
ದಾವಣಗೆರೆ: ‘ಬಾಂಗ್ಲಾದೇಶ ಮಾತ್ರವಲ್ಲ ಭಾರತದಲ್ಲಿ ಕೂಡ ಹಿಂದೂಗಳ ಸ್ಥಿತಿ ಭಯಾನಕವಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೋವುಗಳಿಗೆ ಮೀಸಲಾಗಿದ್ದ ಗೋಮಾಳಗಳನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು. ಇಂತಹ ಜಾಗವನ್ನು ಗೋವುಗಳ ಸೇವೆಯಲ್ಲಿ ತೊಡಗಿದವರೆಗೆ ಮಾತ್ರ ನೀಡಬೇಕು’ ಎಂದು ಸಲಹೆ ನೀಡಿದರು.
‘ಬ್ರಿಟಿಷರ ಕಾಲದಿಂದಲೂ ಗೋವುಗಳಿಗೆ 'ಗೋಮಾಳ' ಮೀಸಲಿಡಲಾಗಿತ್ತು. ಆದರೆ, ಇಂದು ಈ ಜಾಗಗಳನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಗೋಹತ್ಯೆ ನಿಷೇಧ ಕೇವಲ ಕಾಗದದ ಮೇಲಿರದೆ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಸರ್ಕಾರ ಮತ್ತು ಸಾರ್ವಜನಿಕರು ಕೈಜೋಡಿಸಬೇಕು’ ಎಂದು ತಿಳಿಸಿದ್ದಾರೆ.
‘ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ಗೋಶಾಲೆಯನ್ನಾದರೂ ತೆರೆಯುವ ಅಗತ್ಯವಿದೆ. ಆಗ ಮಾತ್ರ ಗೋವುಗಳ ರಕ್ಷಣೆ ಮಾಡಲು ಸಾಧ್ಯ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ವೇದ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವ ಆಲೋಚನೆ ಇದೆ. ಇದಕ್ಕೆ ಸೂಕ್ತ ಸ್ಥಳ ಲಭ್ಯವಾಗುತ್ತಿಲ್ಲ. ನಮ್ಮಂತವರಿಗೆ ಅಂತಹ ಸ್ಥಳವನ್ನು ಒದಗಿಸಿಕೊಳ್ಳುವುದೇ ಬಹಳ ಕಷ್ಟವಾಗಿದೆ. ಸ್ಥಳ ಸಿಕ್ಕರೆ ಅವಶ್ಯವಾಗಿ ವೇದ ಅಧ್ಯಯನ ಕೇಂದ್ರ ತೆರೆಯುತ್ತೇವೆ. ಇದಕ್ಕೆ ಬೇಕಾದ ಬೇರೆ ಎಲ್ಲ ವ್ಯವಸ್ಥೆ ಮಠದ ಬಳಿ ಇದೆ’ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ರಾಷ್ಟ್ರ ಸೇವೆ ಮಾಡುತ್ತಿದೆ. ಇಂತಹ ಸಂಘದ ಬಗೆಗಿನ ಆಕ್ಷೇಪ, ನಿಷೇಧದಂತಹ ಮಾತುಗಳು ಸರಿಯಲ್ಲ.-ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.