ADVERTISEMENT

ದಾಖಲೆ ಪರಿಶೀಲನೆಗೆ ಮಂಗಳೂರಿನಲ್ಲೇ ವ್ಯವಸ್ಥೆ ಮಾಡಿ: ಪೊಲೀಸರಿಗೆ ವಿದೇಶೀಯರ ಮನವಿ

ವಿದೇಶಿ ಪ್ರಜೆಗಳ ಜೊತೆ ಪೊಲೀಸರ ಸಂವಾದ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 12:21 IST
Last Updated 2 ಜುಲೈ 2022, 12:21 IST
ಸಂವಾದದಲ್ಲಿ ಭಾಗವಹಿಸಿದ ವಿದೇಶಿ ಪ್ರಜೆಗಳು
ಸಂವಾದದಲ್ಲಿ ಭಾಗವಹಿಸಿದ ವಿದೇಶಿ ಪ್ರಜೆಗಳು   

ಮಂಗಳೂರು: ಒಂದೆಡೆ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆ ಸಲುವಾಗಿ ದಾಖಲಾತಿ ಪರಿಶೀಲನೆಯನ್ನು ಚುರುಕುಗೊಳಿಸಿರುವ ಪೊಲೀಸರು, ಇನ್ನೊಂದೆಡೆ ನಗರದಲ್ಲಿ ನೆಲೆಸಿರುವ ವಿದೇಶಿಗರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುವುದಕ್ಕೂ ಅನುವು ಮಾಡಿಕೊಟ್ಟಿದ್ದಾರೆ.

ಇಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಅವರು ವಿದೇಶಿ ಪ್ರಜೆಗಳ ಸಮಸ್ಯೆಗಳನ್ನು ಆಲಿಸಿದರು.

ಅನಿವಾಸಿ ಭಾರತೀಯ ಜೆಂಜೆವ್‌ ಮೋಂತೆರೊ, ‘ಅನಿವಾಸಿ ಭಾರತೀಯರ ದಾಖಲಾತಿ ಪರಿಶೀಲನೆಯ ವಿಧಾನವನ್ನು ಸರಳೀಕರಿಸಬೇಕು. ನಗರದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ದಾಖಲೆಗಳ ಪರಿಶೀಲನೆಗಾಗಿ ಬೆಂಗಳೂರಿಗೆ ತೆರಳಬೇಕಾಗಿದೆ. ಇದಕ್ಕಾಗಿ ಮಂಗಳೂರಿನಲ್ಲಿ ಪ್ರತ್ಯೇಕ ಘಟಕವನ್ನು ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಇಂಗ್ಲೆಂಡ್‌ನ ಜಾನ್‌ ಹಿಸ್ಲೋಬ್‌, ‘ಮಂಗಳೂರು ಹಿಂದೆ ಹಸಿರುಮಯವಾಗಿತ್ತು. ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ವಿದೇಶಿ ಪ್ರಜೆಗಳಿಗೆ ಇಲ್ಲಿನ ಪೊಲೀಸ್‌ ವ್ಯವಸ್ಥೆ ಬಗ್ಗೆ ಆತಂಕಬೇಡ. ಅವರೊಂದಿಗೆ ಪ್ರಾಮಾಣಿಕವಾಗಿ ಸಹಕರಿಸಿ.ನಗರದಲ್ಲಿ ಜಾತಿ, ಧರ್ಮ ಹಾಗೂ ಬಣ್ಣದ ಆಧಾರದಲ್ಲಿ ತಾರತಮ್ಯ ಕಾಣಿಸದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಾನ್‌ ಅವರ ಪತ್ನಿ ಫ್ಲೋರಿನ್‌ ಹಿಸ್ಲೋಬ್‌ ಭಾರತೀಯರು. ಅವರನ್ನು 2004ರಲ್ಲಿ ಜಾನ್ ಮದುವೆಯಾಗಿದ್ದರು.

‘ನಾನು 66 ದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಈ ನಗರದ ಜನರ ಪ್ರೀತಿ–ವಿಶ್ವಾಸಕ್ಕೆ ಮಾರು ಹೋಗಿ ಅಂತಿಮವಾಗಿ ಮಂಗಳೂರಿನಲ್ಲೇ ವಾಸ್ತವ್ಯ ಮುಂದುವರಿಸಲು ನಿರ್ಧರಿಸಿದ್ದೇನೆ’ ಎಂದು ಫ್ಲೋರಿನ್‌ ಹಿಸ್ಲೋಬ್‌ ಹೆಮ್ಮೆಯಿಂದ ಹೇಳಿಕೊಂಡರು.

‘ವಿದೇಶಿ ಪ್ರಜೆಗಳು ವಲಸೆಗೆ ಸಂಬಂಧಿಸಿದ ದಾಖಲಾತಿಗಳನ್ನು ಸಮರ್ಪಕವಾಗಿಟ್ಟುಕೊಳ್ಳಬೇಕು. ಯಾವುದೇ ಅಕ್ರಮ ಚಟುವಟಿಕೆಯಲ್ಲಿ ತೊಡಗಬಾರದು’ ಎಂದು ಅವರು ಮನವಿ ಮಾಡಿದರು.

‘ವಿದೇಶಿಯರು ವಾಹನವನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಲು ಅವಕಾಶ ನೀಡುತ್ತಿಲ್ಲ‌’ ಎಂದು ಇರಾನ್‌ ಪ್ರಜೆಯೊಬ್ಬರು ಅಳಲು ತೋಡಿಕೊಂಡರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಶಶಿಕುಮಾರ್‌ ಭರವಸೆ ನೀಡಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಅಧ್ಯಯನ ನಡೆಸುತ್ತಿರುವ ತಾಂಜೇನಿಯ ಪ್ರಜೆಯೊಬ್ಬರು, ‘ಇಲ್ಲಿ ನಾಗರಿಕರು ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಎಲ್ಲ ವಿದೇಶಿ ಪ್ರಜೆಗಳು ಅಹವಾಲು ಹೇಳಿಕೊಳ್ಳುವುದಕ್ಕೆ ವೇದಿಕೆಯೊಂದನ್ನು ರೂಪಿಸಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಗರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಕೇಂದ್ರೀಯ ಗುಪ್ತವಾರ್ತೆ ವಿಭಾಗದ ಉಪಾಧಿಕಾರಿ (ಡಿಸಿಐಒ) ಹರೀಶ್ಚಂದ್ರ, ‘ವಿದೇಶಿ ಪ್ರಜೆಗಳು ಇಲ್ಲಿನ ರಾಜಕೀಯ ಚಟುವಟಿಕೆಗಳಲ್ಲಿ ಮೂಗು ತೂರಿಸಬಾರದು. ಇಲ್ಲಿನ ವಿದ್ಯಾರ್ಥಿ ಸಂಘಟನೆಗಳ ಜೊತೆ ಸೇರಿಕೊಳ್ಳಬಾರದು. ಯಾವುದೇ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಬಾರದು’ ಎಂದು ಕಿವಿಮಾತು ಹೇಳಿದರು.

‘ವಿದೇಶದಿಂದ ಬಂದವರು ವಿದೇಶಿಯರ ನೋಂದಣಿ ಕಚೇರಿಯಲ್ಲಿ (ಎಫ್‌ಆರ್‌ಒ) ನೋಂದಾಯಿಸಬೇಕು. ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತಾರದೆ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯನ್ನು ಬದಲಾಯಿಸುವಂತಿಲ್ಲ’ ಎಂದರು.

ಶಿಕ್ಷಣ, ಉದ್ಯೋಗ ಮತ್ತಿತರ ಉದ್ದೇಶಗಳಿಗಾಗಿ 50 ದೇಶಗಳ 336 ಮಂದಿ ಮಂಗಳೂರು ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ 218 ಮಂದಿ ವಿದ್ಯಾರ್ಥಿ ವಿಸಾದಡಿ ಬಂದಿರುವವರು ಹಾಗೂ 40 ಮಂದಿ ಅನಿವಾಸಿ ಭಾರತೀಯ(ಒಸಿಐ‌) ಗುರುತಿನ ಚೀಟಿ ಹೊಂದಿದ್ದಾರೆ.

***

ಹೋಳಿ, ರಕ್ಷಾಬಂಧನ ಹಬ್ಬಗಳನ್ನು ನಾವೂ ಆಚರಿಸುತ್ತೇವೆ. ಇಲ್ಲಿನ ನೆಲದ ವೈವಿಧ್ಯಕ್ಕೆ ಮಾರುಹೋಗಿದ್ದೇವೆ. ಹುಟ್ಟಿದ ನೆಲದಲ್ಲಿ ಅನುಭವಿಸಲಾಗದ ಸ್ವಾತಂತ್ರ್ಯವನ್ನು ಈ ನೆಲದಲ್ಲಿ ಅನುಭವಿಸುತ್ತಿದ್ದೇನೆ

ಸಯೀದ್‌ ಅನ್ವರ್‌, ವಿಶ್ವ ಯುವ ಸಂಘಟನೆ ಅಧ್ಯಕ್ಷ, (ಅಪ್ಗಾನಿಸ್ತಾನದ ಪ್ರಜೆ)

ಈ ನೆಲದ ಸಂಪ್ರದಾಯ, ಸಂಸ್ಕೃತಿ ಅರ್ಥೈಸಿಕೊಂಡಿದ್ದೇನೆ. ಹಿಂದಿ ಭಾಷೆಯನ್ನು ಕಲಿತಿದ್ದೇನೆ. ಮಂಗಳೂರಿನ ವಾಸವು ನನಗೆ ಅದ್ಭುತ ಅನುಭವಗಳನ್ನು ಕಟ್ಟಿಕೊಟ್ಟಿದೆ. ಇಲ್ಲಿ ಯಾವತ್ತೂ ಕಿರುಕುಳ ಅನುಭವಿಸಿಲ್ಲ

ಫರ್ಕುಂಡು ಅಕ್ಬಾರಿ, ಅಫ್ಗಾನಿಸ್ತಾನದ ಪ್ರಜೆ

ವಿದೇಶಿಯರ ಸ್ಪಂದನೆಗಾಗಿ ವಾಟ್ಸ್‌ಆ್ಯಪ್‌ ಬಳಗ

‘ಎಲ್ಲ ವಿದೇಶಿ ಪ್ರಜೆಗಳು ಅಹವಾಲು ಹೇಳಿಕೊಳ್ಳಲು ಅನುಕೂಲ ಕಲ್ಪಿಸುವ ಸಲುವಾಗಿ ವಾಟ್ಸ್‌ಆ್ಯಪ್ ಬಳಗವನ್ನು ರಚಿಸುತ್ತೇವೆ. ಯಾವುದೇ ನೆರವಿನ ಅಗತ್ಯ ಬಿದ್ದರೆ ತುರ್ತು ಸ್ಪಂದನಾ ಸಂಖ್ಯೆಗೆ (112) ಕರೆ ಮಾಡಬಹುದು‘ ಎಂದು ಶಶಿಕುಮಾರ್‌ ತಿಳಿಸಿದರು.

ನಗರದಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಇತ್ತೀಚೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದರು.

ನಗರದಲ್ಲಿ ನೆಲೆಸಿರುವ ವಿದೇಶಿಗರ ವಿವರ

ಅಫ್ಗಾನಿಸ್ತಾನ; 82

ಬಾಂಗ್ಲಾದೇಶ; 11

ಇಥಿಯೋಪಿಯಾ;25

ಮಲೇಷ್ಯಾ; 11

ಯೆಮನ್‌; 20

ಇರಾಕ್‌; 13

ಫಿಲಿಪ್ಪೀನ್ಸ್‌; 17ಶ್ರೀಲಂಕಾ; 20

ಇಂಗ್ಲೆಂಡ್‌; 16

ಅಮೆರಿಕ; 18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.