ಈಶ್ವರ ಖಂಡ್ರೆ
ಫೇಸ್‌ಬುಕ್ ಚಿತ್ರ
ದಾವಣಗೆರೆ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ರೀತಿಯಲ್ಲಿ ಪಾಕಿಸ್ತಾನವನ್ನು ಎದುರಿಸಬೇಕಿದೆ. ಲೋಕಸಭೆಯ ಪ್ರತಿಪಕ್ಷವಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಬೆನ್ನಿಗೆ ನಿಂತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದರು. ಇದೇ ರೀತಿ ಕ್ರಮ ಕೈಗೊಳ್ಳಲು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಲಹೆ ನೀಡಿದ್ದಾರೆ. ಏಕೆ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭದ್ರತಾ ವೈಫಲ್ಯ ಆಗಿದ್ದು ಇಡೀ ದೇಶಕ್ಕೆ ಗೊತ್ತಿದೆ. ಕಂದಹಾರ ವಿಮಾನ ಅಪಹರಣ, ಸಂಸತ್ತು, ಅಕ್ಷರಧಾಮದ ಮೇಲಿನ ದಾಳಿ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ. ಭದ್ರತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ನೈತಿಕತೆಯನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಕರಾವಳಿಯಲ್ಲಿ ನಡೆದ ಅಪರಾಧ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಪರಾಧಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ಸಮಾಜ ಘಾತುಕ ಶಕ್ತಿಗಳಿಗೆ ಜಾತಿ, ಧರ್ಮ ಇಲ್ಲ. ಕೊಲೆಗಡುಕರು, ದುಷ್ಕರ್ಮಿಗಳನ್ನು ಬಗ್ಗು ಬಡಿಯುವುದು ರಾಜ್ಯ ಸರ್ಕಾರಕ್ಕೆ ಗೊತ್ತಿದೆ. ಭದ್ರತೆ ಹೆಚ್ಚು ಮಾಡಲು ಹಾಗೂ ಬೇಹುಗಾರಿಕೆ ಇನ್ನಷ್ಟು ಬಿಗಿಗೊಳಿಸಲು ಬಿಜೆಪಿ ಸಲಹೆ ನೀಡುವುದನ್ನು ಬಿಟ್ಟು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ’ ಎಂದು ಕಿಡಿಕಾರಿದರು.
‘ಜನಗಣತಿ ಜೊತೆಗೆ ಜಾತಿ ಗಣತಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ಮಾಡಿದರೆ ಒಳ್ಳೆಯದು. ರಾಜ್ಯದಲ್ಲಿ ನಡೆದ ಜಾತಿ ಗಣತಿಯಲ್ಲಿ ಸಣ್ಣ ಸಮುದಾಯಗಳು ಕಣ್ತಪ್ಪಿ ಹೋಗಿವೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಮೇ 9 ರಂದು ಮತ್ತೊಮ್ಮೆ ಸಂಪುಟದ ಸಭೆ ನಡೆಯಲಿದೆ. ಸಚಿವನಾಗಿ ನನ್ನ ನಿಲುವು, ಅಭಿಪ್ರಾಯವನ್ನು ಸಂಪುಟದ ಮುಂದೆ ಇಡುವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.