ADVERTISEMENT

ಮುಸ್ಲಿಮರಿಗೆ ಶಿಕ್ಷಣವೊಂದೇ ಅಸ್ತ್ರ: ಅಬ್ದುಲ್‌ ಜಬ್ಬಾರ್‌

ಪ್ರತಿಭಾ ಪುರಸ್ಕಾರ, ಮಿಲಾದ್ ಅವಾರ್ಡ್ ಕಾರ್ಯಕ್ರಮದಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 9:28 IST
Last Updated 9 ಡಿಸೆಂಬರ್ 2019, 9:28 IST
ದಾವಣಗೆರೆಯಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ, ಮಿಲಾದ್ ಅವಾರ್ಡ್ ಹಾಗೂ ಪಾಲಿಕೆಯ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ, ಮಿಲಾದ್ ಅವಾರ್ಡ್ ಹಾಗೂ ಪಾಲಿಕೆಯ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಉದ್ಘಾಟಿಸಿದರು   

ದಾವಣಗೆರೆ: ಮುಸ್ಲಿಂ ಸಮುದಾಯ ಮುಖ್ಯವಾಹಿನಿಗೆ ಬರಲು ಶಿಕ್ಷಣವೊಂದೇ ದಾರಿ. ಬೇರೆ ಅಸ್ತ್ರಗಳಿಲ್ಲ ಎಂದು ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ತಿಳಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಮಿಲಾದ್ ಅವಾರ್ಡ್ ಹಾಗೂ ಪಾಲಿಕೆಯ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಒಗ್ಗಟ್ಟಿನ ಕೊರತೆ ಹಾಗೂ ಶಿಕ್ಷಣದ ಕೊರತೆಯಿಂದಾಗಿ ಮುಸ್ಲಿಂ ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿಯುವಂತಾಗಿದೆ. ಉಳಿದೆಲ್ಲ ಸಮುದಾಯಗಳಿಗಿಂತಲೂ ಕೊನೆಯಲ್ಲಿ ಉಳಿದಿದೆ. ಸೌಹಾರ್ದದಿಂದ, ಒಗ್ಗಟ್ಟಾಗಿ, ಶಿಕ್ಷಣ ಪಡೆಯುವ ಮೂಲಕ ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಾಹಿತಿ ಪೀರ್‌ ಬಾಷಾ ಮಾತನಾಡಿ, ‘ಶಂಕಿತರೆಂಬ ಆರೋಪ ಹೊತ್ತು ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಇರುವ ಅಪರಾಧವೇ ಮಾಡದ ಮುಸ್ಲಿಮರ ಸಂಖ್ಯೆ ದೊಡ್ಡದಿದೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮಗಳಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇದೆ. ಐಎಎಸ್, ಕೆಎಎಸ್ ನಂತಹ ಪದವಿಗಳಲ್ಲಿ ವಿರಳವಾಗಿದ್ದಾರೆ. ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಹಿಂದುಳಿದಿದ್ದಾರೆ. ಅಸಂಘಟಿತ ಕಾರ್ಮಿಕರಾಗಿಯೇ ಉಳಿದಿದ್ದಾರೆ. ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಬೇಕಾಗಿದೆ. ಎಂದರು.

‘ಮುಸ್ಲಿಂ ಸಮುದಾಯದಲ್ಲಿ ಶೇ 47.5ರಷ್ಟು ಮಂದಿ ವಿದ್ಯೆಯಿಂದ ವಂಚಿತರಾಗಿದ್ದಾರೆ. ದೇಶದ ಏಳಿಗೆಗಾಗಿ ನಡೆದ ಹೋರಾಟಗಳಲ್ಲಿ ಸಮುದಾಯದ ಪಾತ್ರವೂ ಮಹತ್ವದ್ದಾಗಿದೆ. ಆದರೆ, ಪ್ರಸ್ತುತ ನಮ್ಮ ಸಮುದಾಯದ ವಿರುದ್ದವಾಗಿ ರಾಜಕಾರಣ ಮೇಲುಗೈ ಸಾಧಿಸಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಯಬಗ್ಗೆ ಯೋಚಿಸದಂತ ಸ್ಥಿತಿ ಬಂದಿದೆ. ಮುಸ್ಲಿಂ ಸಮುದಾಯವನ್ನು ಜಾತಿ, ಧರ್ಮದ ಹೆಸರಿನಲ್ಲಿ ಅವಮಾನ, ಕಡೆಗಣನೆ, ಕಳಂಕಿತರನ್ನಾಗಿ ಮಾಡಲಾಗುತ್ತಿದೆ. ರಕ್ಷಣೆ ನೀಡಬೇಕಾದ ಇಲಾಖೆಯಲ್ಲೇ ಪಕ್ಷಪಾತ ನಡೆಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಅಬ್ದುಲ್ ಘನಿ ತಾಹೀರ್, ಪಾಲಿಕೆ ಸದಸ್ಯರಾದ ಸೈಯದ್ ಚಾರ್ಲಿ, ನೂರ್‌ಜಾನ್, ಕೆ. ಚಮನ್ ಸಾಬ್, ಅಬ್ದುಲ್ ಲತೀಫ್, ಎ.ಬಿ. ಅಬ್ದುಲ್ ರಹೀಂ, ವೇದಿಕೆಯ ಉಪಾಧ್ಯಕ್ಷ ಫಯಾಜ್ ಅಹಮದ್, ಕಾರ್ಯದರ್ಶಿ ಕೆ. ಹನೀಫ್ ಸಾಬ್, ಸಂಘಟನಾ ಕಾರ್ಯದರ್ಶಿ ಬಿ. ಖಲೀಲುಲ್ಲಾ, ಖಜಾಂಚಿ ಮೈನುದ್ದೀನ್ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.