ಕೆಸರಿನಲ್ಲಿಯೇ ನಡೆಯುತ್ತಿರುವ ಚನ್ನಗಿರಿಯ ವಾರದ ಸಂತೆ
ಚನ್ನಗಿರಿ: ಪಟ್ಟಣದಲ್ಲಿ ಪ್ರತಿ ಶುಕ್ರವಾರ ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ಸಂತೆ ನಡೆಯುತ್ತದೆ. ಬೇರೆ ಬೇರೆ ಊರಿನ ಜನ ಖರೀದಿಗಾಗಿ ಇಲ್ಲಿಗೆ ಬರುತ್ತಾರೆ. ಆದರೆ ಮಳೆಗಾಲ ಬಂತೆಂದರೆ ಸಾಕು, ಜನರಿಗೆ ಸಂತೆಯ ಚಿಂತೆ ಕಾಡುತ್ತದೆ.
ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿದ್ದರೂ ವ್ಯಾಪಾರಿಗಳು ಅಲ್ಲಿ ವಹಿವಾಟು ನಡೆಸದೆ ಕೆಸರಿನಲ್ಲಿಯೇ ವ್ಯಾಪಾರ ನಡೆಸುವಂತಾಗಿದೆ.
ವಾರದ ಸಂತೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅಂದಾಜು 5 ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ದಿನಸಿ, ತರಕಾರಿ ಇತರೆ ವಸ್ತುಗಳನ್ನು ಖರೀದಿಸುತ್ತಾರೆ. ಹೀಗಾಗಿ ಜನದಟ್ಟಣೆ ಜಾಸ್ತಿಯಾಗುತ್ತದೆ. ಇದರೊಂದಿಗೆ ಕುರಿ, ಕೋಳಿಗಳ ವ್ಯಾಪಾರವೂ ಜೋರಾಗಿ ನಡೆಯುತ್ತದೆ. ಇದೆಲ್ಲವೂ ನಡೆಯುವುದು ಕೆಸರು ಗದ್ದೆಯಂತಾಗಿರುವ ಜಾಗದಲ್ಲೇ.
ಪುರಸಭೆ ವ್ಯಾಪ್ತಿಗೆ ಸೇರಿದ 2 ಎಕರೆ ಜಮೀನಿನಲ್ಲಿ ವಾರದ ಸಂತೆ ನಡೆಯುತ್ತಿದ್ದು, ಈಗಾಗಲೇ ಎಪಿಎಂಸಿಯಿಂದ ₹ 2 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ. ಎರಡು ವರ್ಷಗಳಾದರು ಯಾರೊಬ್ಬರೂ ಈ ಮಾರುಕಟ್ಟೆ ಸ್ಥಳಕ್ಕೆ ಕಾಲಿಟ್ಟಿಲ್ಲ. ಬದಲಿಗೆ ಖಾಲಿ ಜಾಗದಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ. ಪ್ರತಿವರ್ಷ ವಾರದ ಸಂತೆಯನ್ನು ₹ 10 ಲಕ್ಷಕ್ಕಿಂತಲೂ ಅಧಿಕ ಮೊತ್ತಕ್ಕೆ ಹರಾಜು ಮಾಡಲಾಗುತ್ತದೆ. ಹಾಗಾಗಿ ಈ ವಾರದ ಸಂತೆ ಸ್ಥಳವು ಪುರಸಭೆಗೆ ಪ್ರಮುಖ ಆದಾಯ ತರುವ ಜಾಗವಾಗಿದೆ.
ಪುರಸಭೆಯವರು ಸುಸಜ್ಜಿತವಾದ ವಾರದ ಸಂತೆ ಮಾರುಕಟ್ಟೆ ನಿರ್ಮಿಸಿದ್ದಾರೆ. ಆದರೆ ಅಲ್ಲಿ ವ್ಯಾಪಾರ ಮಾಡಲು ನಿಗದಿಪಡಿಸಿರುವ ಸ್ಥಳ ಕಿರಿದಾಗಿದೆ. ತರಕಾರಿ ಹಾಗೂ ಇತರೆ ವಸ್ತುಗಳನ್ನು ಇಟ್ಟುಕೊಳ್ಳಲು ಅದು ಸಾಕಾಗುವುದಿಲ್ಲ. ಈ ಕಾರಣದಿಂದಾಗಿ ಸುಸಜ್ಜಿತ ಮಾರುಕಟ್ಟೆಗೆ ಯಾವ ವ್ಯಾಪಾರಿಗಳು ಹೋಗಲು ಮುಂದಾಗುತ್ತಿಲ್ಲ.
‘ಸಂತೆ ಮಾರುಕಟ್ಟೆಯ ಜಾಗ ಕಿರಿದಾಗಿದೆ. ಅಲ್ಲಿನ ರಸ್ತೆಯಲ್ಲಿ ದ್ವಿಚಕ್ರ ವಾಹನ, ಕಾರು, ಆಟೊಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಸಂತೆಯ ದಿನ ಮಾತ್ರ ವಾಹನಗಳ ಸಂಚಾರ ನಿಷೇಧಿಸಿದರೆ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ದೇವೇಂದ್ರಪ್ಪ.
ಸುಸಜ್ಜಿತ ಮಾರುಕಟ್ಟೆಯಲ್ಲಿ ಸಂತೆ ನಡೆಸಲು ಕ್ರಮ: ಮುಖ್ಯಾಧಿಕಾರಿ
‘ಸುಸಜ್ಜಿತವಾದ ಸಂತೆ ಮಾರುಕಟ್ಟೆ ಸ್ಥಳದಲ್ಲಿ ಶೌಚಾಲಯ, ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಆದರೂ ವ್ಯಾಪಾರಿಗಳು ಅಲ್ಲಿಗೆ ಹೋಗದೆ ಬಯಲು ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ’ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ತಿಳಿಸಿದರು.
‘ಈಗಾಗಲೇ ಅನೇಕ ಬಾರಿ ಸಂತೆ ನಡೆಯುವ ಸ್ಥಳಕ್ಕೆ ಹೋಗಿ ವ್ಯಾಪಾರಿಗಳ ಮನವೊಲಿಸಲಾಗಿದೆ. ಸುಸಜ್ಜಿತ ಮಾರುಕಟ್ಟೆ ಸ್ಥಳದಲ್ಲಿ ವ್ಯಾಪಾರ–ವಹಿವಾಟು ನಡೆಸುವಂತೆ ಹೇಳಲಾಗಿದೆ. ಹೀಗೆ ಸೂಚಿಸಿದಾಗ ಮಾತ್ರ ಆ ಸ್ಥಳದಲ್ಲಿ ವ್ಯಾಪಾರ ಮಾಡುತ್ತಾರೆ. ನಾವು ಅಲ್ಲಿಂದ ಮರಳಿದ ಮೇಲೆ ಬಯಲು ಪ್ರದೇಶದಲ್ಲೇ ಯಥಾ ಪ್ರಕಾರ ವ್ಯಾಪಾರ ಮುಂದುವರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಸಂತೆ ಮಾರುಕಟ್ಟೆ ಸ್ಥಳದಲ್ಲಿಯೇ ಸಂತೆ ನಡೆಸುವಂತೆ ಸೂಚಿಸಲಾಗುತ್ತದೆ. ಈ ವಿಚಾರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.