ADVERTISEMENT

ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರಕ್ಕೆ ಆಗ್ರಹ: ಸರ್ಕಾರದ ವಿರುದ್ಧ BJP ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 10:33 IST
Last Updated 25 ನವೆಂಬರ್ 2025, 10:33 IST
<div class="paragraphs"><p>ಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು</p></div>

ಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು

   

ದಾವಣಗೆರೆ: ಮೆಕ್ಕೆಜೋಳ ಹಾಗೂ ಭತ್ತವನ್ನು‌ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಜ್ಯದಾದ್ಯಂತ ಬಿಜೆಪಿ ನ.27ರಿಂದ ಕರೆನೀಡಿರುವ ಹೋರಾಟಕ್ಕೆ ಚಾಲನೆ ದೊರೆಯಿತು. ವಿಧಾನಸಭಾ ಕ್ಷೇತ್ರ, ಜಿಲ್ಲಾ ಕೇಂದ್ರಗಳ ಬಳಿಕ ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ADVERTISEMENT

ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋರಾಟ ಆರಂಭಿಸಲಾಯಿತು. ಇಲ್ಲಿಂದ ಎತ್ತಿನ ಬಂಡಿಯೊಂದಿಗೆ ಹೊರಟ ಮೆರವಣಿಗೆ ಉಪವಿಭಾಗಾಧಿಕಾರಿ ಕಚೇರಿ ತಲುಪಿತು. ಮೆಕ್ಕೆಜೋಳವನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಲಾಯಿತು.

‘ರಾಜ್ಯದ ಹಲವು ಜಿಲ್ಲೆಗಳಲ್ಲಿ 45 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಲಾಗಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದರೂ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ರೈತ ವಿರೋಧಿ ಸರ್ಕಾರವನ್ನು ಬಡಿದೆಬ್ಬಿಸಲು ಹೋರಾಟ ನಡೆಸಲಾಗುತ್ತಿದೆ. ಮಧ್ಯ ಕರ್ನಾಟಕದಲ್ಲಿ ಆರಂಭವಾಗಿರುವ ಹೋರಾಟ ಬೆಳಗಾವಿ ಹಾಗೂ ಬೆಂಗಳೂರು ತಲುಪಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ರೈತರಿಗೆ ಅನುಕೂಲವಾಗಿಲ್ಲ. ರೈತರ ಯಾವುದೇ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿಲ್ಲ. ಡಿ.8ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಕಿವಿ ಹಿಂಡುವ ಕೆಲಸ ಆಗಬೇಕಿದೆ. ಕಬ್ಬು, ಭತ್ತ, ಮೆಕ್ಕೆಜೋಳ ಬೆಳೆಗಾರರು ಬೆಳಗಾವಿಗೆ ಬನ್ನಿ’ ಎಂದು ಆಹ್ವಾನ ನೀಡಿದರು.

‘ಅತಿವೃಷ್ಟಿಯಿಂದಾಗಿ ರೈತ ಬೆಳೆದ ಬೆಳೆ ಸಂಪೂರ್ಣ ನಷ್ಟವಾಗಿದೆ. ರೈತರ ಸಂಕಷ್ಟ ಆಲಿಸಲು ಕೃಷಿ ಮತ್ತು ಕಂದಾಯ ಸಚಿವರು ಹಳ್ಳಿಗಳಿಗೆ ಭೇಟಿ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜನರಿಗೆ ಸ್ಪಂದಿಸುತ್ತಿಲ್ಲ. ಸರ್ಕಾರ ಘೋಷಣೆ ಮಾಡಿದ ಪರಿಹಾರ 50 ದಿನ ಕಳೆದರೂ ರೈತರನ್ನು ತಲುಪಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹೊಸಪೇಟೆಯ ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ಗೇಟ್ ಬದಲಾವಣೆ ಇನ್ನೂ ಆಗಿಲ್ಲ. ಇದರ ಪರಿಣಾಮವಾಗಿ ಕೊಪ್ಪಳ, ರಾಯಚೂರು, ಬಳ್ಳಾರಿ ರೈತರಿಗೆ ಎರಡನೇ ಬೆಳಗೆ ನೀರು ಸಿಗುತ್ತಿಲ್ಲ. ರೈತರ ವಿರೋಧಿ ಸರ್ಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ನೀರು ಕೊಡದೇ ಇದ್ದರೆ ಪ್ರತಿ ಎಕರೆಗೆ ₹ 25,000 ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿದರು.

‘ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಕುರ್ಚಿ ಮೇಲೆ ಇರುವಷ್ಟು ಕಾಳಜಿ ರೈತರ ಮೇಲಿಲ್ಲ. ಕುರ್ಚಿಯ ಮೇಲೆ ಕೂರಿಸಿದ ಜನರಿಗೆ ಕುರ್ಚಿಯಿಂದ ಕೆಳಗೆ ಇಳಿಸುವುದೂ ಗೊತ್ತಿದೆ. ಶಾಸಕರ ಖರೀದಿ ನಿಲ್ಲಿಸಿ ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ತೆರೆಯಬೇಕು. ಇಲ್ಲದಿದ್ದರೆ ರೈತರ ಕೈಯಲ್ಲಿರುವ ಬಾರುಕೋಲು ವಿಧಾನಸೌಧಕ್ಕೆ ಬರಲಿದೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಮಾಡಾಳು ವಿರೂಪಾಕ್ಷಪ್ಪ, ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಸತೀಶ್ ಬಿ.ಎಂ. ಕೋಳೆನಹಳ್ಳಿ, ಧನಂಜಯ್ ಕಡ್ಲೆಬಾಳ್, ಬಿ.ಜೆ. ಅಜಯ್ ಕುಮಾರ್, ಚಂದ್ರಶೇಖರ ಪೂಜಾರ್ ಹಾಜರಿದ್ದರು.

‘ಕುರ್ಚಿ ಕಾಳಗ ನಿಲ್ಲಲ್ಲಿ’

‘ರಾಜ್ಯದ ಮುಖ್ಯಮಂತ್ರಿ ಕುರ್ಚಿಗೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕಾಳಗ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ನಿಲ್ಲಲಿ. ಎಲ್ಲ ರೀತಿಯ ಗೊಂದಲಗಳನ್ನು ಬಗೆಹರಿಸಿಕೊಂಡು ಅಧಿವೇಶನಕ್ಕೆ ಬರಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.

‘ಚಳಿಗಾಲದ ಅಧಿವೇಶನದ ಮೇಲೆ ರೈತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕುರ್ಚಿ ಕಾಳಗ ಮುಂದುವರಿದರೆ ರೈತರಿಗೆ ಅನ್ಯಾಯವಾಗುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅಸಹಾಯಕರಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯಾರು ಎಂಬುದನ್ನು ವಿದೇಶದಲ್ಲಿ ಕುಳಿತ ರಾಹುಲ್‌ ಗಾಂಧಿ ನಿರ್ಧರಿಸುತ್ತಿರುವುದು ವಿಪರ್ಯಾಸ’ ಎಂದು ಆರೋಪಿಸಿದರು.

ರೈತರ ಬಗ್ಗೆ ಸಿದ್ದರಾಮಯ್ಯಗೆ ಅಸಹನೆ ಇದೆ. ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿಗೆ ಕಲ್ಲು ಹಾಕಿದ್ದಾರೆ. ₹ 30,000ಕ್ಕೆ ಸಿಗುತ್ತಿದ್ದ ವಿದ್ಯುತ್‌ ಪರಿವರ್ತಕ ₹3 ಲಕ್ಷಕ್ಕೂ ಲಭ್ಯವಾಗುತ್ತಿಲ್ಲ.
–ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.