ದಾವಣಗೆರೆ: ಬಾಳೆ ಎಲೆ, ತಟ್ಟೆಗಳಲ್ಲಿ ಹರಡಿದ ಖಾದ್ಯಗಳ ಘಮ ಎಲ್ಲೆಡೆ ಆವರಿಸಿತ್ತು. ಪುಷ್ಪಗಳಿಂದ ಅಲಂಕರಿಸಿದ ರೀತಿ ಕಣ್ಮನ ಸೆಳೆಯುತ್ತಿತ್ತು. ಬಾಯಲ್ಲಿ ನೀರೂರಿಸಿ ಜಿಹ್ವಾ ಚಾಪಲ್ಯ ಉತ್ತೇಜಿಸಿತು. ತೀರ್ಪುಗಾರರು ರುಚಿನೋಡಿ ತಲೆದೂಗಿದ್ದನ್ನು ಕಂಡಾಗ ಸ್ಪರ್ಧಾಳುಗಳ ಮೊಗ ಧನ್ಯತಾ ಭಾವದಿಂದ ಅರಳಿತು.
ಇಂತಹದೊಂದು ದೃಶ್ಯ ನಗರದ ಪಂಜುರ್ಲಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಕಂಡುಬಂದಿತು. ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಾಗೂ ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ ವತಿಯಿಂದ ಏರ್ಪಡಿಸಿದ್ದ ‘ಕರುನಾಡ ಸವಿಯೂಟ ಆವೃತ್ತಿ–4’ ನಿಜಕ್ಕೂ ನಾಡಿನ ತಿನಿಸುಗಳ ಜಾತ್ರೆಯಾಗಿತ್ತು. ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದ ತಿನಿಸುಗಳು ಇಲ್ಲಿ ಜುಗಲ್ ಬಂದಿಯಾಗಿದ್ದವು.
‘ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರುಳಿ ಮತ್ತು ಸುಚಿತ್ರಾ ದಂಪತಿ ಪ್ರಮುಖ ಆಕರ್ಷಣೆ ಆಗಿದ್ದರು. ಬೆಣ್ಣೆನಗರಿಯ ಸ್ಪರ್ಧೆಗೆ ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ನಲ್ಲಿ ಬೆಣ್ಣೆ-ಬೆಳ್ಳುಳ್ಳಿ ಬಳಸಿ ಪನ್ನೀರ್ ಫ್ರೈ ತಯಾರಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಆಬಳಿಕ ಆಹಾರ ಲೋಕವೇ ಅನಾವರಣಗೊಂಡಿತು. ಮಾಂಸಾಹಾರ, ಸಸ್ಯಾಹಾರ, ಸ್ಟಾರ್ಟರ್, ಸಿಹಿ ಖಾದ್ಯಗಳು ಸ್ಪರ್ಧೆಗೆ ಸಜ್ಜಾದವು. ಅಡುಗೆ ಮನೆಯಲ್ಲಿ ನಡೆದ ವಿಭಿನ್ನ ಆವಿಷ್ಕಾರದಲ್ಲಿ ಮೂಡಿಬಂದ ಖಾದ್ಯಗಳ ವಿಶಿಷ್ಟ ಪ್ರಸ್ತುತಿ ಮನಸೂರೆಗೊಂಡಿತು.
ಸಿದ್ಧಪಡಿಸಿ ತಂದಿದ್ದ ಖಾದ್ಯ
ನೂರಾರು ಜನರು ಮನೆಯಲ್ಲೇ ಸಿದ್ಧಪಡಿಸಿದ್ದ ತಿಂಡಿ, ತಿನಿಸುಗಳನ್ನು ಸ್ಪರ್ಧೆಗೆ ತಂದಿದ್ದರು. ನಸುಕಿನಲ್ಲಿ ಎದ್ದು ಅಗತ್ಯ ಸಿದ್ಧತೆ ಮಾಡಿಕೊಂಡು ತಯಾರಿಸಿದ ಆಹಾರ ಪದಾರ್ಥದಲ್ಲಿ ಪಾಕ ಪ್ರವೀಣೆಯರ ಶ್ರಮ, ಪ್ರೀತಿ ಕಾಣುತ್ತಿತ್ತು. ಒಂದೇ ತಿನಿಸು ಸ್ಪರ್ಧೆಗೆ ಪರಿಗಣಿಸುವ ನಿಬಂಧನೆ ಇದ್ದರೂ ಸ್ಪರ್ಧಾಳುಗಳು ಹಲವು ಪದಾರ್ಥಗಳನ್ನು ಸಿದ್ಧಪಡಿಸಿ ತಂದಿದ್ದರು. ಬಿಸಿ ಆರದಂತೆ, ತಾಜಾತನ ಹಾಳಾಗದಂತೆ ಎಚ್ಚರ ವಹಿಸಿದ್ದರು. ನೋಂದಣಿ ಪ್ರಕ್ರಿಯೆ ಮುಗಿಸಿ, ನಿಗದಿಪಡಿಸಿದ ಆಸನದಲ್ಲಿ ಕುಳಿತವರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತವಕವಿತ್ತು.
ಸಸ್ಯಾಹಾರ ಹಾಗೂ ಮಾಂಸಾಹಾರಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಸ್ಯಾಹಾರ ಖಾದ್ಯಗಳ ಪ್ರಮಾಣ ಹೆಚ್ಚಾಗಿತ್ತು. 16 ವರ್ಷ ವಯಸ್ಸಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮನ್ವಂತ್ ಸೇರಿದಂತೆ 70 ವರ್ಷದ ಶಾರದಮ್ಮ ಹಾಗೂ 80 ವರ್ಷದ ಗಂಗಮ್ಮ ಕೂಡ ಸ್ಪರ್ಧೆಯಲ್ಲಿದ್ದರು. ಐವರು ಪುರುಷರ ಖಾದ್ಯಗಳು ‘ಅಡುಗೆ ಮನೆಯು ಸ್ತ್ರೀಯರಿಗೆ ಸೀಮಿತ’ ಎಂಬ ನಂಬಿಕೆಯನ್ನು ಹುಸಿಗೊಳಿಸಿದವು.
ಕರುನಾಡ ಆಹಾರ ದರ್ಶನ
ಸ್ಪರ್ಧೆಗೆ ಸಜ್ಜಾಗಿ ಬಂದಿದ್ದ ಆಹಾರ ಪದಾರ್ಥಗಳು ಕರುನಾಡ ದರ್ಶನ ಮಾಡಿಸಿದವು. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಎಣ್ಣೆಗಾಯಿ, ಚಟ್ನಿಗಳಿಂದ ಹಿಡಿದು ಮಲೆನಾಡ ಕಡುಬು, ಕರಾವಳಿಯ ನೀರ್‌ದೋಸೆ ಕೂಡ ಅಲ್ಲಿದ್ದವು. ಸಿರಿಧಾನ್ಯದಿಂದ ತಯಾರಿಸಿದ ಪದಾರ್ಥಗಳು ಹೆಚ್ಚಾಗಿದ್ದವು. ಚಿಕನ್ ಮತ್ತು ಮಟನ್ ಖಾದ್ಯಗಳು, ಗುಜರಾತಿನ ದೋಕ್ಲಾ ಸೇರಿದಂತೆ ಉತ್ತರ ಭಾರತದ ತಿನಿಸುಗಳು ಕೂಡ ಸ್ಥಾನ ಪಡೆದಿದ್ದವು.
ರಾಗಿ ಮುದ್ದೆ, ಒತ್ತು ಶಾವಿಗೆ, ಬಿದಿರಿನಿಂದ ತಯಾರಿಸಿದ ಕಳಲೆ ಪಲ್ಯ, ರಾಗಿ ಕೀಲ್ಸದಂತಹ ಸಾಂಪ್ರದಾಯಿಕ ಖಾದ್ಯಗಳು ಅಡುಗೆ ಮನೆಯಿಂದ ಹೊರಗೆ ಬಂದಿದ್ದವು. ವೀಳ್ಯದೆಲೆ, ಗುಲ್ಕನ್‌ನಿಂದ ಸಿದ್ಧಪಡಿಸಿದ ಲಡ್ಡು, ಸೀತಾಫಲ ಹಣ್ಣಿನ ಹಲ್ವಾ, ಗೋದಿ ಹಿಟ್ಟಿನ ತರಗು, ಪನ್ನೀರಿನ ರಾಗಿ ತಾಲಿಪಟ್ಟು ವಿನೂತನ ಖಾದ್ಯಗಳಾಗಿದ್ದವು. ಹಲಸಿನ ಬೀಜದ ಪಲ್ಯ, ತರಕಾರಿ ಜ್ಯೂಸ್, ಶಂಕರ ಪುಷ್ಪದ ಎಲೆಯ ರೈಸ್‌ಬಾತ್, ದಾಲ್ ಪಾಯಸ, ಕುಚ್ಚಲಕ್ಕಿಯ ಪೊಂಗಲ್, ರಾಗಿ ಹಿಟ್ಟಿನ ಪಕೋಡಾ, ಪಾರಿಜಾತ ಹೂವಿನ ಖೀರು, ನುಗ್ಗೆಸೊಪ್ಪಿನ ಸಿಹಿಯುಂಡೆ, ಹಸಿಮೆಣಸಿನಕಾಯಿ ಬರ್ಫಿ ವಿಭಿನ್ನ ರೀತಿಯ ಖಾದ್ಯಗಳಾಗಿ ಗಮನ ಸೆಳೆದವು.
ಮನಸೂರೆಗೊಂಡ ಪ್ರಸ್ತುತಿ
ಆಹಾರ ಪದಾರ್ಥಗಳ ರುಚಿಯ ಜೊತೆಗೆ ಪ್ರಸ್ತುತಿಗೂ ಪ್ರಾಧಾನ್ಯತೆ ನೀಡಲಾಗಿತ್ತು. ಪ್ರತಿಯೊಬ್ಬ ಸ್ಪರ್ಧಾಳು ತಿನಿಸುಗಳ ಪ್ರದರ್ಶನಕ್ಕೂ ಒತ್ತು ನೀಡಿದ್ದರು. ಬಾಳೆ ಎಲೆ, ತಟ್ಟೆಗಳಲ್ಲಿ ಖಾದ್ಯಗಳನ್ನು ಇಟ್ಟು ಪ್ರಸ್ತುಪಡಿಸಿದ ರೀತಿಗೆ ತೀರ್ಪುಗಾರರು ಮನಸೋತರು.
ತಟ್ಟೆಯಲ್ಲಿ ಆಹಾರ ಪಾದಾರ್ಥಗಳೊಂದಿಗೆ ಹೆಚ್ಚಿದ ತರಕಾರಿಗಳನ್ನು ಇಟ್ಟಿದ್ದರು. ಸಿಹಿ ತಿನಿಸುಗಳ ಜೊತೆಗೆ ಒಣಹಣ್ಣುಗಳನ್ನು ಬಳಸಿ ಅಲಂಕರಿಸಲಾಗಿತ್ತು. ಚಿಕ್ಕ ಗಾತ್ರದ ಹೂಕುಂಡ, ದೀಪಗಳಿಂದ ಆಹಾರಕ್ಕೆ ದೈವತ್ವದ ಪರಿಕಲ್ಪನೆ ತುಂಬಲಾಗಿತ್ತು. ತೆಂಗಿನ ಗರಿಯ ಬುಟ್ಟಿಯಲ್ಲಿ ತರಗು ಪುಡಿಯನ್ನು ಇಟ್ಟಿದ್ದ ಪರಿ ಆಕರ್ಷಣೀಯವಾಗಿತ್ತು.
ಬೂದುಕುಂಬಳದಿಂದ 20ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಸಿದ್ಧಪಡಿಸಿದ ಸುನಂದಾ ಅವರ ಪ್ರಯತ್ನಕ್ಕೆ ತೀರ್ಪುಗಾರರು ತಲೆದೂಗಿದರು. ಕುಸುಮಾ ಪ್ರಕಾಶ್ ಅವರು 16 ಬಗೆಯ ಇಡ್ಲಿ ಸಿದ್ಧಪಡಿಸಿದ ರೀತಿಗೆ ಮನಸೋತರು. ಪ್ರತಿಯೊಬ್ಬರ ಬಳಿಗೆ ತೆರಳಿ ಖಾದ್ಯದ ರುಚಿ ನೋಡಿದ ಮುರುಳಿ–ಸುಚಿತ್ರಾ ದಂಪತಿ ಅಂಕಗಳನ್ನು ನೀಡಿದರು.
ಅಡುಗೆ ರಾಕೆಟ್ ವಿಜ್ಞಾನವಲ್ಲ. ಕೊಂಚ ಪ್ರೀತಿ ಆಸಕ್ತಿ ಇದ್ದರೆ ಸಾಕು. ತಯಾರಿಸುವ ಪ್ರತಿ ಖಾದ್ಯವೂ ರುಚಿ ಪಡೆಯುತ್ತದೆ. ಉಪ್ಪು ಹುಳಿ ಖಾರ ಸಮತೋಲನದಲ್ಲಿ ಇರಬೇಕು.– ಮುರುಳಿ–ಸುಚಿತ್ರಾ, ತೀರ್ಪುಗಾರರು
ಕಾವ್ಯಾಗೆ ಪ್ರಥಮ ಬಹುಮಾನ
29 ಬಗೆಯ ತಿನಿಸುಗಳನ್ನು ಸಿದ್ಧಪಡಿಸಿದ್ದ ಕಾವ್ಯಾ ಎಸ್. ಬೆಲ್ಲದ ಅವರು ‘ಕರುನಾಡ ಸವಿಯೂಟ–ಆವೃತ್ತಿ 4’ರ ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡರು. ₹ 10000 ನಗದು ಬಹುಮಾನ ಸ್ವೀಕರಿಸಿ ಸಂತಸದಿಂದ ತೇಲಾಡಿದರು. ಸುನಂದಾ ವರ್ಣೇಕರ್ ದ್ವಿತೀಯ ಬಹುಮಾನ ಪಡೆದು ₹ 5000 ನಗದು ಗೆದ್ದರು. ನೇತ್ರಾ ವಿನಯ್ ತೃತೀಯ ಬಹುಮಾನ ಪಡೆದು ₹ 3000 ತಮ್ಮದಾಗಿಸಿಕೊಂಡರು. ಗೀತಾ ಬಸವರಾಜ್ 4ನೇ ಹಾಗೂ ಫಿರ್ದೋಸ್ ಖಾನಂ 5ನೇ ಬಹುಮಾನ ಗೆದ್ದರು. ಮಾನಸ ರಶ್ಮಿ ಅಮೃತಾ ಜ್ಯೋತಿ ಶ್ರೀಲಕ್ಷ್ಮಿ ವಿಜಯಲಕ್ಷ್ಮಿ ಹಾಗೂ ಗೌರಿ ಸಮಾಧಾನಕರ ಬಹುಮಾನ ಪಡೆದರು.
ಸಿಲಿಂಡರ್ ಸುರಕ್ಷತೆಗೆ ಸಲಹೆ
ಅಡುಗೆ ಮನೆಯಲ್ಲಿ ಇರುವ ಸಿಲಿಂಡರ್ ಸುರಕ್ಷತೆಯ ಕುರಿತು ಇಂಡಿಯನ್ ಆಯಿಲ್ ಕಾರ್ಪೊರೇಶನ್ ವತಿಯಿಂದ ಸಲಹೆಗಳನ್ನು ನೀಡಲಾಯಿತು.
‘ಸಿಲಿಂಡರ್ ಸ್ವೀಕರಿಸುವ ಮುನ್ನ ತೂಕ ಖಚಿತಪಡಿಸಿಕೊಳ್ಳಬೇಕು. ಸ್ಟೌಗಿಂತ ಸಿಲಿಂಡರ್ ಕೆಳಭಾಗದಲ್ಲಿ ಇರಬೇಕು. ಅನಿಲ ತುಂಬಿದ ಸಿಲಿಂಡರ್ ನೇರವಾಗಿರಬೇಕು. ಐದು ವರ್ಷಕ್ಕೊಮ್ಮೆ ಪೈಪ್ ಬದಲಿಸಬೇಕು. ಬೆಂಕಿ ಅವಘಡ ಸಂಭವಿಸದಂತೆ ಎಚ್ಚರ ವಹಿಸಬೇಕು’ ಎಂದು ಸೂರ್ಯಾ ಗ್ಯಾಸ್ ಏಜೆನ್ಸಿ ವಿತರಕ ಯಲ್ಲೇಶ್ ಬಾಬು ಹೇಳಿದರು.
ಇಂಡಿಯನ್ ಆಯಿಲ್ ಕಾರ್ಪೊರೇಶನ್ ವ್ಯವಸ್ಥಾಪಕ ಮೊಹಮ್ಮದ್ ಆದಿಲ್ ಧರ್ಮಸ್ಥಳ ಇಂಡೇನ್ ಗ್ಯಾಸ್ ಏಜೆನ್ಸಿ ವಿತರಕ ಅಶೋಕ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.