
ಜಗಳೂರು: ‘ಕೇವಲ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ಗುರಿಯಾಗುವ ಬದಲಿಗೆ ಸುಪ್ತ ಪ್ರತಿಭೆ ಹೊರಹೊಮ್ಮುವ ನಿಟ್ಟಿನಲ್ಲಿ, ಪಠ್ಯೇತರ ಚಟುವಟಿಕೆಗಳು ಮತ್ತು ತಂತ್ರಜ್ಞಾನ ಹಾಗೂ ಕೌಶಲಾಧಾರಿತ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಿದೆ’ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಟ್ಟಣದ ಎನ್.ಎಂ.ಕೆ. ಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಲಿಕೆಗೆ ವಯಸ್ಸು, ಲಿಂಗ, ಜಾತಿ ಧರ್ಮದ ಹಂಗಿಲ್ಲ. ಇತ್ತೀಚೆಗೆ ಮೊಬೈಲ್‌ನಿಂದ ಮಕ್ಕಳ ಮೇಲೆ ಬೀರುವ ದುಷ್ಪರಿಣಾಮಗಳನ್ನು ತಪ್ಪಿಸಬೇಕು. ಕನ್ನಡ ನಾಡಿನ ಕುವೆಂಪು ಅವರಂತಹ ಮೇರು ಸಾಹಿತಿಗಳ ಹಾದಿಯಲ್ಲಿ ಮಕ್ಕಳು ಸೃಜನಶೀಲ ಬರವಣಿಗೆ, ಸಾಹಿತ್ಯಾಸಕ್ತಿ ಹೊಂದಬೇಕು’ ಎಂದು ಸಲಹೆ ನೀಡಿದರು.
‘ನಾವು ವಿದ್ಯಾರ್ಥಿಗಳಾಗಿದ್ದ ಕಾಲಘಟ್ಟದಲ್ಲಿ ಪ್ರತಿಭಾ ಕಾರಂಜಿಯಂತಹ ವಿನೂತನ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಧರೆಯಿಂದ ಗಂಗೆ ಹೊರಚಿಮ್ಮುವಂತೆ, ಮಕ್ಕಳಲ್ಲಿನ ಪ್ರತಿಭೆ ಹೊರಚಿಮ್ಮಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ತೀರ್ಪುಗಾರರ ತೀರ್ಪಿನಲ್ಲಿ ತಾರತಮ್ಯಕ್ಕೆ ಅವಕಾಶ ನೀಡದೇ ಪಾರದರ್ಶಕವಾಗಿರಲಿ’ ಎಂದು ಸಲಹೆ ನೀಡಿದರು.
ತಾಲ್ಲೂಕಿನ 16 ಕ್ಲಸ್ಟರ್ ಹಂತದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದಲ್ಲಿ ಸ್ಪರ್ಧಿಸಿದ್ದಾರೆ. ಜಿಲ್ಲೆ, ರಾಜ್ಯ ಮಟ್ಟದಲ್ಲಿ ತಾಲ್ಲೂಕಿನ ಪ್ರತಿಭೆಗಳು ಗುರುತಿಸಿಕೊಳ್ಳಬೇಕು’ ಎಂದು ಬಿಇಒ ಹಾಲಮೂರ್ತಿ ಕಿವಿಮಾತು ಹೇಳಿದರು.
ರಾಷ್ಟ್ರಮಟ್ಟದಲ್ಲಿ ವಿಜೇತರಾದ ಕರಾಟೆಪಟುಗಳನ್ನು ಸನ್ಮಾನಿಸಲಾಯಿತು. ತಾಲ್ಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳು ವಸ್ತ್ರ ವಿನ್ಯಾಸಗಳೊಂದಿಗೆ ಛದ್ಮವೇಷಧಾರಿಗಳಾಗಿ ಆಕರ್ಷಣೆಗೊಂಡರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್.ಎಂ.ಹಾಲಸ್ವಾಮಿ, ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎಸ್. ಅರವಿಂದನ್, ಎನ್.ಎಂ.ಕೆ. ಶಾಲೆ ಕಾರ್ಯದರ್ಶಿ ಎನ್.ಎಂ.ಲೋಕೇಶ್, ಆರ್.ವೀರೇಶ್, ಜಯಣ್ಣ, ಬಿಆರ್‌ಸಿ ಡಿ.ಡಿ. ಹಾಲಪ್ಪ, ಸಿಆರ್‌ಪಿಗಳಾದ ನಾಗಪ್ಪ, ಹನುಮಂತಪ್ಪ, ಇಸಿಒ ಬಸವರಾಜಪ್ಪ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದಿದ್ದಿಗಿ ಮಂಜಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಬಸವರಾಜ್, ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಆನಂದಪ್ಪ, ಎನ್‌ಜಿಒ ನಿರ್ದೇಶಕರಾದ ಸತೀಶ್, ಬಸವರಾಜಪ್ಪ, ಕಲ್ಲಿನಾಥ್, ಶಿಕ್ಷಕರ ಸಂಘದ ಫಾತಿಮಾ, ಪ್ಯಾರಿಮಾ, ಶಕುಂತಲಾ, ಬಸವರಾಜ್, ಎಚ್.ರೂಪಾ, ತಿಪ್ಪಮ್ಮ, ಶಿವಮ್ಮ, ಕುಮಾರನಾಯ್ಕ, ಮಂಜುನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.