ಮಲೇಬೆನ್ನೂರು: ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಪತಿಯು ಪತ್ನಿಯನ್ನು ಕೊಲೆ ಮಾಡಿದ ಘಟನೆ ಸಮೀಪದ ಹರಳಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಹಾಲಿವಾಣ ಗ್ರಾಮದ ನೇತ್ರಾವತಿ (26) ಕೊಲೆಯಾದ ಗೃಹಿಣಿ. 7 ವರ್ಷಗಳ ಹಿಂದೆ ಹರಳಹಳ್ಳಿ ಗ್ರಾಮದ ದೇವೇಂದ್ರಪ್ಪ ಅವರ ಜೊತೆ ಮದುವೆ ಆಗಿತ್ತು. ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.
ಕೌಟುಂಬಿಕ ಸಮಸ್ಯೆಯಿಂದ ಮನೆಯಲ್ಲಿ ನಿತ್ಯ ವಾಗ್ವಾದ, ಗಲಾಟೆ ನಡೆಯುತ್ತಿತ್ತು. ಸೋಮವಾರ ಗಲಾಟೆ ವಿಕೋಪಕ್ಕೆ ತಿರುಗಿ ಒಬ್ಬರ ಮೇಲೊಬ್ಬರು ಹಲ್ಲೆ ಮಾಡಿಕೊಂಡಿದ್ದರು. ಘಟನೆಯಿಂದ ಬೇಸತ್ತ ಪತಿ, ಪತ್ನಿಗೆ ಸೀರೆಯಿಂದ ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಪತಿ ದೇವೇಂದ್ರಪ್ಪ, ಆತನ ತಾಯಿ ಗಂಗಮ್ಮ, ಅಣ್ಣ ಶಿವಪ್ಪ ಹಾಗೂ ಅವರ ಪತ್ನಿ ರೇಣುಕಮ್ಮ, ಸಹೋದರಿ ಶೈಲಾ ವಿರುದ್ಧ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ನೇತ್ರಾವತಿ ತವರು ಮನೆಯವರು ದೂರು ನೀಡಿದ್ದಾರೆ.
ಮಲೇಬೆನ್ನೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.