ADVERTISEMENT

ಸೇ ನೋಟು ಟು ಡ್ರಗ್ಸ್‌: ಖಾಸಗಿ ಬಸ್‌ನಿಂದ ಹೀಗೊಂಡು ಜಾಗೃತಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 13:38 IST
Last Updated 20 ಅಕ್ಟೋಬರ್ 2020, 13:38 IST
ಡ್ರಗ್ಸ್‌ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಖಾಸಗಿ ಬಸ್‌
ಡ್ರಗ್ಸ್‌ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಖಾಸಗಿ ಬಸ್‌   

ಮಂಗಳೂರು: ಕರಾವಳಿಯಲ್ಲಿ ಮಾದಕ ವಸ್ತುಗಳ ಹಾವಳಿ ವ್ಯಾಪಕವಾಗುತ್ತಿರುವ ಮಧ್ಯೆ ನಗರದ ಖಾಸಗಿ ಬಸ್‌ವೊಂದು ಮೈಯೆಲ್ಲ ಡ್ರಗ್ಸ್‌ ಜಾಗೃತಿ ಸಂದೇಶಗಳನ್ನು ಹೊತ್ತು, ಜನರಲ್ಲಿ ಅರಿವು ಮೂಡಿಸುತ್ತಿದೆ.

ನಗರದ ರೂಟ್ ನಂ. 27 ರಲ್ಲಿ ಸಂಚರಿಸುವ ಗಣೇಶ್ ಪ್ರಸಾದ್ ಬಸ್‌ನ ತುಂಬೆಲ್ಲ ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಅಳವಡಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಇತ್ತೀಚೆಗೆ ಹೆಚ್ಚು ಸದ್ದು ಮಾಡಿದ ವಿಚಾರ. ಬುದ್ಧಿವಂತ ಜನರ ಜಿಲ್ಲೆ ಎನಿಸಿಕೊಂಡಿರುವ ಮಂಗಳೂರಿನಲ್ಲಿಯೂ ಡ್ರಗ್ಸ್ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು ಮುಂದಾಗಿರುವ ನಗರದ ಸಿಟಿ ಬಸ್‌ ಗಣೇಶ್‌ ಪ್ರಸಾದ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ‘ಸೇ ನೋ ಟು ಡ್ರಗ್ಸ್‌’ ಎಂಬಿತ್ಯಾದಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಸಂದೇಶಗಳನ್ನು ಹೊಂದಿರುವ ಪೋಸ್ಟರ್‌ ಈ ಬಸ್‌ನ ತುಂಬಾ ರಾರಾಜಿಸುತ್ತಿದೆ.

ADVERTISEMENT

ಡ್ರಗ್ಸ್ ಸೇವನೆಯಿಂದ ಆಗುವ ದುಷ್ಪರಿಣಾಮಗಳು, ಡ್ರಗ್ಸ್‌ನಿಂದ ದೂರ ಇರುವುದು ಹೇಗೆ ಎಂಬಿತ್ಯಾದಿ ಸಂದೇಶಗಳನ್ನು ಚಿತ್ರಗಳನ್ನು ಬಸ್‌ನಲ್ಲಿ ಅಂಟಿಸಲಾಗಿದೆ. ಈ ಮೂಲಕ ಬಸ್ ಮಾಲೀಕರು ಜಾಗೃತಿ ಮೂಡಿಸುತ್ತಿರುವುದು ಉತ್ತಮ ವಿಚಾರ ಎಂದು ಪ್ರಯಾಣಿಕರು ಶ್ಲಾಘಿಸಿದ್ದಾರೆ.

ಈ ಹಿಂದೆ ತುಳು ಲಿಪಿಯ ವರ್ಣಮಾಲೆಗಳ ಮೂಲಕ ಇದೇ ಬಸ್ ಗಮನ ಸೆಳೆದಿತ್ತು. ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ತುಳು ಅಕ್ಷರಗಳ ಸ್ಟಿಕ್ಕರ್‌ಗಳನ್ನು ಅಂಟಿಸಿ ಕಾಳಜಿ ವ್ಯಕ್ತಪಡಿಸಿತ್ತು. ಇದೀಗ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿ ಸಮಾಜ ಸೇವೆಯನ್ನು ಬಸ್ ಮಾಲಿಕರು ಮಾಡಿದ್ದಾರೆ.

ಸಿಟಿ ಬಸ್‌ಗಳನ್ನು ಜನರ ಪ್ರಯಾಣಕ್ಕೆ ಮಾತ್ರವಲ್ಲ, ಬದಲಾಗಿ ಜನಜಾಗೃತಿ ಮೂಡಿಸುವ ವೇದಿಕೆಯಾಗಿಯೂ ಬಳಸಲೂ ಸಾಧ್ಯ ಎಂಬುದನ್ನು ಈ ಬಸ್ ಸಾಧಿಸಿ ತೋರಿಸಿದೆ. ಆ ಮೂಲಕ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.