ದಾವಣಗೆರೆ: ಜಿಲ್ಲೆಯಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ತೀವ್ರ ಕಳವಳಕಾರಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದ್ದು, ಜೀವ ಉಳಿಸುವ ನಿಟ್ಟಿನಲ್ಲಿ ವೈದ್ಯರು ಶ್ರಮಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಏಳು ತಿಂಗಳಲ್ಲಿ 28 ತಾಯಂದಿರು ಹಾಗೂ 135 ನವಜಾತ ಶಿಶುಗಳು ಮರಣ ಹೊಂದಿವೆ. 23 ತಾಯಂದಿರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ 111 ಶಿಶುಗಳು ಮೃತಪಟ್ಟಿವೆ. ಈ ಅಂಕಿ–ಅಂಶಗಳು ಆತಂಕಕಾರಿಯಾಗಿವೆ. ಈ ಸಾವು ತಡೆಯುವ ನಿಟ್ಟಿನಲ್ಲಿ ಏನಾದರೂ ಕ್ರಮ ಕೈಗೊಳ್ಳಬೇಕಲ್ಲವೇ’ ಎಂದು ಪ್ರಶ್ನಿಸಿದರು.
‘ದಾವಣಗೆರೆ ವೈದ್ಯಕೀಯ ಸೇವೆಗೆ ನೆರೆಹೊರೆಯ ಜಿಲ್ಲೆಯಿಂದ ರೋಗಿಗಳು ಬರುತ್ತಾರೆ. ಹೆರಿಗೆಯಲ್ಲಿ ಸಮಸ್ಯೆ ಕಂಡುಬಂದ ಗರ್ಭಿಣಿಯರನ್ನು ಇಲ್ಲಿಗೆ ಶಿಫಾರಸು ಮಾಡಲಾಗುತ್ತದೆ. ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಯಿಂದ ಹೀಗೆ ಬಂದವರೇ ಮೃತಪಡುತ್ತಿರುವುದು ಪರಿಶೀಲನೆಯಲ್ಲಿ ಗೊತ್ತಾಗಿದೆ. ಸಮನ್ವಯದ ಕೊರತೆಯ ಕಾರಣಕ್ಕೆ ಈ ತೊಂದರೆ ಉಂಟಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ವಿವರಣೆ ನೀಡಿದರು.
‘ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಏ.1ರಿಂದ ಸೆ.30ರವರೆಗೆ 4,291 ಹೆರಿಗೆಗಳಾಗಿವೆ. ಇದರಲ್ಲಿ 3,093 ಹೆರಿಗೆ ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಮೂಲಕ ನಡೆದಿರುವುದು ಆತಂಕಕಾರಿ ಬೆಳವಣಿಗೆ. ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ ಸರಾಸರಿ ದರ ಶೇ 61ರಷ್ಟಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯ ಸಿಸೇರಿಯನ್ ಪ್ರಮಾಣ ಶೇ 72ರಷ್ಟಿದೆ. ಹಣದ ಆಸೆಗೆ ಖಾಸಗಿ ಆಸ್ಪತ್ರೆಗಳು ಸಹಜ ಹೆರಿಗೆಯ ಬದಲು ಶಸ್ತ್ರಚಿಕಿತ್ಸೆಗೆ ಒತ್ತು ನೀಡುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ’ ಎಂದು ಹೇಳಿದರು.
‘ಸಹಜ ಹಾಗೂ ಸಿಸೇರಿಯನ್ ಹೆರಿಗೆ ಗರ್ಭಿಣಿಯ ಆಯ್ಕೆ. ಹೆರಿಗೆ ನೋವು ತಾಳಲಾರದೇ ಅನೇಕರು ಸಿಸೇರಿಯನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಪ್ರಸೂತಿ ತಜ್ಞೆಯೊಬ್ಬರು ಸಭೆಗೆ ಮಾಹಿತಿ ನೀಡಿದರು.
‘ಸಹಜ ಹೆರಿಗೆಯಿಂದ ತಾಯಿ ಮತ್ತು ಶಿಶುವಿನ ಆರೋಗ್ಯ ಚೆನ್ನಾಗಿರುತ್ತದೆ. ಶಿಶುವಿನ ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಸಹಜ ಹೆರಿಗೆಯ ಕುರಿತು ಸಮಾಜದಲ್ಲಿ ಅರಿವಿನ ಕೊರತೆ ಇದೆ. ತಜ್ಞ ವೈದ್ಯರ ನೆರವಿನೊಂದಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿ. ಖಾಸಗಿ ಆಸ್ಪತ್ರೆಯ ವೈದ್ಯರ ಸಭೆ ಕರೆದು ಜಿಲ್ಲಾಧಿಕಾರಿ ಸೂಚನೆಗಳನ್ನು ನೀಡಬೇಕು’ ಎಂದು ದಿನೇಶ್ ಗುಂಡೂರಾವ್ ಹೇಳಿದರು.
‘ಜಿಲ್ಲೆಯ ಲಿಂಗಾನುಪಾತ ಗಮನಿಸಿದರೆ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಅನುಮಾನಗಳು ಮೂಡುತ್ತಿವೆ. ಭ್ರೂಣ ಹತ್ಯೆ ಪತ್ತೆ ಮಾಡುವಲ್ಲಿ ಲೋಪಗಳು ಉಂಟಾಗಿರುವ ಸಾಧ್ಯತೆ ಇದೆ. ಸ್ಕ್ಯಾನಿಂಗ್ ಕೇಂದ್ರಗಳನ್ನು ಮಾತ್ರ ಗಮನಿಸಿದರೆ ಸಾಲದು. ಆಶಾ ಕಾರ್ಯಕರ್ತೆಯರ ಮೂಲಕ ನಿಖರ ಮಾಹಿತಿ ಸಂಗ್ರಹಿಸಿ ಭ್ರೂಣ ಹತ್ಯೆ ನಿಯಂತ್ರಿಸಿ’ ಎಂದು ವೈದ್ಯರಿಗೆ ಹೇಳಿದರು.
‘ಜಿಲ್ಲೆಯಲ್ಲಿ 1,000 ಗಂಡು ಮಕ್ಕಳಿಗೆ 935 ಹೆಣ್ಣುಮಕ್ಕಳಿದ್ದಾರೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು, ಈ ಬಗ್ಗೆ ವೈದ್ಯರು ಎಚ್ಚರದಿಂದ ಇರಬೇಕು’ ಎಂದರು.
ಶಾಸಕ ಕೆ.ಎಸ್.ಬಸವಂತಪ್ಪ, ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್ ಇದ್ದರು.
ಗರ್ಭಿಣಿಯರ ನೋಂದಣಿಯಲ್ಲಿ ಲೋಪ ಉಂಟಾಗುತ್ತಿದೆ. ಗರ್ಭದಲ್ಲಿರುವ ಶಿಶುವಿಗೂ ವಿಶೇಷ ಗುರುತಿನ ಸಂಖ್ಯೆ ನೀಡಿದರೆ ಗರ್ಭಪಾತ ಪತ್ತೆ ಸುಲಭವಾಗುತ್ತದೆ.ಡಾ.ಪ್ರಭಾ ಮಲ್ಲಿಕಾರ್ಜುನ್, ಸಂಸದೆ
ಜಗಳೂರು ತಾಲ್ಲೂಕು ಆಸ್ಪತ್ರೆ ಶಿಥಿಲಾವಸ್ಥೆಯಲ್ಲಿದೆ. ಅನಾಹುತ ಸಂಭವಿಸಬಹುದು ಎಂಬ ಆತಂಕ ಕಾಡುತ್ತಿದೆ. ಹೊಸ ಕಟ್ಟಡ ನಿರ್ಮಿಸಿದರೆ ಅನುಕೂಲವಾಗುತ್ತದೆ.ಬಿ.ದೇವೇಂದ್ರಪ್ಪ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.