ADVERTISEMENT

‘ವಂದೇ ಮಾತರಂ’ಗೆ ರಾಷ್ಟ್ರಗೀತೆ ಗೌರವ ಸಿಗಲಿ: ಪ್ರಮೋದ್‌ ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 15:23 IST
Last Updated 11 ಫೆಬ್ರುವರಿ 2026, 15:23 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ದಾವಣಗೆರೆ: ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಗೀತೆಯಾಗಿದ್ದ ‘ವಂದೇ ಮಾತರಂ’ಗೆ ರಾಷ್ಟ್ರಗೀತೆ ‘ಜನಗಣಮನ’ಕ್ಕೆ ಇರುವಷ್ಟೇ ಗೌರವ ಸಿಗಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಅಧಿವೇಶನಗಳಲ್ಲಿ ‘ವಂದೇ ಮಾತರಂ’ ಅನ್ನು ಪೂರ್ಣವಾಗಿ ಹಾಡಲಾಗುತ್ತಿತ್ತು. ದುರ್ಗೆ ಮತ್ತು ಸರಸ್ವತಿಯ ಆರಾಧನೆ, ಮೂರ್ತಿ ಪೂಜೆಯ ವರ್ಣನೆ ಇದೆ ಎಂಬ ಕಾರಣ ನೀಡಿ ಆ ಬಳಿಕ ವಿರೋಧಿಸಲಾಯಿತು. ಮುಸ್ಲಿಂ ಓಲೈಕೆಗಾಗಿ ಗೀತೆಯನ್ನು ತುಂಡರಿಸಲಾಯಿತು’ ಎಂದು ಬುಧವಾರ ಸುದ್ದಿಗಾರರ ಬಳಿ ಆಕ್ರೋಶ ವ್ಯಕ್ತಪಡಿಸಿದರು.

‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಒಂದೂವರೆ ಕೋಟಿ ಹಿಂದೂಗಳು ಬಾಂಗ್ಲಾದಲ್ಲಿ ಅಸಹಾಯಕರಾಗಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕಠಿಣ ಎಚ್ಚರಿಕೆ ನೀಡಿಲ್ಲ. ಕೇಂದ್ರ ಸರ್ಕಾರದ ಈ ಮೌನ ಸರಿಯಲ್ಲ’ ಎಂದರು.

ADVERTISEMENT

‘ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಬಾಂಗ್ಲಾ ವಲಸಿಗರಿದ್ದಾರೆ. ವಸತಿ ಸಚಿವ ಜಮೀರ್ ಅಹಮದ್ ಖಾನ್‌ ಅವರ ಕ್ಷೇತ್ರವೊಂದರಲ್ಲೇ 25 ಸಾವಿರಕ್ಕೂ ಹೆಚ್ಚು ಬಾಂಗ್ಲಾ ಮುಸ್ಲಿಮರಿದ್ದಾರೆ ಎಂಬ ಆರೋಪಗಳಿವೆ. ಇವರನ್ನು ದೇಶದಿಂದ ಹೊರಹಾಕದಿದ್ದರೆ ಕಾಲೊನಿಗಳಿಗೆ ನುಗ್ಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ನಾಯಕರಿಗೆ ಅಧಿಕಾರ ಕೊಟ್ಟಿರುವುದು ಜನಸೇವೆಗೆ ಹೊರತು ಪೊಲೀಸರ ಮೇಲೆ ಹಲ್ಲೆ ನಡೆಸಲು ಅಲ್ಲ. ಮುಂದಿನ ದಿನಗಳಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ
ಪ್ರಮೋದ್‌ ಮುತಾಲಿಕ್‌, ಸಂಸ್ಥಾಪಕ, ಶ್ರೀರಾಮ ಸೇನೆ

‘ಜಾತ್ರೆಯಲ್ಲಿ ‘ಹಲಾಲ್’ ಬೇಡ’

‘ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಹಿಂದೂ ಸಂಪ್ರದಾಯವನ್ನೇ ಪಾಲಿಸಬೇಕು. ದೇವಿಗೆ ಪ್ರಾಣಿಬಲಿ ನೀಡುವಾಗ ಮುಸ್ಲಿಂ ಪದ್ಧತಿಯಾದ ಹಲಾಲ್‌ ಮಾಡಿಸುವುದು ಧರ್ಮವಿರೋಧಿ’ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು.

‘ಭಕ್ತರು ಹಿಂದೂ ಸಂಪ್ರದಾಯದ ಪ್ರಕಾರವೇ ಪ್ರಾಣಿ ಬಲಿ ನೀಡಬೇಕು. ಮುಸ್ಲಿಮರಿಂದ ಹಲಾಲ್‌ ಮಾಡಿಸಿದರೆ ಅಥವಾ ಮುಸ್ಲಿಂ ಪದ್ಧತಿಯಂತೆ ಹಲಾಲ್‌ ಮಾಡಿದರೆ ದೇವಿಯ ಶಾಪ ತಟ್ಟಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.