ADVERTISEMENT

ಸಡಗರ–ಸಂಭ್ರಮದ ಗಣೇಶ ಉತ್ಸವ, ವಿಭಿನ್ನ ರೂಪದಲ್ಲಿ ವಿಘ್ನ ನಿವಾರಕನ ದರ್ಶನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:23 IST
Last Updated 29 ಆಗಸ್ಟ್ 2025, 5:23 IST
ದಾವಣಗೆರೆಯ ಎಂಸಿಸಿ ‘ಎ’ ಬ್ಲಾಕ್‌ನ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಘಂಟೆಯ ಗಣೇಶ
ದಾವಣಗೆರೆಯ ಎಂಸಿಸಿ ‘ಎ’ ಬ್ಲಾಕ್‌ನ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಘಂಟೆಯ ಗಣೇಶ   

ದಾವಣಗೆರೆ: ಜಿಲ್ಲೆಯಲ್ಲಿ ಗಣೇಶ ಹಬ್ಬವನ್ನು ಸಡಗರ–ಸಂಭ್ರಮದಿಂದ ಆಚರಿಸಲಾಯಿತು. ಕೊಂಚ ಬಿರುಸಾಗಿಯೇ ಸುರಿಯುತ್ತಿದ್ದ ಮಳೆಯ ನಡುವೆಯೂ ವಿಘ್ನನಿವಾರಕನ ಆರಾಧನೆ ನಡೆಯಿತು. ಏಕದಂತನ ವಿವಿಧ ರೂಪಗಳನ್ನು ಕಣ್ತುಕೊಂಡ ಭಕ್ತರು ಪುನೀತರಾದರು.

ಗೌರಿ ಹಬ್ಬದ ಜೊತೆಗೆ ಬಿರುಸು ಪಡೆದ ಮಳೆ ಗಣೇಶ ಚತುರ್ಥಿಯ ದಿನ ಹೆಚ್ಚಾಯಿತು. ಮಳೆ ಹೊತ್ತು ತರುವ ಮೋಡ, ಮೈನಡುಗಿಸುವ ಚಳಿಯ ನಡುವೆಯೇ ಬೆನಕನ ಆರಾಧನೆಗೆ ಭಕ್ತರು ಸಜ್ಜಾದರು. ಸಾರ್ವಜನಿಕ ಸ್ಥಳ, ದೇಗುಲ, ಶಾಲೆ, ಸಂಘ–ಸಂಸ್ಥೆಗಳ ಕಾರ್ಯಾಲಯ, ಕಲ್ಯಾಣ ಮಂಟಪ ಸೇರಿ ಹಲವೆಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಿದರು.

ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿರುವ ವಿಷ್ಣುವಿನ ದಶಾವತಾರ ರೂಪದ ಏಕದಂತ

ADVERTISEMENT

ಬುಧವಾರ ಗಣೇಶ ಮೂರ್ತಿಯನ್ನು ಮನೆತುಂಬಿಸಿಕೊಂಡ ಭಕ್ತರು ಇಡೀ ದಿನ ಹಬ್ಬ ಆಚರಿಸಿದರು. ಮೋದಕ ಸೇರಿದಂತೆ ತರಹೇವಾರಿ ತಿಂಡಿ–ತಿನಿಸುಗಳನ್ನು ನೈವೇದ್ಯ ಮಾಡಿ ಸವಿದರು. ಕೆಲ ಮನೆಗಳಲ್ಲಿ ಅಂದೇ ಸಂಜೆ ವಿಸರ್ಜನೆಯನ್ನೂ ಮಾಡಿದರು. ಆದರೆ, ಭಕ್ತ ಮಂಡಳಿ, ಉತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳು ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುತ್ತಿವೆ. ಇವುಗಳಲ್ಲಿ ಬಹುತೇಕ ಮುರ್ತಿಗಳು 3, 5, 9 ಹಾಗೂ 11ನೇ ದಿನಕ್ಕೆ ವಿಸರ್ಜನೆಯಾಗಲಿವೆ.

ದಾವಣಗೆರೆಯ ಬಿಐಟಿ ಕಾಲೇಜು ರಸ್ತೆಯಲ್ಲಿ ಸ್ಕೈ ಗ್ರೂಪ್‌ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ 

ಬೀದಿ–ಬೀದಿಗಳಲ್ಲಿ ಭಕ್ತ ಮಂಡಳಿಗಳು ಗಣೇಶನನ್ನು ಪ್ರತಿಷ್ಠಾಪಿಸಿವೆ. ವಿವಿಧ ಪರಿಕಲ್ಪನೆಗಳನ್ನು ಮುಂದಿಟ್ಟುಕೊಂಡು ಮಂಟಪ ನಿರ್ಮಿಸಿವೆ. ಗಣೇಶ ಮೂರ್ತಿಗಳು ಕೂಡ ಒಂದೊಂದು ಸಂದೇಶವನ್ನು ರವಾನಿಸುತ್ತಿವೆ. ಸಂಜೆಯಾಗುತ್ತಿದ್ದಂತೆ ವಿದ್ಯುತ್‌ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿವೆ. ಭಕ್ತಿಯ ಭಾವಗಳನ್ನು ಉಕ್ಕಿಸಿ ಕಣ್ಮನ ಸೆಳೆಯುತ್ತಿವೆ. ಸಂಜೆಯಿಂದ ರಾತ್ರಿಯವರೆಗೆ ಇಂತಹ ಗಣಪತಿಗಳ ದರ್ಶನ ಪಡೆಯಲು ಭಕ್ತರು ಉತ್ಸುಕತೆ ತೋರುತ್ತಿದ್ದಾರೆ.

ಹೈಸ್ಕೂಲ್‌ ಮೈದಾನದಲ್ಲಿ ಹಿಂದೂ ಮಹಾಸಭಾ ಟ್ರಸ್ಟ್‌ ವತಿಯಿಂದ ಬದರಿನಾಥ ದೇಗುಲದ ಮಾದರಿಯಲ್ಲಿ ನಿರ್ಮಿಸಿದ ಮಂಟಪ ಆಕರ್ಷಕವಾಗಿದೆ. ಈ ಮಂಟಪ ಕಣ್ತುಂಬಿಕೊಳ್ಳುವ ಕಾತುರದಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವಿಷ್ಣುವಿನ ದಶಾವತಾರ ರೂಪದ 15 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಹಿಂದೂ ಯುವಶಕ್ತಿ ಸಂಘ ಎಂಸಿಸಿ ‘ಎ’ ಬ್ಲಾಕ್‌ನ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಘಂಟೆಯ ಗಣೇಶ ಮೂರ್ತಿ ವಿಶೇಷವಾಗಿದೆ. 34ನೇ ವರ್ಷದ ಗಣೇಶೋತ್ಸವದಲ್ಲಿ ಗೋವಿನ 9,555 ಘಂಟೆಗಳನ್ನು ಬಳಸಿ ಮೂರ್ತಿ ತಯಾರಿಸಿರುವುದು ಗಮನ ಸೆಳೆಯುತ್ತಿದೆ. ಈ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಭಕ್ತರು ತಂಡೋಪತಂಡವಾಗಿ ಬರುತ್ತಿದ್ದಾರೆ.

ವಿನೋಬನಗರದ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ ಮಹಾರಾಷ್ಟ್ರದ ಜೇಜೂರಿ ಖಂಡೋಬ ಮಾದರಿಯಲ್ಲಿ 12 ಅಡಿ ಎತ್ತರದ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮಂಟಪದಲ್ಲಿ ಮಹನೀಯರ ಪುತ್ಥಳಿಗಳನ್ನು ಇಡಲಾಗಿದೆ. ಬಸವಣ್ಣ, ಮಡಿವಾಳ ಮಾಚಿದೇವರು ಸೇರಿದಂತೆ ಹಲವರ ವಚನಗಳನ್ನು ಹಾಕಲಾಗಿದೆ. ನಿತ್ಯ ಸಂಜೆ 6.30ರಿಂದ ರಾತ್ರಿ 9.30ರವರೆಗೆ ‘ದೇವಿ ಸ್ವರೂಪಿ’ ನೃತ್ಯ ರೂಪಕವನ್ನು ಏರ್ಪಡಿಸಲಾಗಿದೆ.

ಪೊಲೀಸ್‌ ಕ್ವಾಟ್ರಸ್‌ನಲ್ಲಿ ಉಗ್ರನರಸಿಂಹನ ಅವತಾರದಲ್ಲಿ ಗಣೇಶ ದರ್ಶನ ಭಾಗ್ಯ ಕರುಣಿಸುತ್ತಿದ್ದಾನೆ. 20 ಅಡಿ ಎತ್ತರದ ಈ ಗಣೇಶ ಭಕ್ತರ ಕಣ್ಮನ ಸೆಳೆಯುತ್ತಿದ್ದಾನೆ. ಕೋಲ್ಕೊತ್ತಾದ ಕಲಾವಿದರು ನಿರ್ಮಿಸಿದ ಈ ಮೂರ್ತಿಯ ಮುಖಭಾವ ಹಿಡಿದಿಡುತ್ತದೆ.

ರಾಮ್‌ ಅಂಡ್‌ ಕೋ ವೃತ್ತದ ಗೆಳೆಯರ ಬಳಗ ದೇಗುಲದ ಮಾದರಿಯಲ್ಲಿ ನಿರ್ಮಿಸಿದ ಮಂಟಪ ಭಕ್ತರನ್ನು ಸೆಳೆಯುತ್ತಿದೆ. ಬಿಐಟಿ ಕಾಲೇಜು ರಸ್ತೆಯಲ್ಲಿ ಸ್ಕೈ ಗ್ರೂಪ್‌ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಭಕ್ತರನ್ನು ಜಾಗೃತಿಗೊಳಿಸುವ ಕಾರ್ಯವನ್ನೂ ಮಾಡುತ್ತಿದೆ. ಹೊರಾಂಗಣ ಕ್ರೀಡೆಗಳು ಮಾಯವಾಗಿ ಒಳಾಂಗಣ ಕ್ರೀಡೆಗಳು ಬಂದಿರುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದೆ.

ದಾವಣಗೆರೆಯ ರಾಮ್‌ ಅಂಡ್‌ ಕೋ ವೃತ್ತದಲ್ಲಿ ದೇಗುಲದ ಮಾದರಿಯಲ್ಲಿ ನಿರ್ಮಿಸಿದ ಮಂಟಪದಲ್ಲಿರುವ ಗಣೇಶ

ಶಿವಕುಮಾರಸ್ವಾಮಿ ಬಡಾವಣೆ, ಎಸ್‌.ಎಸ್‌.ಬಡಾವಣೆ, ದೊಡ್ಡಪೇಟೆ, ಆಂಜನೇಯ ಬಡಾವಣೆ, ವಿದ್ಯಾನಗರ, ಕೆಟಿಜೆ ನಗರ, ಸರಸ್ವತಿ ನಗರ, ನಿಜಲಿಂಗಪ್ಪ ಬಡಾವಣೆ, ನಿಟುವಳ್ಳಿ, ಬೇತೂರು, ಕೊಂಡಜ್ಜಿ ರಸ್ತೆ ಸೇರಿ ಹಲವೆಡೆ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ.

ದಾವಣಗೆರೆಯ ವಿನೋಬನಗರದಲ್ಲಿರುವ ಖಂಡೋಬ ಮಾದರಿ ವಿನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.