಮಂಜೂರು ಮಾಡಲಾಗುವುದು. ಮನೆ ಅಡಿಸ್ಥಳದ ದಾಖಲೆ ಸರಿಯಾದ ತಕ್ಷಣ ಸಂಬಂಧಪಟ್ಟ ಸಚಿವರಲ್ಲಿ ಮಾತುಕತೆ ನಡೆಸಿ ವಿಶೇಷ ಪ್ರಕರಣವಾಗಿ ರಾಜೀವ ಗಾಂಧಿ ವಸತಿ ನಿಗಮದ ಮೂಲಕ ಮನೆ ನಿರ್ಮಿಸಲು ₹ 2 ಲಕ್ಷ ಧನಸಹಾಯ ಒದಗಿಸಲಾಗುವುದು. ಇದಕ್ಕೆ ಒಪ್ಪಿ ನೀವು ಧರಣಿ ಹಿಂಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ADVERTISEMENT

ನಿಯಮ ಪ್ರಕಾರ ಅಗತ್ಯ ಕಾರ್ಯಗಳನ್ನು ಇಲಾಖೆಯಿಂದ ಮಾಡಲಾಗುವುದು ಎಂದು ಸ್ಟೆಲ್ಲಾ ವರ್ಗೀಸ್‌ ತಿಳಿಸಿದರು.

ಇದಕ್ಕೆ ಒಪ್ಪಿದ ಧರಣಿ ನಿರತರಿಗೆ ಶಾಸಕ ತಂಪುಪಾನೀಯ ನೀಡಿದರು. ದಂಪತಿ ಜತೆಗೆ ಪುತ್ರ ಸುಬ್ರಹ್ಮಣ್ಯ, ಪುತ್ರಿ ರೇಣುಕಾ, ನೀತಿ ತಂಡದ ಜಯಂತ್ ಟಿ.ಇದ್ದರು.

ಧರಣಿಗೆ ಎಲ್ಲರೂ ಕೈ ಜೋಡಿದ್ದಾರೆ. ಆದರೆ, ಇದು ಸುಳ್ಯ ಕ್ಷೇತ್ರದ ಸಮಸ್ಯೆ ಆಗಿದ್ದರೂ ಅಲ್ಲಿಯ ಜನಪ್ರತಿನಿಧಿ ಸೇರಿದಂತೆ ಯಾರೂ ಸ್ಪಂದನೆ ನೀಡಿಲ್ಲ. ಸುಳ್ಯ ಶಾಸಕರಿಗೆ ಎಲ್ಲ ಮಾಹಿತಿ ನೀಡಿದ್ದರೂ ಅವರು ನೊಂದವರ ಪರವಾಗಿ ನಿಂತಿಲ್ಲ. ಶಾಸಕ ಅಶೋಕ್ ರೈ ನೆರವಾಗುವ ಭರವಸೆ ನೀಡಿದ್ದಾರೆ ಎಂದು ಜಯಂತ್‌ ಟಿ. ಹೇಳಿದರು.

ಮರು ತನಿಖೆಗೆ ಸೂಚನೆ: ತನಿಖಾ ವರದಿಯನ್ನು ತಹಶೀಲ್ದಾರ್ ಇನ್ನೂ ನೀಡಿಲ್ಲ. ಏನಾದರೂ ತಪ್ಪು ಆಗಿದ್ದರೆ ಅಗತ್ಯ ಕ್ರಮಕ್ಕಾಗಿ ಕ್ರಮ ವಹಿಸಲಾಗುವುದು. 94ಸಿ ಅರ್ಜಿ ತಿರಸ್ಕೃತಗೊಂಡಿದ್ದರೂ ಮೇಲ್ಮನವಿ ಸಲ್ಲಿಸಲು ಅವಕಾಶಗಳಿದ್ದು, ಅವರು ಅದಕ್ಕೆ ಅರ್ಜಿ ಸಲ್ಲಿಸುತ್ತಾರೆ. ಮರು ತನಿಖೆ ನಡೆಸಲು ತಹಶೀಲ್ದಾರ್‌ಗೆ ಸೂಚನೆ ನೀಡಲಾಗುವುದು ಎಂದುಸ್ಟೆಲ್ಲಾ ವರ್ಗೀಸ್ ತಿಳಿಸಿದರು.

ಧರಣಿ ನಿರತರಿಗೆ ಶಾಸಕ ತಂಪು ಪಾನೀಯ ನೀಡುವ ಮೂಲಕ ಧರಣಿ ಅಂತ್ಯಗೊಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.