ADVERTISEMENT

45ನೇ ವಾರ್ಡ್‌ನಲ್ಲಿ ಬಂಡಾಯಗಾರರಿಗೆ ಕಾಂಗ್ರೆಸ್‌ ಮನ್ನಣೆ

ಬಂಡಾಯ ಶಮನಕ್ಕೆ ಬಿಜೆಪಿ, ಕಾಂಗ್ರೆಸ್‌ ಕೊನೇ ಕ್ಷಣದ ಯತ್ನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 10:25 IST
Last Updated 4 ನವೆಂಬರ್ 2019, 10:25 IST

ದಾವಣಗೆರೆ: 45ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಬಂಡಾಯವಾಗಿ ನಾಮಪತ್ರ ಸಲ್ಲಿಸಿದವರಿಗೂ ಬೇಡಿಕೆ ಬಂದು ಬಿಟ್ಟಿದೆ. ಜತೆಗೆ ಬಂಡಾಯ ಅಭ್ಯರ್ಥಿಗಳ ಸಂಖ್ಯೆಯೂ ಜಾಸ್ತಿ ಇರುವುದರಿಂದ ಬಂಡಾಯಗಾರರಲ್ಲಿ ಯಾರು ಹಿತವರು ಎಂಬ ಹುಡುಕಾಟ ನಡೆದಿದೆ.

ಎಸ್‌.ಜೆ.ಎಂ. ನಗರ, ಯರಗುಂಟೆ, ಕರೂರುಗಳನ್ನು ಒಳಗೊಂಡ ಈ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಸಾಗರ ಎಲ್‌.ಎಚ್‌. ನಾಮಪತ್ರ ಸಲ್ಲಿಸಿದ್ದರು. ಆದರೆ ನೇರ ನೇಮಕಾತಿಯಾಗಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದರಿಂದ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಈ ವಾರ್ಡ್‌ನಲ್ಲಿ 15 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಮೂರು ತಿರಸ್ಕೃತಗೊಂಡಿದ್ದವು.

ಈಗ ಉಳಿದಿರುವ 11 ಮಂದಿಯಲ್ಲಿ ನಾಲ್ಕು ಮಂದಿ ಕಾಂಗ್ರೆಸ್‌ನಿಂದ ಬಿ ಫಾರ್ಮ್‌ ಸಿಗದೇ ಬಂಡಾಯ ಅಭ್ಯರ್ಥಿಗಳಾಗಿರುವವರು. ಈ ನಾಲ್ವರಲ್ಲಿ ಒಬ್ಬರನ್ನು ಬೆಂಬಲಿಸಬೇಕಾದ ಅನಿವಾರ್ಯ ಸನ್ನಿವೇಶ ಕಾಂಗ್ರೆಸ್‌ಗೆ ಬಂದಿದೆ. ಭಾನುವಾರ ಬಂಡಾಯ ಅಭ್ಯರ್ಥಿಗಳಾದ ವೆಂಕಟೇಶ್‌, ಎಂ.ಜಿ.ನಾಗೇಶ್‌, ಉದಯಕುಮಾರ್‌, ಆನಂದಪ್ಪ ಅವರ ಜತೆ ಪಕ್ಷದ ಮುಖಂಡರು ಮಾತುಕತೆ ನಡೆಸಿದ್ದಾರೆ.

ADVERTISEMENT

ಒಬ್ಬರನ್ನು ಬೆಂಬಲಿಸಿ ಉಳಿದವರು ನಾಮಪತ್ರ ಹಿಂಪಡೆಯುವಂತೆ ತಿಳಿಸಲಾಗಿದೆ. ಆ ಒಬ್ಬರು ಯಾರು ಎಂಬುದು ಸೋಮವಾರ ಬೆಳಿಗ್ಗೆ 11ಕ್ಕೆ ಅಂತಿಮಗೊಳ್ಳಲಿದೆ ಎಂದು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಧ್ಯಕ್ಷ ಅಯೂಬ್‌ ಪೈಲ್ವಾನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇದಲ್ಲದೇ ಜಾಲೀನಗರ (ವಾರ್ಡ್‌ 7), ಸುರೇಶ್‌ನಗರ (ವಾರ್ಡ್‌ 8), ಆವರಗೆರೆ (ವಾರ್ಡ್‌30)ಗಳಲ್ಲೂ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳಿದ್ದಾರೆ. ಎಲ್ಲಾ ಬಂಡಾಯ ಅಭ್ಯರ್ಥಿಗಳ ಮನವೊಲಿಸಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲು ಮುಖಂಡರು ಪ್ರಯತ್ನ ಪಡುತ್ತಿದ್ದಾರೆ.

ಬಿಜೆಪಿಗೂ ಕಡಿಮೆಯಾಗದ ತಲೆನೋವು: ಬಿಜೆಪಿಯಿಂದ ಬಂಡಾಯವೆದ್ದು ನಿಂತಿರುವ ಬಹುತೇಕರು ಮನವೊಲಿಕೆಗೆ ತಲೆಬಾಗಿಲ್ಲ. ನಿಟುವಳ್ಳಿಯ ಬಂಡಾಯ ಅಭ್ಯರ್ಥಿ ಉಮಾ ಪ್ರಕಾಶ್‌, ಸರಸ್ವತಿ ಬಡಾವಣೆಯ ರಾಜಶೇಖರ್‌, ಪಿ.ಜೆ. ಬಡಾವಣೆಯ ಅತೀತ್‌ ಅಂಬರ್‌ಕರ್‌ ಸಹಿತ ಎಲ್ಲರೂ ಕಣದಲ್ಲಿರಲು ನಿರ್ಧರಿಸಿದ್ದಾರೆ. ಸಿದ್ಧವೀರಪ್ಪ ಬಡಾವಣೆಯಲ್ಲಿ ಮಾಜಿ ಶಾಸಕ ಗುರುಸಿದ್ಧನಗೌಡ ಅವರ ಸೊಸೆ ಪ್ರೀತಿ ರವಿಕುಮಾರ್‌ ಬಂಡಾಯವಾಗಿ ಸಲ್ಲಿಸಿರುವ ನಾಮಪತ್ರವನ್ನು ಯಾವುದೇ ಕಾರಣಕ್ಕೆ ಹಿಂಪಡೆಯುವುದಿಲ್ಲ ಎಂದು ಅಧಿಕೃತವಾಗಿಯೇ ಘೋಷಿಸಿದ್ದಾರೆ. ಅದೇ ವಾರ್ಡ್‌ನಲ್ಲಿ ಬಂಡಾಯವೆದ್ದಿದ್ದ ಪಾರ್ವತಿ ಕೆ.ಪಾಟೀಲ್‌ ಅವರು ಪ್ರೀತಿಗೆ ಬೆಂಬಲ ಸೂಚಿಸಿದ್ದಾರೆ.

ಬಂಡಾಯ ಅಭ್ಯರ್ಥಿಗಳಿಗೆ ಬಿಜೆಪಿ ಎಚ್ಚರಿಕೆ

ಬಿಜೆಪಿಯಿಂದ ಬಂಡಾಯವೆದ್ದು ನಾಮಪತ್ರ ಸಲ್ಲಿಸಿದವರು ನಾಮಪತ್ರ ವಾಪಸ್‌ ಪಡೆಯದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪಕ್ಷದ ಕೆಲವು ಪದಾಧಿಕಾರಿಗಳು, ಪ್ರಮುಖರು ನಾಮಪತ್ರ ಸಲ್ಲಿಸಿದ್ದಾರೆ. ಕೂಡಲೇ ಅವರೆಲ್ಲ ನಾಮಪತ್ರ ಹಿಂಪಡೆಯಬೇಕು. ಈಗಾಗಲೇ ಅನಧಿಕೃತವಾಗಿ ನಾಮಪತ್ರ ಸಲ್ಲಿಸಿದವರ ಹೆಸರನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. ನಾಮಪತ್ರ ಹಿಂಪಡೆಯದಿದ್ದರೆ ಶಿಸ್ತು ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮತ್ತು ಸಹ ಪ್ರಭಾರ ಎಸ್‌. ದತ್ತಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.