ಸೋಗಿಲು (ನ್ಯಾಮತಿ): ಕೃಷಿ ಕ್ಷೇತ್ರ ಈಗ ರಾಸಾಯನಿಕ ಗೊಬ್ಬರಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಇವು ಇಲ್ಲದೆಯೇ ಬೆಳೆ ಬೆಳೆಯಲು ಅಸಾಧ್ಯ ಎಂಬ ಮನಃಸ್ಥಿತಿ ಬಹುಪಾಲು ರೈತರಲ್ಲಿ ಮನೆಮಾಡಿದೆ. ಇವರೆಲ್ಲರಿಗಿಂತಲೂ ತಾನು ಭಿನ್ನ ಎಂಬುದನ್ನು ಇಲ್ಲೊಬ್ಬ ರೈತ ತೋರಿಸಿಕೊಟ್ಟಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೆ ಸಮೃದ್ಧ ಫಸಲು ತೆಗೆಯುವ ಮೂಲಕ ಸಾವಯವ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.
ನ್ಯಾಮತಿ ತಾಲ್ಲೂಕಿನ ಸೋಗಿಲು ಗ್ರಾಮದ ಟಿ.ಎಂ.ಬಸವರಾಜಯ್ಯ, ಸಾವಯವ ಕೃಷಿ ಮೂಲಕ ಎರಡು ಎಕರೆ ಜಮೀನಿನಲ್ಲಿ ಬಹಳ ಚೊಕ್ಕವಾಗಿ ವಿಭಿನ್ನ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಪ್ರತಿ ತಿಂಗಳೂ ₹1 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಜಮೀನಿನಲ್ಲಿ ನೀರಿನ ಸಂಗ್ರಹಣೆಗೆ ತೊಟ್ಟಿ ನಿರ್ಮಿಸಿ ಅದರಲ್ಲಿ ಮೀನು ಸಾಕಾಣಿಕೆ ಮಾಡಿಕೊಂಡಿದ್ದಾರೆ. ಅದರಿಂದ ಎಲ್ಲಾ ಬೆಳೆಗಳಿಗೆ ಡ್ರಿಪ್ ಮುಖಾಂತರ ದ್ರವರೂಪದ ಸಾವಯವ ಗೊಬ್ಬರವನ್ನು (ಜೀವಾಮೃತ) ನೇರವಾಗಿ ನೀಡುತ್ತಿದ್ದಾರೆ.
ಎರಡು ಎಕರೆ ಜಮೀನಿನಲ್ಲಿ ಮುಖ್ಯ ಬೆಳೆಯ ಜೊತೆಗೆ ಅಂತರ ಬೆಳೆಗೂ ಆದ್ಯತೆ ಕೊಟ್ಟಿದ್ದಾರೆ. ಮುಖ್ಯ ಬೆಳೆಯಾಗಿ ಅಡಿಕೆ, ಅಂತರ ಬೆಳೆಯಾಗಿ ತೆಂಗು, ಜಾಯಿಕಾಯಿ, ಕಾಳುಮೆಣಸು, ನಿಂಬೆ, ಹಲಸು, ಡ್ರ್ಯಾಗನ್ ಫ್ರೂಟ್ಸ್, ವಾಟರ್ ಆ್ಯಪಲ್, ಮಾವು, ಬಾಳೆ, ಏಲಕ್ಕಿ, ಪಪ್ಪಾಯ, ಕಷಾಯದ ಎಲೆ, ಚಕ್ಕೆ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಾಳು ಮೆಣಸು, ಹೂವು, ನಿಂಬೆ ಬೆಳೆಗಳಲ್ಲಿ ಕಸಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸಸಿಗಳನ್ನು ಅಭಿವೃದ್ಧಿಪಡಿಸಿ ಬೇರೆ ರೈತರಿಗೂ ನೀಡುತ್ತಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಕೃಷಿ ಸಹಾಯಕರ ಮಾರ್ಗದರ್ಶನದಲ್ಲಿ ಸಾವಯವ ಕೃಷಿಯಲ್ಲಿ ಯಶಸ್ಸು ಕಂಡಿರುವ ಬಸವರಾಜಯ್ಯ ಇತರ ರೈತರಿಗೆ ಮಾದರಿಯಾಗಿದ್ದಾರೆಎಸ್.ಮಾಲಾ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.