
ಉಜಿರೆ: ವಿದ್ಯೆಯನ್ನು ಮನೆಬಾಗಿಲಿಗೆ ಒದಗಿಸುವ ಉದ್ದೇಶದಿಂದ ಉಜಿರೆಯಲ್ಲಿ ಹಲವು ರೀತಿಯ ವಿದ್ಯಾಸಂಸ್ಥೆಗಳನ್ನು ಆರಂಭಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಂದ ಊರಿನ ಸರ್ವತೋಮುಖ ಪ್ರಗತಿಯಾಗುತ್ತದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.
ಉಜಿರೆ ಎಸ್‌ಡಿಎಂ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸಲು ಧರ್ಮಸ್ಥಳದಿಂದ ಪುದುವೆಟ್ಟು, ಬೈಂದೂರು, ಪೆರಿಂಜೆ, ಬೆಳಾಲು ಮತ್ತು ಕಾಂಚನದಲ್ಲಿರುವ ಶಾಲೆಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಲಾಗಿದೆ. ಊರಿನವರ ಸಕ್ರಿಯ ಸಹಕಾರ ಹಾಗೂ ಶಿಕ್ಕ ವೃಂದದವರು ಪ್ರೀತಿ-ವಿಶ್ವಾಸ ಮತ್ತು ಅಭಿಮಾನದಿಂದ ಮಾಡುವ ಸೇವೆಯಿಂದಾಗಿ ಎಲ್ಲ ಶಾಲೆಗಳಲ್ಲಿಯೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಹೇಳಿದರು.
ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಾದ 11 ಶಿಕ್ಷಕರನ್ನು ಗೌರವಿಸಲಾಯಿತು.
ಶಾಲೆಯಲ್ಲಿ ನಿವೃತ್ತರಾದ ಪ್ರೇಮಲತ, ವಿಶಾಲಾಕ್ಷಿ, ಎಂ.ಸಂಜೀವ ಗೌಡ, ನಳಿನಿ, ಮೋಹನ ಎಸ್.ಜೈನ್, ರಮೇಶ್ ಆಚಾರ್, ಶಾಂತಾ, ಹರ್ಷಕುಮಾರ್, ಶಶಿಕಲಾ, ಜಯಭಾರತಿ ಮತ್ತು ಸೋಮಶೇಖರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ್ ಕಾರಂತ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಭಾಗವಹಿಸಿದ್ದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್.ಸತೀಶ್ಚಂದ್ರ, ಶಾಲೆಯ ಹಿರಿಯ ವಿದ್ಯಾರ್ಥಿ, ಬಾಗಲಕೋಟೆ ವಿ.ವಿ.ಯ ಕುಲಸಚಿವ ಔದ್ರಾಮ ಮಾತನಾಡಿದರು.
ಶಾಲಾ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕ ಬಾಲಕೃಷ್ಣ ನಾಯ್ಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.