ADVERTISEMENT

ಟಿಪ್ಪು ಜಯಂತಿ ಕೈಬಿಟ್ಟರೆ ಮುಸ್ಲಿಂ ಶಾಸಕರು ರಾಜೀನಾಮೆ ನೀಡಲಿ: ಮುಸ್ಲಿಂ ಲೀಗ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 12:29 IST
Last Updated 4 ನವೆಂಬರ್ 2025, 12:29 IST
<div class="paragraphs"><p>ಟಿಪ್ಪು ಸುಲ್ತಾನ್</p></div>

ಟಿಪ್ಪು ಸುಲ್ತಾನ್

   

ಮಂಗಳೂರು: ‘ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಿಜೆಪಿಯವರ ವಿರೋಧಕ್ಕೆ ಮಣಿದು, ಎರಡು ವರ್ಷಗಳಿಂದ ಟಿಪ್ಪು ಜಯಂತಿ ಆಚರಿಸುವುದನ್ನು ನಿಲ್ಲಿಸಿದೆ. ಈ ಸಲ ನ. 10ರಂದು ಟಿಪ್ಪು ಜಯಂತಿ ಆಚರಿಸದಿದ್ದರೆ ರಾಜ್ಯದ ಮುಸ್ಲಿಂ ಸಚಿವರು ಮತ್ತು ಶಾಸಕರೆಲ್ಲ ರಾಜೀನಾಮೆ ನೀಡಿ ಪ್ರತಿಭಟಿಸಬೇಕು’ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸಿದೆ.‌

ಈ ಕುರಿತು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಸಿ.ಅಬ್ದುಲ್ ರಹಿಮಾನ್‌, ‘ಕ್ಷಿಪಣಿಯ ಜನಕ ಎಂದೇ ಖ್ಯಾತರಾಗಿರುವ ಟಿಪ್ಪು ಸುಲ್ತಾನ್‌ ಕನ್ನಂಬಾಡಿ ಅಣೆಕಟ್ಟೆಯ ರೂವಾರಿ. ತನ್ನ ಮಕ್ಕಳನ್ನೇ ದೇಶಕ್ಕಾಗಿ ಅರ್ಪಿಸಿ ತಾನೂ ಬಲಿದಾನ ಮಾಡಿದ ಧೀರ ಯೋಧ. ಯಾರೋ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆಂದು ಅಂತಹ ಮಹಾನ್ ವ್ಯಕ್ತಿಯ ಜನ್ಮದಿನಾಚರಣೆಯನ್ನು ಸರ್ಕಾರ ಕಡೆಗಣಿಸಬಾರದು’ ಎಂದರು.

ADVERTISEMENT

ಸಂಘಟನೆಯ ಉಪಾಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್‌, ‘ಟಿಪ್ಪು ಸುಲ್ತಾನ್‌ಗೆ ಮೈಸೂರಿನ ಹುಲಿ ಎಂದು ಬಿರುದು ಕೊಟ್ಟಿದ್ದು ಸ್ವತಃ ಬ್ರಿಟಿಷರು. ಅನೇಕ ದೇವಾಲಯಗಳಿಗೂ ಆತ ರಕ್ಷಣೆ ಮಾಡಿದ್ದ. ಕೆಲ ದೇವಾಲಯಗಳಲ್ಲಿ ಈಗಲೂ ಟಿಪ್ಪು ಹೆಸರಿನಲ್ಲಿ ‘ಸುಲ್ತಾನ್ ಕಾ ಸಲಾಂ’ ಆರತಿ ನಡೆಯುತ್ತದೆ’ ಎಂದರು.

‘ಈ ಹಿಂದೆ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಟಿಪ್ಪು ಕುರಿತ ಪಾಠಗಳಿದ್ದವು. ಅವುಗಳನ್ನು ತೆಗೆದು ಹಾಕಲಾಗಿದೆ. ನಾಡು ಕಂಡ ಧೀಮಂತ ರಾಜನ ಬಗ್ಗೆ ಇಂತಹ ಸಂಕುಚಿತ ಭಾವನೆ ಹೊಂದುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಬಿ.ಎಸ್.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್ ಮೊದಲಾದ ಬಿಜೆಪಿ ನಾಯಕರು ಈ ಹಿಂದೆ ಟಿಪ್ಪು ಗುಣಗಾನ ಮಾಡಿದ್ದರು. ಆದರೆ, ತಳ ಮಟ್ಟದ ಕೆಲವು ನಾಯಕರು ಟಿಪ್ಪು ಕುರಿತು ಕೇವಲವಾಗಿ ಮಾತನಾಡುತ್ತಾರೆ. ಟಿಪ್ಪುವನ್ನು ವಿರೋಧಿಸಿದ್ದ ಬಿಜೆಪಿಯ ಸಿ.ಟಿ.ರವಿ ಚುನಾವಣೆಯಲ್ಲಿ ಸೋತರು. ನಳಿನ್ ಕುಮಾರ್‌ರಂತಹ ನಾಯಕರು ಈಗ ಮೂಲೆಗುಂಪಾಗಿದ್ದಾರೆ’ ಎಂದರು.

‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್)ಕ್ಕೆ ನೂರು ವರ್ಷವಾಗಿದೆ ಎಂದು ಕೆಲವರು ಸಂಭ್ರಮಿಸುತ್ತಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷ ಆಗಿಲ್ಲ. ಹಾಗಿದ್ದರೆ ದೇಶವು ಇಬ್ಭಾಗ ಆಗುವಾಗ ಆರ್‌ಎಸ್‌ಎಸ್‌ ಸಂಘಟನೆ ಏನು ಮಾಡುತ್ತಿತ್ತು. ದೇಶ ವಿಭಜನೆ ತಡೆಯಲು ಆರ್‌ಎಸ್‌ಎಸ್ ಹೋರಾಡುತ್ತಿದ್ದರೆ ಆ ಸಂಘಟನೆಗೆ ಗೌರವ ಬರುತ್ತಿತ್ತು’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಖಜಾಂಚಿ ರಿಯಾಜ್ ಹರೇಕಳ, ಸದಸ್ಯ ಕೆ.ಎಸ್.ಅಬ್ದುಲ್ ಖಾದರ್‌ ಕಾವೂರು, ಅಬ್ದುಲ್ ರಹಮಾನ್ ಕಂದಕ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.