
ರಾಷ್ಟ್ರೀಯ ಹೆದ್ದಾರಿ ಬೈಕಂಪಾಡಿಯಲ್ಲಿ ಹೀಗಿದೆ ರಸ್ತೆ
ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರು: ಕೆಲಸಕ್ಕೆ ಹೊರಟ್ಟಿದ್ದ ಮಾಧವಿ ನಗರದ ಕೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ತಪ್ಪಿಸಲು ಪ್ರಯತ್ನಿಸುವಾಗ ಬಿದ್ದು ಅವರ ಮೇಲೆ ಟ್ರಕ್ ಹರಿದ ಪರಿಣಾಮ ಮೃತಪಟ್ಟು ನ.9ಕ್ಕೆ ಭರ್ತಿ 2 ತಿಂಗಳು ತುಂಬಿವೆ. ಮಾಧವಿ ಅವರ ಸಾವಿಗೆ ಮಿಡಿದ ಮಂಗಳೂರಿಗರು ಹೆದ್ದಾರಿ ಗುಂಡಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾಯಿತು, ರಾಜಕಾರಣಿಗಳು ಸಭೆ ನಡೆಸಿ, ಯೋಜನೆಗಳನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟದ್ದೂ ಆಯಿತು. ಆದರೆ ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಹಾಗೆಯೇ ಉಳಿದಿದೆ. ಗುಂಡಿಗಳನ್ನು ತಪ್ಪಿಸಲು ಸರ್ಕಸ್ ನಡೆಸುವುದು, ಬಿದ್ದು ಗಾಯಗಳಾಗುವುದು, ವಾಹನಕ್ಕೆ ಧಕ್ಕೆಯಾಗುವುದು ಎಲ್ಲವೂ ನಿರಂತರವೆಂಬಂತೆ ನಡೆಯುತ್ತಲೇ ಇದೆ.
ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್‌ನಿಂದ ಬಿಸಿ ರೋಡ್ ವರೆಗಿನ ಈ ಸಂಚಾರ ಸಂಕಷ್ಟ ಇಂದು ನಿನ್ನೆಯದಲ್ಲ. ದಶಕಗಳಿಂದ ಈ ದಾರಿ ಪ್ರಯಾಣಿಕರ ಪಾಲಿಗೆ ತೊಂದರೆಯಿಂದಲೇ ಕೂಡಿದೆ. ಇಲ್ಲಿ ಸಂಭವಿಸಿದ ಅಪಘಾತ ಮತ್ತು ಸಾವು–ನೋವಿಗೂ ಅದಕ್ಕೆ ಸಂಬಂಧಿಸಿ ನಡೆದ ಪ್ರತಿಭಟನೆಗಳಿಗೂ ರಸ್ತೆ ದುರಸ್ತಿ, ಸುಗಮ ಸಂಚಾರಕ್ಕಾಗಿ ಆಯೋಜಿಸಿದ ಹೋರಾಟಗಳಿಗೂ ರಸ್ತೆಯಷ್ಟೇ ದೊಡ್ಡ ಇತಿಹಾಸವಿದೆ. ಈ ಇತಿಹಾಸದ ಪುಟಗಳಲ್ಲಿ ಪರಿಶೀಲನೆಗಳು ಇವೆ, ಯೋಜನೆಗಳು ಇವೆ, ಆದೇಶಗಳೂ ಇವೆ. ಆದರೆ ಸಮಸ್ಯೆ ಪರಿಹಾರವಾದ ಉದಾಹರಣೆಗಳು ತೀರಾ ಕಡಿಮೆ ಇವೆ.
ಸರ್ವಿಸ್ ರಸ್ತೆಗಳ ಅಭಾವ, ವರ್ತುಲ ರಸ್ತೆ ಅಥವಾ ಬೈಪಾಸ್ ರಸ್ತೆಗಳ ಕೊರತೆ ಮುಂತಾದವು ಈ ಹೆದ್ದಾರಿಯಲ್ಲಿ ವಾಹನಗಳ ‘ಭಾರ’ ಹೆಚ್ಚಲು ಕಾರಣವಾಗಿದೆ. ಅಭಿವೃದ್ಧಿ ಅಥವಾ ಮೇಲ್ದರ್ಜೆಗೇರಿಸುವ ಕಾಮಗಾರಿಗೂ ಈ ‘ಇಲ್ಲ’ಗಳೇ ಕಾರಣ ಎಂಬುದು ಅಧಿಕಾರಿಗಳ ಸಮಜಾಯಿಷಿ. ಆದರೆ ಅವೈಜ್ಞಾನಿಕ ಕಾಮಗಾರಿ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಜನರ ಬಳಕೆದಾರರ ಉದಾಸೀನವೂ ಈ ಹೆದ್ಧಾರಿಯ ಅಭಿವೃದ್ಧಿ ಮಂಕಾಗಲು ಕಾರಣ ಎಂದು ಪ್ರಜ್ಞಾವಂತರು ಹೇಳುತ್ತಾರೆ. ರಾಜಕಾರಣ ಕೇವಲ ‘ಧರ್ಮಕಾರಣ’ಕ್ಕೆ ಸೀಮಿತಗೊಂಡಿರುವುದು ಕೂಡ ಮೂಲಸೌಲಭ್ಯಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ಚತುಷ್ಪಥಕ್ಕಾಗಿ ಒಂದೂವರೆ ದಶಕದ ಹಿಂದೆ ಹೋರಾಟ ಮಾಡಿದವರು ಹೇಳುತ್ತಾರೆ. ಪರ್ಯಾಯ ರಸ್ತೆ ಇಲ್ಲದೇ ಇರುವುದು ಮತ್ತು ಮಳೆಗಾಲದ ಬಿರುಸು ರಸ್ತೆಯನ್ನು ಮೇಲ್ದರ್ಜೆಗೇರಿಸುವ ಯೋಜನೆಗೆ ಕನಸಿಗೆ ಅಡ್ಡಿಯಾಗಿದೆ ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಿದ್ಧ ಉತ್ತರ.
ರಸ್ತೆ ‘ಕಂಬಳ’ ಗದ್ದೆಯಾದಾಗ...
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಚ್ಚು ಸಮಸ್ಯೆಯಾಗುವುದು ಮತ್ತು ಹೆಚ್ಚು ಆಕ್ರೋಶ ವ್ಯಕ್ತವಾಗುವುದು ಸುರತ್ಕಲ್‌ನಿಂದ ಮಂಗಳೂರು ವರೆಗಿನ ಹಾದಿಯಲ್ಲಿ. 2003–04ರ ಸಂದರ್ಭದಲ್ಲಿ ಜಲ್ಲಿ ಪುಡಿ ಹಾಕಿ ಇಲ್ಲಿ ವಾಹನ ಚಾಲಕರು ದಿಕ್ಕೆಡುವಂತೆ ಮಾಡಿದಾಗ ನಡೆದ ಪ್ರತಿಭಟನೆಯನ್ನು ಮೆಲುಕು ಹಾಕುವ ಟಿ.ಎನ್ ರಮೇಶ್, ಹರೀಶ್ ಪೇಜಾವರ ಮತ್ತು ಮುನೀರ್ ಕಾಟಿಪಳ್ಳ ಈ ರಸ್ತೆ ಒಮ್ಮೆಯೂ ಸಂಚಾರಯೋಗ್ಯ ಎಂದು ಕರೆಸಿಕೊಳ್ಳಲೇ ಇಲ್ಲ ಎಂದು ಬೇಸರದಿಂದ ಹೇಳುತ್ತಾರೆ.
‘ಚತುಷ್ಪಥ ರಸ್ತೆಯಾಗಿ ಪರಿವರ್ತನೆ ಆಗಲಿದೆ ಎಂಬ ಕಾರಣದಿಂದ ಹೆದ್ದಾರಿಯ ನಿರ್ವಹಣೆಯನ್ನು ಸಂಪೂರ್ಣ ಮರೆಯಲಾಗಿತ್ತು. ಹೀಗಾಗಿ ಭಾರಿ ದೊಡ್ಡ ಪ್ರತಿಭಟನೆಗೆ ಇಳಿಯಬೇಕಾಗಿ ಬಂತು. ಸುರತ್ಕಲ್‌ನಿಂದ ಪಣಂಬೂರು ವರೆಗೆ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಎತ್ತುಗಳನ್ನು ಇಳಿಸಿ ಕಂಬಳದಲ್ಲಿ ಓಡಿಸಿದಂತೆ ಮಾಡಲಾಗಿತ್ತು. ಕೆಲವರು ಮೀನು ಹಿಡಿದಂತೆ ಮಾಡಿದರು. ನಂತರ ಬೈಕ್‌ನಲ್ಲಿ ಕುಳಿತು ಕೊಟ್ಟಾರದ ವರೆಗೆ ಗುಂಡಿ ಮತ್ತು ವಾಹನ ಸವಾರರ ಕಷ್ಟಗಳನ್ನು ಚಿತ್ರೀಕರಿಸಿ ಸಿಡಿ ಮಾಡಿ ರಾಷ್ಟ್ರಮಟ್ಟದ ನಾಯಕರ ವರೆಗೂ ಕಳುಹಿಸಲಾಗಿತ್ತು’ ಎಂದು ಟಿ.ಎನ್ ರಮೇಶ್ ವಿವರಿಸಿದರು.
ನಂತರವೂ ನಡೆದಿವೆ ಹೋರಾಟಗಳು ಅನೇಕ. ಆದರೆ ರಸ್ತೆಯ ಕಥೆ ಬದಲಾಗಲೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ವರ್ಷವೂ ಮಳೆಗಾಲ ಆರಂಭವಾಗುವ ಮೊದಲೇ ಪ್ರತಿಭಟನೆಗಳು, ಮನವಿ ಸಲ್ಲಿಸುವ ಕಾರ್ಯ ಇತ್ಯಾದಿ ನಡೆದಿದೆ. ನಂತರ ಮಳೆಗಾಲ ಬಂತು. ರಸ್ತೆ ಕೊಳದಂತಾಯಿತು. ಮಳೆ ಮುಗಿಯಿತು. ಈಗ ತೇಪೆ ಹಾಕುವ, ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಆದರೆ ಅದು ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಮಾಧವಿ ಅವರ ಸಾವಿನ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯ ಎದುರು ಪ್ರತಿಭಟನೆ ನಡೆಯಿತು. ಸಂಸದರು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಗುಂಡಿ ಮುಚ್ಚುವುದಕ್ಕೆ ತಕ್ಷಣದ ಆದ್ಯತೆ ಎಂದು ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ಹೇಳಿದ್ದರು. 10 ದಿನಗಳ ಒಳಗೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಕಾಮಗಾರಿಯನ್ನು ವಹಿಸಿಕೊಂಡಿದ್ದವರು ಭರವಸೆ ನಿಡಿದ್ದರು. ಆದರೆ ನುಡಿದಂತೆ ಯಾವುದೂ ನಡೆಯಲೇ ಇಲ್ಲ.
ಈ ಸಾವಿಗೂ ಮೊದಲು, ಮಳೆಗಾಲ ಆರಂಭವಾಗುವ ಮೊದಲೇ ಫೆಬ್ರುವರಿಯಲ್ಲಿ ಡಿವೈಎಫ್‌ಯ ಸಂಘಟನೆಯವರು ನಂತೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಹೊಂಡ ತುಂಬಿದ ರಸ್ತೆಗಳ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲೆಕ್ಕವಿಲ್ಲದಷ್ಟು ಹರಿದಾಡಿದ್ದವು. ನಗರದ ಮೂಲಕ ಹಾದುಹೋಗುವ ಹೆದ್ದಾರಿ ವಿಷಯದಲ್ಲಿ ಮಹಾನಗರ ಪಾಲಿಕೆಯೂ ಗಮನ ಸೆಳೆದಿತ್ತು. ವ್ಯಕ್ತಿಯೊಬ್ಬರು ಸಂಸದರು, ಶಾಸಕರು, ಪೊಲೀಸ್ ಕಮಿಷನರ್, ಎಸ್‌ಪಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಹೊಂಡಗಳನ್ನು ಅವರು ‘ಸಾವಿನ ಕುಣಿಕೆ’ ಎಂದು ಬಣ್ಣಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಅಕ್ರಮಗಳು ನಡೆದಿರುವುದರಿಂದಲೇ ಗುಣಮಟ್ಟ ಕೆಟ್ಟಿದೆ. ಇದನ್ನು ತನಿಖೆಗೆ ಒಳಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೇಂದ್ರ ಭೂಸಾರಿಗೆ ಸಚಿವರನ್ನು ಕೋರಿದ್ದರು. ಅಷ್ಟೆಲ್ಲ ಆದರೂ ಜೀವವೊಂದು ಬಲಿಯಾಗುವ ವರೆಗೆ ಹೆದ್ದಾರಿ ದುರಸ್ತಿಗೆ ಯಾರೂ ಮುಂದಾಗಲಿಲ್ಲ.
ಮಾಧವಿ ಸಾವಿನ ನಂತರ, ಪೊಲೀಸರು ನೀಡಿದ ಮಾಹಿತಿ ಆಧಾರದಲ್ಲಿ ಹೆದ್ದಾರಿ ಪ್ರಾಧಿಕಾರ ಈ ಹೆದ್ದಾರಿಯಲ್ಲಿ 18 ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿತು. ಅವುಗಳನ್ನು ಮುಚ್ಚುವ ಕಾರ್ಯ ಸಂಸದರ ತುರ್ತು ಸಭೆಯ ನಂತರ ಶುರುವಾಯಿತಾದರೂ ಈ ಕಾಮಗಾರಿಯೂ ತೃಪ್ತಿಕರವಾಗಿಲ್ಲ ಎಂಬ ದೂರುಗಳು ಕೇಳಿಬಂದಿವೆ. ‘ರಸ್ತೆಯ ಇಬ್ಬದಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಇಲ್ಲ. ಕಾಂಕ್ರಿಟ್ ತುಂಬಿ ಪರಿಸರವನ್ನು ಬಿಸಿ ಮಾಡುವುದೇ ಅಭಿವೃದ್ಧಿ ಎಂದು ನಂಬಿದವರ ಎದುರು ಏನು ಹೇಳಿಯೂ ಪ್ರಯೋಜನ ಇಲ್ಲ’ ಎನ್ನುತ್ತಾರೆ, ಎನ್.ಟಿ ರಮೇಶ್.
ರಾಷ್ಟ್ರೀಯ ಹೆದ್ದಾರಿಯ ಕೂಳೂರು ಸೇತುವೆ ಬಳಿ ಕಾದಿರುವ ಅಪಾಯ
ಮಂಗಳೂರಿನ ಕೆಪಿಟಿ ವೃತ್ತದ ಬಳಿಯೂ ಇದೆ ಅಪಾಯಕಾರಿ ಹೊಂಡ
ಮಳೆ ಬಂತೆಂದರೆ ರಾಷ್ಟ್ರೀಯ ಹೆದ್ದಾರಿಯ ಕಥೆ ಇದು. ಕುಳೂರು ವೃತ್ತ
ಮಳೆ ಬಂದಿದ್ದಾಗ ಬೈಕಂಪಾಡಿ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿದ್ದುದು
ಬೇರೆಲ್ಲೂ ಈ ರಸ್ತೆಯಂಥ ಪರಿಸ್ಥಿತಿ ಇಲ್ಲ. ಎನ್‌ಐಟಿಕೆಯಿಂದ ಬೈಂದೂರುವರೆಗೆ ಇದೇ ರಾಷ್ಟ್ರೀಯ ಹೆದ್ದಾರಿ ಸುಸ್ತಿಯಲ್ಲಿದೆ. ಇಲ್ಲಿ ಒಮ್ಮೆಯೂ ಹೆದ್ದಾರಿ ಸಂಚಾರ ಯೋಗ್ಯವಾದ ಉದಾಹರಣೆ ಇಲ್ಲ ಎಂಬುದು ಬೇಸರದ ವಿಷಯ.ಎನ್.ಟಿ ರಮೇಶ್ ಹೋರಾಟಗಾರ
ಬೈಪಾಸ್ ಮತ್ತು ಸರ್ವಿಸ್ ರಸ್ತೆಗಳ ಅಭಾವ ಹಾಗೂ ಪ್ರತಿಕೂಲ ಹವಾಮಾನ ಈ ಹೆದ್ದಾರಿಯ ಅಭಿವೃದ್ಧಿ ಅಥವಾ ಮೇಲ್ದರ್ಜೆಗೇರಿಸುವ ಕೆಲಸಗಳಿಗೆ ಅಡ್ಡಿಯಾಗಿರುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್ ಅಜ್ಮಿ ಹೇಳುತ್ತಾರೆ. ಕಾಂಕ್ರಿಟ್ ರಸ್ತೆ ಮಾಡಿದರೆ ಇಲ್ಲಿನ ಸಮಸ್ಯೆಗೆ ಪರಿಹಾರವಾಗುತ್ತದೆ. ಆದರೆ ಅದಕ್ಕೆ ಸರ್ವಿಸ್ ರಸ್ತೆ ಇಲ್ಲವೇ ಬೈಪಾಸ್ ಇರಲೇಬೇಕು. ಸುರತ್ಕಲ್–ಬಿ.ಸಿ ರೋಡ್ ಮಧ್ಯೆ ರಸ್ತೆಯಲ್ಲಿ ಕೆಲವು ತಾಸುಗಳಿಗೂ ಸಂಚಾರ ಬಂದ್ ಮಾಡಲು ಸಾಧ್ಯವಿಲ್ಲ. ಮಾಡಿದರೆ ಪರ್ಯಾಯ ರಸ್ತೆಯೇ ಇಲ್ಲ. ಹೀಗಿರುವಾಗ ಕಾಂಕ್ರಿಟ್ ಹಾಕಲು ಹತ್ತಿಪ್ಪತ್ತು ದಿನ ರಸ್ತೆ ಮುಚ್ಚಲು ಸಾಧ್ಯವೇ ಎಂದು ಪ್ರಶ್ನಿಸುವ ಅವರು ಮಳೆ ಇಲ್ಲದ ಕಾಲ ಬಹಳ ಕಡಿಮೆಯಾಗಿರುವುದರಿಂದ ಡಾಂಬರ್ ರಸ್ತೆ ಇಲ್ಲಿ ಬಾಳಿಕೆ ಬರುವುದಿಲ್ಲ ಎಂದರು. ಈ ಹೆದ್ದಾರಿಯ ಮಾಸ್ಟರ್ ಪ್ಲ್ಯಾನ್‌ನಲ್ಲಿ ಬೈಪಾಸ್ ರಸ್ತೆಯ ಪ್ರಸ್ತಾಪ ಇದೆ. ಅದು ಹೆದ್ದಾರಿಯಿಂದ ತುಂಬ ದೂರವೇನೂ ಇಲ್ಲ. ಆದರೆ ಅದರ ಅನುಷ್ಠಾನಕ್ಕೆ ಅನೇಕ ಅಡ್ಡಿಗಳು ಇವೆ. ವಿಮಾನ ನಿಲ್ದಾಣದ ಕಡೆಯಿಂದ ಹಾದುಹೋಗಬೇಕಾಗಿರುವ ಆ ರಸ್ತೆ ಸಿಆರ್‌ಝಡ್ ವ್ಯಾಪ್ತಿಯಲ್ಲಿದೆ. ಆದ್ದರಿಂದ ಅನುಮತಿ ಬೇಕು. ವಿದ್ಯುತ್ ತಂತಿಗಳು ಹಾದುಹೋಗುವ ಜಾಗವಾಗಿರುವುದರಿಂದ ಸುರಕ್ಷತೆಯನ್ನೂ ನೋಡಿಕೊಳ್ಳಬೇಕು. ಈ ಎಲ್ಲ ದೃಷ್ಟಿಯಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಯೋಜನೆಯ ವಿನ್ಯಾಸ ಮಾಡುವವರು ಏನು ಮಾಡುತ್ತಾರೆ ಎಂಬುದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಜಾವೇದ್ ಅಜ್ಮಿ ಹೇಳಿದರು. ಸುರತ್ಕಲ್–ಬಿ.ಸಿ ರೋಡ್ ಮಧ್ಯೆ ಹೆದ್ದಾರಿಯಲ್ಲಿ 3 ವರ್ಷಗಳಿಂದ 5 ಸಾವು ಸಂಭವಿಸಿದ್ದು 10 ಮಂದಿ ತೀವ್ರ ಗಾಯಗೊಂಡಿದ್ದಾರೆ. ಅತಿಯಾದ ಮಳೆ ಮತ್ತು ಕಾರ್ಮಿಕರ ಕೊರತೆ ಈ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ. ಮಳೆಗಾಲದಲ್ಲಿ ಕೆಲಸ ಮಾಡಲು ಕಷ್ಟ. ಮಳೆ ಮುಗಿದ ನಂತರ ಕಾರ್ಮಿಕರು ಹಬ್ಬಕ್ಕೆಂದು ಅವರವರ ಊರಿಗೆ ಮರಳುತ್ತಾರೆ. ಇದೆಲ್ಲ ಮುಗಿದ ನಂತರ ಕೆಲಸಕ್ಕೆಂದು ಸಿಗುವುದು ಗರಿಷ್ಠ 5 ತಿಂಗಳು ಮಾತ್ರ ಎಂದು ಅವರು ಹೇಳಿದರು.
ಕೆಲಸಗಳು ಆಗಲು ರಾಜಕೀಯ ಇಚ್ಛಾಶಕ್ತಿ ಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮುಂದೆ ಕುಳಿತು ಕೆಲಸ ಮಾಡಿಸಿಕೊಳ್ಳಲು ಇಲ್ಲಿನ ರಾಜಕಾರಣಿಗಳು ಮನಸ್ಸು ಮಾಡಿದ್ದರೆ ಸುರತ್ಕಲ್–ಬಿ.ಸಿ ರೋಡ್ ಹೆದ್ದಾರಿ ಯಾವತ್ತೇ ಸಂಚಾರ ಯೋಗ್ಯ ಆಗಿರುತ್ತಿತ್ತು ಎಂದು ಅಧಿಕಾರಿಯಾಗಿ ರಾಜಕಾರಣಿಯಾಗಿ ಈ ರಸ್ತೆಯ ದುಸ್ಥಿತಿಯನ್ನು ಹಲವು ವರ್ಷಗಳಿಂದ ಕಂಡಿರುವ ಜೆ.ಆರ್ ಲೋಬೊ ಹೇಳಿದರು. ‘ಅಧಿಕಾರಿಗಳು ಮನಸ್ಸು ಮಾಡಿದರೆ ಯಾವ ಕೆಲಸವೂ ಆಗುತ್ತದೆ. ಅವರು ಮನಸ್ಸು ಮಾಡುವಂತೆ ರಾಜಕಾರಣಿಗಳು ಒತ್ತಡ ಹೇರಬೇಕು. ಸರಿಯಾದ ವಿಧಾನ ಅನುಸರಿಸಿದರೆ ಕೆಲಸಗಳನ್ನು ಮಾಡಿಸಬಹುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.