ADVERTISEMENT

ದಾವಣಗೆರೆ | ಅಂತರ ಮರೆತರೇ ಕೋವಿಡ್‌ ರೋಗಿಗಳು?

ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲು ವಿಳಂಬ

ವಿನಾಯಕ ಭಟ್ಟ‌
Published 23 ಮೇ 2020, 19:45 IST
Last Updated 23 ಮೇ 2020, 19:45 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್‌–19 ರೋಗಿಗಳು ಪರಸ್ಪರ ಅಂತರವನ್ನು ಕಾಯ್ದುಕೊಳ್ಳದೇ ಇರುವುದರಿಂದ 14 ದಿನಗಳ ಒಳಗೆ ಗುಣಮುಖರಾಗಿಲ್ಲ. ಹೀಗಾಗಿಯೇ ಕೆಲವು ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆ ಹೊಂದಲು ವಿಳಂಬವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ವಿದೇಶ ಪ್ರಯಾಣದ ಇತಿಹಾಸ ಹೊಂದಿದ್ದ ಚಿತ್ರದುರ್ಗದ ಮಹಿಳೆಯೂ ಸೇರಿ ಮೂವರು ರೋಗಿಗಳು ಮಾರ್ಚ್‌ ತಿಂಗಳಲ್ಲಿ 14 ದಿನಗಳಲ್ಲೇ ಗುಣಮುಖರಾಗಿ ಮನೆಗೆ ತೆರಳಿದ್ದರು. ಆದರೆ, ಏಪ್ರಿಲ್‌ ತಿಂಗಳ ಅಂತ್ಯ ಹಾಗೂ ಮೇ ಮೊದಲ ವಾರದಲ್ಲಿ ದಾಖಲಾಗಿದ್ದ ಕೋವಿಡ್‌ ರೋಗಿಗಳು ಗುಣಮುಖರಾಗಲು 14 ದಿನಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. 14 ದಿನಗಳ ಬಳಿಕ ಕೋವಿಡ್‌ ಪರೀಕ್ಷೆ ನಡೆಸಿದಾಗ ಕೆಲವು ರೋಗಿಗಳಲ್ಲಿ ಮತ್ತೆ ‘ಪಾಸಿಟಿವ್‌’ ಎಂಬ ವರದಿ ಬರುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ 121 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಶನಿವಾರ ಏಳು ರೋಗಿಗಳು ಗುಣಮುಖರಾಗಿರುವುದೂ ಸೇರಿ ಇದುವರೆಗೆ ಒಟ್ಟು 28 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ 89 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ.

ADVERTISEMENT

ಬಿಡುಗಡೆ ಭಾಗ್ಯ: ಬಾಷಾನಗರದ ಸ್ಟಾಫ್‌ ನರ್ಸ್‌ಗೆ (ಪಿ–533) ಕೊರೊನಾ ಸೋಂಕು ತಗುಲಿರುವುದು ಏಪ್ರಿಲ್‌ 29ರಂದು ದೃಢಪಟ್ಟಿತ್ತು. ಇವರು 24 ದಿನಗಳ ಬಳಿಕ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಅದೇ ರೀತಿ ಇವರ ಪುತ್ರನಿಗೆ (ಪಿ–585) ಸೋಂಕು ತಗುಲಿರುವುದು ಮೇ 1ರಂದು ದೃಢಪಟ್ಟಿತ್ತು. ಆದರೆ, ಈತನಿಗೂ 20 ದಿನಗಳ ಬಳಿಕ, ಅಂದರೆ ಬುಧವಾರ ಬಿಡುಗಡೆ ಭಾಗ್ಯ ಸಿಕ್ಕಿದೆ.

ಅದೇ ರೀತಿ ಕೋವಿಡ್‌ ರೋಗದಿಂದ ಮೃತಪಟ್ಟಿದ್ದ ಜಾಲಿನಗರದ ವೃದ್ಧನ (ಪಿ–556) ಹಿರಿಯ ಸೊಸೆ (ಪಿ–580), ಮೂರನೇ ಸೊಸೆ (ಪಿ–584) ಹಾಗೂ ಮೊಮ್ಮಗ (ಪಿ–583) ಕೂಡ 20 ದಿನಗಳ ಬಳಿಕ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಸ್ಟಾಫ್‌ ನರ್ಸ್‌ನ ಸಂಪರ್ಕದಿಂದ ಸೋಂಕಿತರಾಗಿರುವುದು ಮೇ 3ರಂದು ದೃಢಪಟ್ಟಿದ್ದ ಪಿ–616, ಪಿ–617, ಪಿ–635 ಅವರು 17 ದಿನಗಳ ಬಳಿಕ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಗುರುವಾರ ಬಿಡುಗಡೆಯಾದ ಐವರ ಪೈಕಿ ನಾಲ್ವರು 18 ದಿನಗಳ ಬಳಿಕ ಹಾಗೂ ಒಬ್ಬ 16 ದಿನಗಳ ನಂತರ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಶುಕ್ರವಾರ ಬಿಡುಗಡೆಯಾದ ಏಳು ಜನರ ಪೈಕಿ ಸ್ಟಾಫ್‌ ನರ್ಸ್‌ ಹೊರತುಪಡಿಸಿ ನಾಲ್ವರು 18 ದಿನಗಳು ಹಾಗೂ ಒಬ್ಬರು 16 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಶನಿವಾರ ಬಿಡುಗಡೆ ಹೊಂದಿದ ಏಳು ಜನರ ಪೈಕಿ ಒಬ್ಬರು ಮಾತ್ರ 21 ದಿನಗಳ ಬಳಿಕ ಮನೆಗೆ ತೆರಳುತ್ತಿದ್ದಾರೆ. ಉಳಿದವರು 15–16 ದಿನಗಳ ಬಳಿಕ ಬಿಡುಗಡೆ ಹೊಂದಿದ್ದಾರೆ.

ಒಡನಾಟ ತಂದ ಆಪತ್ತು
ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದ ಹಲವು ಕೋವಿಡ್‌ ರೋಗಿಗಳು ಸಂಬಂಧಿಗಳು ಹಾಗೂ ಪರಿಚಯಸ್ಥರಾಗಿದ್ದರಿಂದ ವಾರ್ಡ್‌ನಲ್ಲಿ ಅಂತರ ಕಾಯ್ದುಕೊಳ್ಳದೇ ಒಡನಾಟ ಇಟ್ಟುಕೊಂಡಿದ್ದರು. ಬಹುಶಃ ಹೀಗಾಗಿಯೇ 13 ರೋಗಿಗಳ ಫಾಲೋಅಪ್‌ ಪರೀಕ್ಷೆ ವೇಳೆ ಕೋವಿಡ್‌ ಪಾಸಿಟಿವ್‌ ಬಂದಿತ್ತು. ಸರಿಯಾಗಿ ಅಂತರ ಕಾಯ್ದುಕೊಂಡಿದ್ದರೆ ಹಲವು ರೋಗಿಗಳು ನಾಲ್ಕೈದು ದಿನಗಳ ಮೊದಲೇ ಗುಣಮುಖರಾಗಿ ಬಿಡುಗಡೆ ಹೊಂದುತ್ತಿದ್ದರು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಕರು ಹಾಗೂ ಕಂಟೈನ್‌ಮೆಂಟ್‌ ಝೋನ್‌ನವರು ಒಂದೇ ವಾರ್ಡ್‌ನಲ್ಲಿ ಇರುವುದರಿಂದ ಬೇಸರ ಕಳೆಯಲು ಒಟ್ಟಿಗೆ ಸೇರುತ್ತಿದ್ದರು. ಇದರಿಂದಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಮತ್ತೆ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ 10 ಸೆಮಿಸ್ಪೆಷಲ್‌ ಐಸೋಲೇಷನ್‌ ವಾರ್ಡ್‌ಗಳಿವೆ. ಪ್ರತಿ ವಾರ್ಡ್‌ಗಳಲ್ಲಿ ಸಾಮಾನ್ಯ ದಿನಗಳಲ್ಲಿ 20 ಬೆಡ್‌ಗಳನ್ನು ಹಾಕಲಾಗುತ್ತಿತ್ತು. ಆದರೆ, ಈಗ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ 8ರಿಂದ 9 ಬೆಡ್‌ಗಳನ್ನು ಮಾತ್ರ ಹಾಕಲಾಗಿದೆ. ಐಸೋಲೇಷನ್‌ ವಾರ್ಡ್‌ಗಳಲ್ಲಿ ಎಲ್ಲಾ ಸಮಯದಲ್ಲೂ ರೋಗಿಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೆಲವು ರೋಗಿಗಳು ಅಂತರ ಕಾಯ್ದುಕೊಳ್ಳದೇ ಜೊತೆಗೆ ಕುಳಿತು ಊಟ ಮಾಡುತ್ತಿದ್ದರು ಎನ್ನಲಾಗಿದೆ.

*
ಅಂತರ ಕಾಯ್ದುಕೊಂಡಿದ್ದರಿಂದಲೇ ಕೋವಿಡ್‌ ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದುತ್ತಿದ್ದಾರೆ. ವಾರ್ಡ್‌ನಲ್ಲಿ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ವೈದ್ಯರಿಂದ ಮತ್ತೊಮ್ಮೆ ಖಾತ್ರಿ ಪಡಿಸಿಕೊಳ್ಳುತ್ತೇನೆ.
-ಮಹಾಂತೇಶ ಬೀಳಗಿ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.