ADVERTISEMENT

ಜಗಳೂರು: ಕುಡಿಯುವ ನೀರಿಗೆ ನಿತ್ಯ ಹಾಹಾಕಾರ

ಖಾಸಗಿ ಟ್ಯಾಂಕರ್‌ಗಳೇ ಗತಿ l ಸಮರ್ಪಕ ಯೋಜನೆ ರೂಪಿಸಲು ಕೋರಿಕೆ

ಡಿ.ಶ್ರೀನಿವಾಸ
Published 9 ನವೆಂಬರ್ 2022, 10:12 IST
Last Updated 9 ನವೆಂಬರ್ 2022, 10:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಗಳೂರು: ತಾಲ್ಲೂಕು ಕೇಂದ್ರವಾದ ಜಗಳೂರು ಪಟ್ಟಣದಲ್ಲಿ ಕುಡಿಯುವ ನೀರಿನ ದಶಕಗಳ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ. ನಿತ್ಯವೂ ಜನರು ಹಣ ನೀಡಿ ಖಾಸಗಿ ಘಟಕಗಳಿಂದ ನೀರು ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಶುದ್ಧ ನೀರಿನ ಘಟಕ ಇಲ್ಲ: ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ವರ್ಷವಿಡೀ ಶುದ್ಧ ನೀರು ಪೂರೈಕೆಯಾಗುತ್ತದೆ. ಆದರೆ, ಜಗಳೂರು ಪಟ್ಟಣದಲ್ಲಿ ಒಂದೂ ಶುದ್ಧ ನೀರಿನ ಘಟಕ ಇಲ್ಲ. ಹೀಗಾಗಿ ಬಡವರು, ದುರ್ಬಲರು ಸೇರಿ ಪಟ್ಟಣದ 25,000ಕ್ಕೂ ಅಧಿಕ ಜನ ನೀರಿಗೆ ಪರಿತಪಿಸುವಂತಾಗಿದೆ.

ಪಟ್ಟಣದ ಜನರು ಫ್ಲೋರೈಡ್ ಅಂಶ ಇರುವ ನೀರಿನ ಸೇವನೆಯಿಂದ ಹೈರಾಣಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರಾಗಿದ್ದ ಟಿ. ಗುರುಸಿದ್ದನಗೌಡ ಅವರು 2005-06ರಲ್ಲಿ ಸೂಳೆಕೆರೆ (ಶಾಂತಿ ಸಾಗರ)ಯಿಂದ ಪಟ್ಟಣಕ್ಕೆ 120 ಕಿ.ಮೀ ಅಂತರದ ಪೈಪ್‌ಲೈನ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು. ನಂತರ ಪಟ್ಟಣ ಪಂಚಾಯಿತಿಯ ಅಸಮರ್ಪಕ ನಿರ್ವಹಣೆಯಿಂದಾಗಿ ಈ ಯೋಜನೆ ಇದ್ದೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಬಿಳಿಯಾನೆ?: ‘ಮಾರ್ಗಮಧ್ಯದ ಚಿತ್ರದುರ್ಗ ತಾಲ್ಲೂಕಿನ ವಿವಿಧೆಡೆ ನಿರಂತರವಾಗಿ ಪೈಪ್‌ಲೈನ್ ಒಡೆದು ನೀರನ್ನು ಅಕ್ರಮವಾಗಿ ಬಳಸುವ ದೂರುಗಳು ಕೇಳಿಬರುತ್ತಿವೆ. ಪದೇಪದೇ ಪೈಪ್‌ಲೈನ್‌ ಒಡೆಯುವ ಕಾರಣ ಪಟ್ಟಣಕ್ಕೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ತಿಂಗಳಲ್ಲಿ ಒಂದೆರೆಡು ದಿನ ನೀರು ಬಂದರೆ ಮತ್ತೆ 20-25 ದಿನ ನೀರು ಪೂರೈಕೆ ಇರುವುದೇ ಇಲ್ಲ. ವರ್ಷದುದ್ದಕ್ಕೂ ಪೈಪ್‌ಲೈನ್ ದುರಸ್ತಿ ಕಾರ್ಯ ನಡೆಯುತ್ತಿದ್ದು, ಕೆಲವು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಳೆಕರೆ ನೀರಿನ ಯೋಜನೆ ಅಕ್ರಮ ಹಣ ಗಳಿಕೆಯ ಮಾರ್ಗವಾಗಿದೆ. ದುರಸ್ತಿ ನೆಪದಲ್ಲಿ 10 ವರ್ಷಗಳಲ್ಲಿ ಕೋಟಿಗಟ್ಟಲೆ ಹಣವನ್ನು ನಿರಿನಂತೆ ಖರ್ಚು ಮಾಡಲಾಗಿದೆ. ಈ ಯೋಜನೆ ಪಟ್ಟಣ ಪಂಚಾಯಿತಿ ಪಾಲಿಗೆ ಬಿಳಿಯಾನೆಯಂತಾಗಿದೆ’ ಎಂಬ ಆರೋಪಗಳಿವೆ.

ಅತ್ತ ಸೂಳೆಕರೆ ನೀರು ಇಲ್ಲ, ಇತ್ತ ಶುದ್ಧ ನೀರಿನ ಘಟಕಗಳೂ ಇಲ್ಲದ್ದರಿಂದಾಗಿ ನಾಗರಿಕರು ಅನಿವಾರ್ಯವಾಗಿ ಪ್ರತಿ ಕ್ಯಾನ್‌ಗೆ ₹ 10ರಿಂದ ₹ 15 ತೆತ್ತು ಪ್ರತಿದಿನ ಖಾಸಗಿ ಟ್ಯಾಂಕರ್‌ಗಳಲ್ಲಿ ನೀರು ಖರೀದಿಸುತ್ತಿದ್ದಾರೆ.

‘ಪಟ್ಟಣದಲ್ಲಿ ಸೂಳೆಕೆರೆಯ ನೀರು ಪೂರೈಕೆಯಾಗಿ ಎರಡು ತಿಂಗಳಾಯ್ತು. ನೀರು ಪೂರೈಕೆಯಾಗುವುದೇ ಅಮಾವಾಸ್ಯೆ– ಹುಣ್ಣಿಮೆಗೆ ಎನ್ನುವ ಸ್ಥಿತಿ ಇದೆ. ಯಾವಾಗ ಕೇಳಿದರೂ ಚಿತ್ರದುರ್ಗದ ಹತ್ತಿರ ಪೈಪ್‌ಲೈನ್ ಒಡೆದು ಹೋಗಿದೆ. ದುರಸ್ತಿ ಆಗಬೇಕು, ಪರಿಕರಗಳು ಬೆಂಗಳೂರಿನಿಂದ, ಮುಂಬಯಿಯಿಂದ ಬರಬೇಕು. 15 ದಿನ ನೀರು ಬರೋದು ತಡವಾಗುತ್ತದೆ ಎಂದು ವಾಟರ್‌ಮನ್‌ಗಳು ಸದಾ ಸಬೂಬು ಹೇಳುತ್ತಾರೆ. ವಿಧಿ ಇಲ್ಲದೇ ಖಾಸಗಿ ಟ್ಯಾಂಕರ್‌ನಿಂದ ನೀರು ಖರೀದಿಸುತ್ತಿದ್ದೇವೆ. ಆ ನೀರು ಸಹ ಶುದ್ಧವಾಗಿರುತ್ತದೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಪೈಪ್‌ಲೈನ್ ಸದಾ ಕೆಟ್ಟ ಸ್ಥಿತಿಯಲ್ಲಿರುವುದರಿಂದ ಇಲ್ಲಿನ ಕೆಲವರಿಗೆ ಸಾಕಷ್ಟು ಲಾಭ ಇದೆ’ ಎಂದು ಸ್ಥಳೀಯರಾದ ಡಿ.ಸಿ. ತಿಪ್ಪೇಸ್ವಾಮಿ, ಇ. ನಾಗಪ್ಪ, ದೊಡ್ಡಬೋರಯ್ಯ ‘ಪ್ರಜಾವಾಣಿ’ಗೆ ಹೇಳಿದರು.

ಪೈಪ್‌ಲೈನ್ ಒಡೆದು ಎರಡು ತಿಂಗಳಾಗಿದೆ

ಎರಡು ತಿಂಗಳಿಂದ ಚಿತ್ರದುರ್ಗ ಸಮೀಪದ ಮಲ್ಲಾಪುರ ಗೊಲ್ಲರಹಟ್ಟಿ ಬಳಿ ಪೈಪ್‌ಲೈನ್ ಒಡೆದು ಹೋಗಿದೆ. ಪ್ಲಾಸ್ಟಿಕ್ ಪೈಪ್ ಬದಲು ಕಬ್ಬಿಣದ ಪೈಪ್ ಹಾಕಲು ₹ 82 ಲಕ್ಷ ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಪಟ್ಟಣದ ಮೂರು ಶುದ್ಧ ನೀರಿನ ಘಟಕಗಳು ಕೆಟ್ಟು ಹೋಗಿವೆ. ತಹಶೀಲ್ದಾರ್ ಕಚೇರಿ ಸೇರಿ ಎರಡು ಕಡೆ ನಿರ್ಮಿತಿ ಕೇಂದ್ರದಿಂದ ನಿರ್ಮಿಸುತ್ತಿರುವ ಘಟಕಗಳನ್ನು ಹಸ್ತಾಂತರಿಸಿಲ್ಲ. ನೀರು ಪೂರೈಕೆಯ ₹ 1.64 ಕೋಟಿ ಬಿಲ್ ನಗರಾಭಿವೃದ್ಧಿ ಇಲಾಖೆಗೆ ಪಾವತಿಸಲು ಬಾಕಿ ಇದೆ.

– ಲೋಕ್ಯಾ ನಾಯ್ಕ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.