ಡಾಂಬರ್ ಕಿತ್ತು ಹೋಗಿ ಕಚ್ಚಾ ರಸ್ತೆಯಂತೆ ಕಾಣುವ ಬಿಜೈ ವಾರ್ಡ್‌ನ ಒಳ ರಸ್ತೆ
ಮಂಗಳೂರು: ಬಿಜೈ ನ್ಯೂ ರೋಡ್ ಕಂಡು ಬೆರಗಾದವರು, ಹಾಗೆಯೇ ಮುಂದೆ ಸಾಗಿ ಕೆಲವು ಒಳ ರಸ್ತೆಗಳಿಗೆ ಅಡಿಯಿಟ್ಟರೆ, ವಾಸ್ತವದ ದರ್ಶನವಾಗುತ್ತದೆ. ಹರಿದ ಅಂಗಿಯಂತೆ ಅಲ್ಲಲ್ಲಿ ಕಿತ್ತು ಹೋಗಿರುವ ಡಾಂಬರ್ ರಸ್ತೆಗಳು, ತೋಡಿಲ್ಲದ ದಾರಿಗಳು, ದುರ್ವಾಸನೆ ಬೀರುವ ಚರಂಡಿ, ಇವನ್ನೆಲ್ಲ ಸಹಿಸಿಕೊಂಡು ಬದುಕಬೇಕಾದ ಅನಿವಾರ್ಯತೆ...
ನಗರದ ಬಿಜೈ ವಾರ್ಡ್‌ಗೆ ಭೇಟಿ ನೀಡಿದಾಗ ಸ್ಥಳೀಯ ನಿವಾಸಿಗಳು ತೋಡಿಕೊಂಡ ನೋವಿದು. ಸದಾ ಜನದಟ್ಟಣೆ, ವಾಹನ ದಟ್ಟಣೆ ಇರುವ ಪ್ರದೇಶ ಬಿಜೈ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇಲ್ಲೇ ಇರುವುದರಿಂದ ಹೊರ ಊರಿನಿಂದ ಬರುವ ಅತಿಥಿಗಳಿಗೆ ಮೊದಲ ನೋಟಕ್ಕೆ ಮಂಗಳೂರಿನ ಚಿತ್ರಣ ಕಟ್ಟಿಕೊಡುವುದು ಇದೇ ಪ್ರದೇಶ.
ಬಿಜೈ ವಾರ್ಡ್‌ನ ಮುಖ್ಯ ರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ. ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಬಹುತೇಕ ಕಡೆ ಪಾದಚಾರಿ ಮಾರ್ಗಗಳು ಇವೆ. ಆದರೆ, ಕೆಲವು ಒಳ ರಸ್ತೆಗಳು ಡಾಂಬರು ಕಾಣದೆ ಹಲವಾರು ವರ್ಷಗಳಾಗಿವೆ. ಹಿಂದೆ ಹಾಕಿರುವ ಡಾಂಬರ್ ಕಿತ್ತು ಹೋಗಿದೆ ಎಂಬುದು ನಿವಾಸಿಗಳ ಆರೋಪ.
ರಾಜಕಾಲುವೆಯಲ್ಲಿ ಕೆಲವು ವಸತಿ ಸಮುಚ್ಚಯಗಳ ಕೊಳಚೆ ನೀರು ಹರಿಯುತ್ತದೆ. ಇದರಿಂದ ಇಡೀ ಪರಿಸರ ದುರ್ನಾತವಾಗಿದೆ. ಮುಸ್ಸಂಜೆ ಆಗುತ್ತಿದ್ದಂತೆ ವಿಪರೀತ ಸೊಳ್ಳೆ ಕಾಟ. ಒಳ ರಸ್ತೆಗಳ ಬದಿಯಲ್ಲಿ ತೋಡು ಇಲ್ಲದ ಕಾರಣ ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತದೆ. ಬಿಜೈ ನ್ಯೂ ರಸ್ತೆ ಅಭಿವೃದ್ಧಿಗೆ ನೀಡಿರುವ ಅರ್ಧದಷ್ಟು ಗಮನವನ್ನಾದರೂ ಒಳರಸ್ತೆಗಳಿಗೆ ಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಮಳೆಗಾಲ ಬಂದರೂ ಸಣ್ಣ ತೋಡುಗಳನ್ನು ಸ್ವಚ್ಛಗೊಳಿಸುವ ಕೆಲಸ ಪಾಲಿಕೆಯಿಂದ ಆಗಿಲ್ಲ. ರಸ್ತೆ ಬದಿಯಲ್ಲಿ ಕೆಲವರು ಕಸ ಇಟ್ಟು ಹೋಗುತ್ತಾರೆ. ಇವರ ಮೇಲೆ ಪಾಲಿಕೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ವಸತಿ ಸಮುಚ್ಚಯಗಳಿಗೆ ಅನಧಿಕೃತವಾಗಿ ಹೆಚ್ಚುವರಿ ನಳದ ಸಂಪರ್ಕ ನೀಡಲಾಗಿದೆ. ಇದರ ಬಗ್ಗೆ ಅರಿವಿದ್ದರೂ ಪಾಲಿಕೆ ಕಣ್ಮುಚ್ಚಿ ಕುಳಿತಿದೆ ಎಂದು ಸ್ಥಳೀಯ ಅಂಗಡಿಯವರೊಬ್ಬರು ಆರೋಪಿಸಿದರು.
ಬಿಜೈ ಆನೆಗುಂಡಿ ಪರಿಸರದಲ್ಲಿ ಒಳಚರಂಡಿ ಸೋರಿಕೆ ಸಮಸ್ಯೆ ಇದೆ. ಕುಂಟಿಕಾನ ಕೆಎಸ್‌ಆರ್‌ಟಿಸಿ ಡಿಪೊದಿಂದ ಕೊಡಿಯಾಲ್‌ಬೈಲ್ ವೆಟ್‌ವೆಲ್‌ಗೆ ಹರಿಯುವ ಮುಖ್ಯ ಒಳಚರಂಡಿ ಹಾಗೂ ಅದಕ್ಕೆ ಸಂಪರ್ಕ ಹೊಂದಿರುವ ಉಪ ಕೊಳವೆಗಳು 1970ರ ಸಮಯದಲ್ಲಿ ನಿರ್ಮಿಸಿದವಾಗಿವೆ. ಹಲವೆಡೆ ಕೆಂಪು ಕಲ್ಲಿನಿಂದ ನಿರ್ಮಿಸಿರುವ ಒಳ ಚರಂಡಿಯ ಆಳ ಗುಂಡಿಗಳು ಬಿರುಕು ಬಿಟ್ಟು ಶಿಥಿಲವಾಗಿವೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನೈಜಿಲ್ ಅಲ್ಬುಕರ್ಕ್. ಇದನ್ನು ಒಪ್ಪಿಕೊಂಡಿರುವ ಮಹಾನಗರ ಪಾಲಿಕೆಯು ಈ ಬಗ್ಗೆ ಸಮೀಕ್ಷೆ ನಡೆಸಿ, ಅನುಮತಿ ಪಡೆದು ಕಾಮಗಾರಿ ನಡೆಸುವುದಾಗಿ 2022 ಡಿಸೆಂಬರ್‌ನಲ್ಲಿ ಲಿಖಿತ ಪತ್ರ ನೀಡಿತ್ತು. ನಂತರದಲ್ಲಿ ಕಾಮಗಾರಿ ಜಿಲ್ಲಾಧಿಕಾರಿ ಅನುಮತಿ ಪಡೆಯಲಾಗಿತ್ತು. ಮಳೆಗಾಲದ ಪೂರ್ವದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಎರಡು ತಿಂಗಳುಗಳ ಹಿಂದೆ ಪಾಲಿಕೆ ಎಂಜಿನಿಯರ್‌ಗಳು ಭರವಸೆ ನೀಡಿದ್ದರು. ಆದರೆ, ಮಳೆಗಾಲ ಸಮೀಪಿಸಿದರೂ, ಎಲ್ಲಿಯೂ ಕಾಮಗಾರಿ ನಡೆದಿರುವುದು ಕಾಣುತ್ತಿಲ್ಲ ಎಂದು ಅವರು ಆರೋಪಿಸಿದರು.
ಒಳಚರಂಡಿ ಪೈಪ್ ಬದಲಾಯಿಸಬೇಕು
ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಕಾಲುವೆಗೆ ಸೇರುವುದನ್ನು ತಡೆಗಟ್ಟಬೇಕು
ಅನಧಿಕೃತ ನಳ ಸಂಪರ್ಕ ತೆರವುಗೊಳಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.