
ಪೊಲೀಸ್
ಸಾಂದರ್ಭಿಕ ಚಿತ್ರ
ದಾವಣಗೆರೆ: ಆಭರಣ ತಯಾರಕರೊಬ್ಬರಿಂದ ₹7.5 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಇಬ್ಬರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳು ಸೇರಿ ನಾಲ್ವರನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೂರ್ವ ವಲಯದ ಐಜಿಪಿ ಕಚೇರಿಯ ಇಬ್ಬರು ಪಿಎಸ್‌ಐಗಳು ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾರವಾರದ ಆಭರಣ ತಯಾರಕ ವಿಶ್ವನಾಥ್ ಅರ್ಕಸಾಲಿ ಅವರನ್ನು ಸೋಮವಾರ ನಸುಕಿನಲ್ಲಿ ಸುಲಿಗೆ ಮಾಡಿದ ಆರೋಪ ಇವರ ಮೇಲಿದೆ.
ವಿಶ್ವನಾಥ್ ಅವರು ಮಂಡಿಪೇಟೆ, ಹಳೆಪೇಟೆಯ ಕೆಲ ಆಭರಣ ಮಾರಾಟಗಾರರಿಂದ ಚಿನ್ನದ ಗಟ್ಟಿ ಹಾಗೂ ಹಳೆಯ ಉಂಗುರುಗಳನ್ನು ಸಂಗ್ರಹಿಸಿ ಭಾನುವಾರ ಮಧ್ಯರಾತ್ರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಕಾರವಾರಕ್ಕೆ ಮರಳಲು ಹುಬ್ಬಳ್ಳಿ ಮಾರ್ಗದ ಬಸ್ ಏರಿದ ಅವರನ್ನು ಪಿಎಸ್‌ಐಗಳು ವಶಕ್ಕೆ ಪಡೆದಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಸಮೀಪದ ಕೆಟಿಜೆ ನಗರ ಪೊಲೀಸ್ ಠಾಣೆಯ ಬಳಿಗೆ ವಿಶ್ವನಾಥ್ ಅವರನ್ನು ಕರೆತಂದಿದ್ದಾರೆ. ಠಾಣೆಯ ಹೊರಭಾಗದಲ್ಲಿ ಕಾರು ನಿಲ್ಲಿಸಿ ಕೆಲಹೊತ್ತು ಠಾಣೆಯಲ್ಲಿದ್ದ ಪೊಲೀಸರೊಂದಿಗೆ ಚರ್ಚಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಶ್ವನಾಥ್ ಅವರನ್ನು ಬೆದರಿಸಿದ್ದಾರೆ. ಅವರ ಬಳಿ ಇದ್ದ 78 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿಗಳನ್ನು ಕಸಿದುಕೊಂಡು ಊರಿಗೆ ಮರಳುವಂತೆ ಸೂಚಿಸಿದ್ದರು ಎಂದು ಮೂಲಗಳು ವಿವರಿಸಿವೆ.
ಅನುಮಾನಗೊಂಡ ವಿಶ್ವನಾಥ್ ಘಟನೆಯ ಕುರಿತು ಮನೆಗೆ ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ ಠಾಣೆಗೆ ಧಾವಿಸಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಕೆಟಿಜೆ ನಗರ ಠಾಣೆಯ ಪೊಲೀಸರು ಇಬ್ಬರು ಪಿಎಸ್‌ಐಗಳು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.