ದಾವಣಗೆರೆ: ‘ಸತತವಾಗಿ ಎರಡು ತಿಂಗಳಿಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ತೇವಾಂಶ ಹೆಚ್ಚಿ ಮೆಕ್ಕೆಜೋಳ, ಹತ್ತಿ ಹಾಗೂ ಇನ್ನಿತರ ತರಕಾರಿ ಬೆಳೆಗಳು ಹಾಳಾದವು. ಎಕರೆಗೆ ₹25,000 ಕ್ಕೂ ಹೆಚ್ಚು ಖರ್ಚು ಮಾಡಿ ಬೆಳೆದ ವಿವಿಧ ಬೆಳೆಗಳು ನಾಶವಾಗಿದ್ದನ್ನು ನೆನಪಿಸಿಕೊಂಡರೆ ಸಂಕಟವಾಗುತ್ತದೆ. ಪ್ರತೀ ವರ್ಷ ಬೇಕಾದಷ್ಟು ಮಳೆಯಾಗದೇ ಬೆಳೆ ಕೈಗೆ ಸಿಗುತ್ತಿರಲಿಲ್ಲ. ಆದರೆ, ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ’..
ಜಗಳೂರು ತಾಲ್ಲೂಕಿನ ಅಸಗೋಡು ಗ್ರಾಮದ ರೈತ ರವಿ ಅವರ ಬೇಸರದ ಮಾತುಗಳಿವು.
‘2 ಎಕರೆಯಲ್ಲಿ ಸೊಪ್ಪು, ಬೆಂಡೆಕಾಯಿ, ಮೂಲಂಗಿ ಸೇರಿದಂತೆ ವಿವಿಧ ತರಕಾರಿ ಬೆಳೆದಿದ್ದೆ. ಹೊಳೆ ನೀರು (ತುಂಗಭದ್ರಾ ನದಿ) ಬಂದು ಎಲ್ಲವನ್ನೂ ನುಂಗಿ ಹಾಕಿತು. ನಿರಂತರ ಸುರಿದ ಮಳೆ ಹಾಗೂ ಹೊಳೆ ನೀರಿನಿಂದಾಗಿ ಹಸನಾಗಿ ಬೆಳೆದಿದ್ದ ತರಕಾರಿ ಕೊಚ್ಚಿಹೋಯಿತು. ಬೀಜ ಬಿತ್ತಿ, ಗೊಬ್ಬರ ಹಾಕಿ ಬೆಳೆಸಿದ ತರಕಾರಿ ಪದೇ ಪದೇ ಹಾಳಾಗಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಯಿತು’..
ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಗ್ರಾಮದ ಮಾಲತೇಶ ಮರಾಠಿ ಅವರು ಹೀಗೆ ನೋವಿನಿಂದ ನುಡಿದರು.
ಇದು ಕೇವಲ ಜಗಳೂರು, ಹರಿಹರ ತಾಲ್ಲೂಕಿನ ಗ್ರಾಮಗಳ ರೈತರ ಕಥೆಗಳಲ್ಲ. ಜಿಲ್ಲೆಯ ವಿವಿಧೆಡೆ ಅತಿವೃಷ್ಟಿಯಿಂದಾಗಿ ಮುಂಗಾರು ಅವಧಿಯ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರ ವ್ಯಥೆ.
ಈ ವರ್ಷ ಜಿಲ್ಲೆಯಲ್ಲಿ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ವಿವಿಧೆಡೆ ಹಲವು ಬೆಳೆಗಳು ಹಾಳಾಗಿವೆ. ಎಕರೆಗೆ ಹತ್ತಾರು ಸಾವಿರ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರು ಇದೀಗ ಲಾಭವಿರಲಿ, ಹಾಕಿದ ಬಂಡವಾಳವಾದರೂ ಕೈಸೇರಿದರೆ ಸಾಕು ಎಂಬ ಮನಃಸ್ಥಿತಿಯಲ್ಲಿದ್ದಾರೆ.
ಮುಖ್ಯವಾಗಿ ಮೆಕ್ಕೆಜೋಳ, ಹತ್ತಿ, ಭತ್ತ ಸೇರಿದಂತೆ ತರಕಾರಿ ಬೆಳೆಗಳೂ ಹಾಳಾಗಿವೆ. ಕೆಲವೆಡೆ ಅಡಿಕೆ, ತೆಂಗು, ಬಾಳೆ, ಪಪ್ಪಾಯ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನೂ ನಿರಂತರ ಮಳೆ ಹಾಗೂ ಹೊಳೆ ನೀರು ಆಪೋಷನ ಪಡೆದಿದೆ.
ಎಷ್ಟು ಹೆಕ್ಟೇರ್ ಬೆಳೆ ಹಾನಿ?:
ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ ಜಿಲ್ಲೆಯಲ್ಲಿ ಇನ್ನೂ ಪೂರ್ಣಗೊಂಡಿಲ್ಲ. ಆದರೂ, ಅಧಿಕಾರಿಗಳ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಳಾಗಿದೆ. ಹರಿಹರ ತಾಲ್ಲೂಕಿನಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು, 45.30 ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದೆ. ಜಗಳೂರು ತಾಲ್ಲೂಕಿನಲ್ಲಿ 200 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಅಂದಾಜಿಸಿಲಾಗಿದೆ. ಇದರಲ್ಲಿ ಮೆಕ್ಕೆಜೋಳ ಬೆಳೆಯ ಪ್ರಮಾಣವೇ ಹೆಚ್ಚಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಇನ್ನು 37.5 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಮುಂಗಾರು ಪೂರ್ವ ಅವಧಿಯಲ್ಲಿ 33 ಹೆಕ್ಟೇರ್ ಹಾಗೂ ಆ ಬಳಿಕ 4.5 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಆರಂಭದಲ್ಲಿ ಸುರಿದ ಆಲಿಕಲ್ಲು ಮಳೆಗೆ ಬಾಳೆ, ಪಪ್ಪಾಯ ಬೆಳೆಗೆ ಹಾನಿಯಾಗಿತ್ತು. ಆ ಬಳಿಕ ಸುರಿದ ನಿರಂತರ ಮಳೆಗೆ ಈರುಳ್ಳಿ ಸೇರಿದಂತೆ ಇನ್ನಿತರೆ ಬೆಳೆಗಳಿಗೆ ಹಾನಿಯಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್.
ಹರಿಹರ, ಜಗಳೂರು ಹೊರತುಪಡಿಸಿ ಬೇರೆ ತಾಲ್ಲೂಕುಗಳಲ್ಲೂ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದರೂ, ಇನ್ನೂ ಸಮೀಕ್ಷೆ ನಡೆದಿಲ್ಲ. ಎಲ್ಲಾ ತಾಲ್ಲೂಕುಗಳಲ್ಲಿ ಸಮೀಕ್ಷೆ ಪೂರ್ಣಗೊಂಡರೆ ನಿಖರವಾದ ಹಾನಿಯ ವಿವರ ಲಭ್ಯವಾಗಲಿದೆ.
ನೈಸರ್ಗಿಕ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಅನ್ವಯ ಬಿತ್ತನೆ ಮಾಡಲಾದ ಸಂಪೂರ್ಣ ಭೂ ಪ್ರದೇಶದಲ್ಲಿ ಶೇ 33ಕ್ಕಿಂತ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಗೀಡಾಗಿದ್ದರೆ ಮಾತ್ರ ಪರಿಹಾರ ವಿತರಣೆಗೆ ಅವಕಾಶ ಇದೆ. ಈ ನಿಯಮದಿಂದ ಶೇ 33ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬೆಳೆ ಹಾನಿಯಾದ ರೈತರು ಸರ್ಕಾರದಿಂದ ಪರಿಹಾರ ಪಡೆಯಲು ಅವಕಾಶವಿಲ್ಲ.
ಜಿಲ್ಲೆಯ ವಿವಿಧೆಡೆ ಸಣ್ಣ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದರೂ, ಅದನ್ನು ಸಮೀಕ್ಷೆಗೆ ಪರಿಗಣಿಸಿಲ್ಲ. ಹೀಗಾಗಿ ಬೆಳೆ ಹಾನಿಯಾದ ಪ್ರದೇಶದ ಪ್ರಮಾಣ ರೈತರು ಹೇಳುವುದಕ್ಕೂ, ಅಧಿಕಾರಿಗಳು ಹೇಳುವುದಕ್ಕೂ ಬಹಳಷ್ಟು ವ್ಯತ್ಯಾಸದಿಂದ ಕೂಡಿದೆ. ಜಗಳೂರು ತಾಲ್ಲೂಕೊಂದರಲ್ಲೇ 600 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎನ್ನುತ್ತಾರೆ ರೈತರು.
ಮಾಯಕೊಂಡ ಭಾಗದಲ್ಲಿ ತಡವಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಗಳ ಇಳುವರಿ ಕುಂಠಿತಗೊಂಡಿದೆ. ಮಳೆ ಹೆಚ್ಚಾಗಿ ಶೀತ ಉಂಟಾಗಿದ್ದರಿಂದ ಕೆಲ ರೈತರು ಬೆಳೆ ನಾಶಗೊಳಿಸಿ ಮತ್ತೆ ಬಿತ್ತನೆ ಮಾಡಿದ್ದರುಶಶಿ ಪೂಜಾರ್ ರೈತ ಮಾಯಕೊಂಡ
ನಮ್ಮ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಬೆಳೆಗಳು ನಾಶವಾಗಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿಲ್ಲರವಿ ರೈತ ಅಸಗೋಡು (ಜಗಳೂರು)
ಮುಂಗಾರು ಅವಧಿಯಲ್ಲಿ ಮಳೆಯಿಂದ ಹಾನಿಗೀಡಾದ ಬೆಳೆಯ ಸಮೀಕ್ಷೆ ನಡೆಯುತ್ತಿದೆ. ಹರಿಹರ ತಾಲ್ಲೂಕಿನಲ್ಲಿ ಮುಗಿದಿದ್ದು ಜಗಳೂರು ತಾಲ್ಲೂಕಿನಲ್ಲಿ ಪ್ರಗತಿಯಲ್ಲಿದೆ. ಮುಗಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಲಾಗುವುದುಅಶೋಕ ಕೃಷಿ ಇಲಾಖೆ ಉಪನಿರ್ದೇಶಕ ದಾವಣಗೆರೆ
93 ಮನೆಗಳಿಗೆ ಹಾನಿ
ಮಳೆಯಿಂದಾಗಿ ಜಿಲ್ಲೆಯಲ್ಲಿ 30 ಕ್ಕೂ ಹೆಚ್ಚು ಮನೆಗಳಿಗೆ ತೀವ್ರ ಹಾನಿ (ಶೇ 75ಕ್ಕಿಂತ ಹೆಚ್ಚು) 25 ಮನೆಗಳಿಗೆ ಭಾಗಶಃ ಹಾನಿ (ಶೇ 50 ರಿಂದ 75) 34 ಮನೆಗಳಿಗೆ ಶೇ 20ರಿಂದ 50ರಷ್ಟು ಹಾನಿ 4 ಮನೆಗಳಿಗೆ ಶೇ 15ರಿಂದ 20ರಷ್ಟು ಹಾನಿ ಸಂಭವಿಸಿದೆ. ಆಯಾ ಮನೆಯ ಹಾನಿ ಪ್ರಮಾಣವನ್ನು ಆಧರಿಸಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಜಿಲ್ಲಾಡಳಿತದಿಂದ ಒಟ್ಟು ₹58.96 ಲಕ್ಷ ಪರಿಹಾರ ವಿತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.