ADVERTISEMENT

ಬಸ್‌ ಪ್ರಯಾಣದಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ ಕಪಾಳಮೋಕ್ಷ

ಇನ್‌ಸ್ಟಾಗ್ರಾಂನಲ್ಲಿ ಆರೋ‍ಪಿ ಭಾವಚಿತ್ರ ಹಾಕಿದ್ದ ಯುವತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 13:35 IST
Last Updated 21 ಜನವರಿ 2021, 13:35 IST
ಕಾಸರಗೋಡಿನ ಪೆರ್ಲದ ಹುಸೈನ್ ಕುರಿತು ಇನ್‌ಸ್ಟಾಗ್ರಾಂನಲ್ಲಿ ಯುವತಿ ಹಾಕಿದ ಪೋಸ್ಟ್
ಕಾಸರಗೋಡಿನ ಪೆರ್ಲದ ಹುಸೈನ್ ಕುರಿತು ಇನ್‌ಸ್ಟಾಗ್ರಾಂನಲ್ಲಿ ಯುವತಿ ಹಾಕಿದ ಪೋಸ್ಟ್   

ಮಂಗಳೂರು: ಬಸ್‌ ಪ್ರಯಾಣದಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ, ನಗರದಲ್ಲಿನ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲೇನೊಂದ ಯುವತಿಯು ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ ನಡೆದಿದೆ.

ನಗರದ ದೇರಳಕಟ್ಟೆಯಲ್ಲಿಇದೇ 14 ರಂದುಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಾಸರಗೋಡಿನ ಪೆರ್ಲ ಬಳಿಯ ಹುಸೈನ್ (41) ಕಿರುಕುಳ ನೀಡಿದ್ದನು. ಆಕೆ ವಿರೋಧ ವ್ಯಕ್ತಪಡಿಸಿದಾಗ ಬಸ್‌ನಿಂದ ಇಳಿದಿದ್ದ ಆರೋಪಿಯು ಬಳಿಕ ಮತ್ತೊಂದು ಬಸ್‌ನಲ್ಲಿ ಹಿಂಬಾಲಿಸಿಕೊಂಡು ಬಂದು, ಮತ್ತೆ ಯುವತಿ ಇದ್ದ ಬಸ್‌ಗೆ ಹತ್ತಿ ಕಿರುಕುಳ ನೀಡಿದ್ದನು.

ಆರೋಪಿಯ ಫೋಟೊ ತೆಗೆದಿದ್ದ ಯುವತಿ, ಬಳಿಕ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಳು. ಈ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ಆರೋಪಿಯನ್ನು ಬಂಧಿಸಿದ ಪೊಲೀಸರು ಗುರುವಾರ ಕಮಿಷನರೇಟ್‌ ಕಚೇರಿಗೆ ಕರೆದುಕೊಂಡು ಬಂದಿದ್ದರು. ದಿಟ್ಟತನ ತೋರಿದ್ದ ಯುವತಿಯನ್ನು ಕಚೇರಿಯಲ್ಲಿ ಸನ್ಮಾನಿಸಿದ್ದರು. ಆಗ ಯುವತಿ ಹಾಗೂ ಆಕೆಯ ಜೊತೆಗಿದ್ದ ಮಹಿಳೆ ಆರೋಪಿಗೆ ಕಪಾಳಮೋಕ್ಷ ಮಾಡಿದ್ದಾರೆ.

‘ಸಮಾಜದಲ್ಲಿ ಅನೇಕ ಮಹಿಳೆಯರು ಮಾತ್ರವಲ್ಲ ಪುರುಷರೂ ಕಿರುಕುಳಕ್ಕೆ ಒಳಗಾಗುತ್ತಾರೆ. ಯಾರೂ ಸಹಿಸಿಕೊಂಡು ಕೂರಬೇಡಿ. ಇದನ್ನು ಬಹಿರಂಗವಾಗಿ ಪ್ರತಿಭಟಿಸಿದರೆ ಮಾತ್ರ ನಿಯಂತ್ರಿಸಬಹುದು’ ಎಂದು ಯುವತಿ ನಸೀಮಾ ಮಾಧ್ಯಮದ ಜೊತೆ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಾನು ವಿರೋಧ ವ್ಯಕ್ತಪಡಿಸಿದರೂ ಯಾರೂ ಸ್ಪಂದಿಸಿರಲಿಲ್ಲ. ಬಸ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯ ಬಗ್ಗೆ ಸ್ಪಂದಿಸಬೇಕು. ಇಂತಹ ಸಂದರ್ಭಗಳಲ್ಲಿ ಬಸ್ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರು ನೊಂದವರಿಗೆ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

ಪೊಲೀಸ್ ಕಾರ್ಯವನ್ನು ಶ್ಲಾಘಿಸಿದ ಅವರು, ‘ನನಗೆ ಮಾತ್ರವಲ್ಲ. ಎಲ್ಲ ಯುವತಿಯರು, ಮಹಿಳೆಯರಿಗೆ ಧೈರ್ಯ, ವಿಶ್ವಾಸ ಮೂಡಿಸುವ ಕಾರ್ಯ ಮಾಡಿದ್ದಾರೆ’ ಎಂದರು.

ಪ್ರಕರಣ ಭೇದಿಸಿದ ತಂಡಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ₹10 ಸಾವಿರ ಬಹುಮಾನ ನೀಡಿದರು. ಯುವತಿಯನ್ನು ಸನ್ಮಾನಿಸಿದರು. ಕಮಿಷನರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.