ADVERTISEMENT

ಜಗಳೂರು | ದರ ಕುಸಿತ: ಬೆಳೆಗಾರರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:08 IST
Last Updated 15 ಅಕ್ಟೋಬರ್ 2025, 6:08 IST
ಜಗಳೂರು ತಾಲ್ಲೂಕಿನ ಮರೇನಹಳ್ಳಿ ಪ್ರದೇಶದಲ್ಲಿ ಈರುಳ್ಳಿ ಕಟಾವು ಕಾರ್ಯದಲ್ಲಿ ನಿರತರಾಗಿರುವ ಮಹಿಳಾ ಕೂಲಿಕಾರರು
ಜಗಳೂರು ತಾಲ್ಲೂಕಿನ ಮರೇನಹಳ್ಳಿ ಪ್ರದೇಶದಲ್ಲಿ ಈರುಳ್ಳಿ ಕಟಾವು ಕಾರ್ಯದಲ್ಲಿ ನಿರತರಾಗಿರುವ ಮಹಿಳಾ ಕೂಲಿಕಾರರು    

ಜಗಳೂರು: ಹಲವು ದಶಕಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲ್ಲೂಕಿನಲ್ಲೇ ಅತೀ ಹೆಚ್ಚಿನ ಪ್ರದೇಶದಲ್ಲಿ ಈರುಳ್ಳಿಯನ್ನು ಬೆಳೆಯಲಾಗುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಲವು ವರ್ಷಗಳಿಂದ ನಿರಂತರವಾಗಿ ಈರುಳ್ಳಿ ದರ ಏರು– ಪೇರಾಗುತ್ತಿದ್ದರೂ ತಾಲ್ಲೂಕಿನ ರೈತರು ಬೆಳೆಯುತ್ತಲೇ ಇದ್ದಾರೆ. ಮಹಾರಾಷ್ಟ್ರ ಮತ್ತು ತೆಲಂಗಾಣಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ದರ ಕುಸಿತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಲ್ಲೂಕಿನ ಕಸಬಾ ಮತ್ತು ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷ ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ಅಂದಾಜು 5,000 ಎಕರೆ ಈರುಳ್ಳಿ ಬೆಳೆಯಲಾಗಿದೆ. ಈ ಬಾರಿ ಮುಂಗಾರು ಆರಂಭಕ್ಕೆ ನಿರಂತರ ಸೋನೆ ಮಳೆಯಿಂದಾಗಿ ತೇವಾಂಶ ಹೆಚ್ಚಿ, ಕೊಳೆ ರೋಗ ಕಾಣಿಸಿಕೊಂಡಿತ್ತು. ನಂತರದಲ್ಲಿ ಉತ್ತಮ ಬಿಸಿಲು ಬಿದ್ದಿದ್ದರಿಂದ ಇಳುವರಿ ಚೆನ್ನಾಗಿದ್ದು, ಬಹುತೇಕ ಕಟಾವಿನ ಹಂತದಲ್ಲಿದೆ.

ADVERTISEMENT

ಕಸಬಾ ಹೋಬಳಿಯ ಮರೇನಹಳ್ಳಿ, ಭರಮಸಮುದ್ರ, ಜಮ್ಮಾಪುರ, ರಂಗಾಪುರ, ಕಲ್ಲೇದೇವರಪುರ, ಚಿಕ್ಕಮಲ್ಲನಹೊಳೆ, ಹಿರೇಮಲ್ಲನಹೊಳೆ ಸೇರಿದಂತೆ ತೊರೆಸಾಲು ಭಾಗದಲ್ಲಿ ವ್ಯಾಪಕವಾಗಿ ಈರುಳ್ಳಿ ಬೆಳೆಯಲಾಗಿದೆ.

‘ಸಾಲ ಮಾಡಿ ದುಬಾರಿ ಬೆಲೆಯ ಬೀಜ, ಗೊಬ್ಬರ ಖರೀದಿಸಿ ಹಾಕಿ, ಕುಟುಂಬದವರೆಲ್ಲಾ ಶ್ರಮಪಟ್ಟು ಈರುಳ್ಳಿ ಬೆಳೆದಿದ್ದೇವೆ. ಆದರೆ, ಈಗ ಪ್ರತಿ ಕ್ವಿಂಟಾಲ್‌ಗೆ ಕೇವಲ ₹ 400ರಿಂದ ₹ 500ರವರೆಗೆ ದರ ಇದೆ. ಇದರಿಂದ ಹಾಕಿದ ಬಂಡವಾಳವೂ ವಾಪಸ್ ಬರುವ ಸಾಧ್ಯತೆ ಇಲ್ಲ’ ಎಂದು ಮರೇನಹಳ್ಳಿ ಗ್ರಾಮದ ಬೆಳೆಗಾರರಾದ ಪ್ರಭು ಹಾಗೂ ವೀರೇಶ್ ಆತಂಕ  ವ್ಯಕ್ತಪಡಿಸಿದರು.

ಈರುಳ್ಳಿ ಚೀಲಗಳನ್ನು ಬಿಸಿಲಿನಲ್ಲಿ ಸಾಲಾಗಿ ನಿಲ್ಲಿಸಿರುವುದು

‘ಈರುಳ್ಳಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ಹಂತದಲ್ಲಿ ಪ್ರತಿ ಚೀಲ ಈರುಳ್ಳಿ ಕೊಯ್ಯಲು ₹ 50 ಕೂಲಿ, ಸಾಗಣೆ ವೆಚ್ಚ ₹ 80, ಖಾಲಿ ಚೀಲಕ್ಕೆ ₹ 40, ಹಾಗೂ ನಿತ್ಯ ಸಂಸ್ಕರಣೆ ಕಾರ್ಯಕ್ಕೆ ₹ 50 ಸೇರಿದಂತೆ ಪ್ರತಿ ಚೀಲಕ್ಕೆ ₹ 300 ಹೆಚ್ಚುವರಿ ಖರ್ಚಾಗುತ್ತದೆ. ಬೀಜ, ಗೊಬ್ಬರ, ಕಳೆ ಖರ್ಚು ಲೆಕ್ಕ ಹಾಕಿದರೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಟ ₹ 600 ಖರ್ಚು ಬರಲಿದೆ. ಆದರೆ, ಈಗ ಕೇವಲ ₹ 400 ದರ ದೊರೆತರೆ ಈರುಳ್ಳಿ ಬೆಳೆದು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ’ ಎಂದು ತಾಲ್ಲೂಕಿನ ಉದ್ದಗಟ್ಟೆ ಗ್ರಾಮದ ರೈತ ವಿರೇಶ್ ಹೇಳಿದರು.

‘ಜಿಲ್ಲೆಯ ಒಟ್ಟು ಈರುಳ್ಳಿ ಬೆಳೆದ ಪ್ರದೇಶದಲ್ಲಿ ಶೇ 90ರಷ್ಟು ಜಗಳೂರು ತಾಲ್ಲೂಕಿನಲ್ಲಿಯೇ ಇದೆ. ಹೈಬ್ರಿಡ್ ತಳಿಗಳನ್ನು ಬಳಸಿದ್ದರಿಂದ ಒಳ್ಳೆಯ ಇಳುವರಿ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಹೆಚ್ಚಿನ ಆವಕವಾಗಿದ್ದರಿಂದ ದರ ಕುಸಿತವಾಗಿ ರೈತರಿಗೆ ನಷ್ಟವಾಗುತ್ತಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಶಂಕರ್ ತಿಳಿಸಿದರು.

ಬೆಲೆ ಕುಸಿತದಿಂದಾಗಿ ಕೂಡಲೇ ಮಾರುಕಟ್ಟೆಗೆ ಸಾಗಿಸದೇ ಬಹುತೇಕ ರೈತರು ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರುಬಹುದು ಎಂಬ ನಿರೀಕ್ಷೆಯಲ್ಲಿ ಚಳಿ, ಮಳೆಯಲ್ಲಿ ಹಗಲು ರಾತ್ರಿ ಈರುಳ್ಳಿಯನ್ನು ಕಾಯುವಂತಾಗಿದೆ.

ಬಿಸಿಲಿಗೆ ಹರಡಿರುವ ಈರುಳ್ಳಿ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.